ವಿಶ್ವಕಪ್ ಫೈನಲ್​ನಲ್ಲಿ ಭಾರತಕ್ಕೆ ನಿರಾಸೆ; ಬಾಂಗ್ಲಾದೇಶ ಕಿರಿಯರ ತಂಡಕ್ಕೆ ಚೊಚ್ಚಲ ಕಿರೀಟ

Bangla 9Feb 20
Published on

ಪಾಟ್​ಚೇಫ್​ಸ್ಟ್ರೋಮ್​ (ದಕ್ಷಿಣಆಫ್ರಿಕಾ): ಕೊನೆಯ 21 ರನ್​ಗಳಿಗೆ ಪ್ರಮುಖ ಏಳು ವಿಕೆಟ್ ಕಳೆದುಕೊಂಡು ದಯನೀಯ ವೈಫಲ್ಯ ಎದುರಿಸಿದ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್​ನ ಫೈನಲ್​ನಲ್ಲಿ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಶರಣಾಗಿದೆ. 5ನೇ ಬಾರಿಗೆ ಟ್ರೋಫಿ ಜಯಿಸುವ ಫೇವರಿಟ್ ತಂಡವಾಗಿ ಕಣಕ್ಕಿಳಿದಿದ್ದ ಪ್ರಿಯಂ ಗಾರ್ಗ್ ನೇತೃತ್ವದ ಭಾರತ ತಂಡ, ಡಕ್​ವರ್ತ್-ಲೂಯಿಸ್ ನಿಯಮದ ಅನ್ವಯ 3 ವಿಕೆಟ್​ಗಳಿಂದ ಬಾಂಗ್ಲಾಗೆ ಮಣಿದು ನಿರಾಸೆ ಎದುರಿಸಿತು. ಇನ್ನೊಂದೆಡೆ ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್​ಗೇರಿದ್ದ ಬಾಂಗ್ಲಾದೇಶ ಟ್ರೋಫಿಗೆ ಮುತ್ತಿಟ್ಟು ಸಂಭ್ರಮಿಸಿತು.

ಸೆನ್​ವೆಸ್ ಪಾರ್ಕ್​ನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಅಕ್ಬರ್ ಅಲಿ ಬೌಲಿಂಗ್ ಆಯ್ದುಕೊಂಡರು. ಶನಿವಾರ ರಾತ್ರಿ ಮಳೆ ಸುರಿದ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಮಾಡಲು ಪರದಾಟ ನಡೆಸಿದ ಭಾರತ ತಂಡ, ಪ್ರಮುಖ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ (88 ರನ್, 121 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನಡುವೆಯೂ ಕೆಳ ಕ್ರಮಾಂಕದಲ್ಲಿ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡು 47.2 ಓವರ್​ಗಳಲ್ಲಿ 177 ರನ್​ಗೆ ಆಲೌಟ್ ಆಯಿತು. ಪ್ರತಿಯಾಗಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ (30ಕ್ಕೆ 4) ಸಾಹಸಿಕ ಬೌಲಿಂಗ್​ನೊಂದಿಗೆ ಬಾಂಗ್ಲಾದೇಶ ತಂಡಕ್ಕೆ ನಿಯಂತ್ರಣ ಹೇರುವಲ್ಲಿ ಭಾರತ ಯಶ ಕಂಡಿತ್ತು. ಆದರೆ, ಆರಂಭಿಕ ಆಟಗಾರ ಪರ್ವೆಜ್ ಹುಸೇನ್ ಎಮೋನ್ (47ರನ್, 79 ಎಸೆತ, 7 ಬೌಂಡರಿ) ಹಾಗೂ ನಾಯಕ ಅಕ್ಬರ್ ಅಲಿ (42* ರನ್, 76 ಎಸೆತ, 4 ಬೌಂಡರಿ, 1 ಸಿಕ್ಸರ್) ಎಚ್ಚರಿಕೆಯ ಬ್ಯಾಟಿಂಗ್​ನಿಂದ ತಂಡ ಗೆಲುವಿನ ದಡ ಸೇರಿತು. 41 ಓವರ್​ಗಳಲ್ಲಿ 7 ವಿಕೆಟ್​ಗೆ 163 ರನ್ ಬಾರಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಬಳಿಕ ಬಾಂಗ್ಲಾಕ್ಕೆ ಡಕ್​ವರ್ತ್-ಲೂಯಿಸ್ ನಿಯಮದ ಅನ್ವಯ 46 ಓವರ್​ಗಳಲ್ಲಿ 170 ರನ್​ಗಳ ಪರಿಷ್ಕೃತ ಗುರಿಯನ್ನು ನಿಗದಿ ಮಾಡಲಾಗಿತ್ತು. ಬಾಂಗ್ಲಾದೇಶ 42.1 ಓವರ್​ಗಳ್ಲಲಿ 7 ವಿಕೆಟ್​ಗೆ 170 ರನ್ ಬಾರಿಸಿ ಚಾಂಪಿಯನ್ ಎನಿಸಿಕೊಂಡಿತು. ಅಕ್ಬರ್ ಅಲಿ ಹಾಗೂ ರಕೀಬುಲ್ ಹಸನ್ (9) ಇನ್ನೂ 23 ಎಸೆತಗಳು ಇರುವಂತೆ ತಂಡಕ್ಕೆ ಗೆಲುವು ತಂದರು.

ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ

ಭಾರತದ ಬ್ಯಾಟಿಂಗ್​ನಲ್ಲಿ ಮತ್ತೊಮ್ಮೆ ಗಮನಸೆಳೆದಿದ್ದು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್. ಬಾಂಗ್ಲಾದೇಶದ ಶರೀಫುಲ್ ಇಸ್ಲಾಂ (31ಕ್ಕೆ 2) ಹಾಗೂ ತಂಜೀಮ್ ಹಸನ್ ಶಕೀಬ್ (28ಕ್ಕೆ 2) ನೇತೃತ್ವದ ಬೌಲಿಂಗ್ ಮುಂದೆ ಭಾರತ ಒಂದೊಂದು ರನ್ ಗಳಿಸಲು ಪರದಾಡುತ್ತಿದ್ದ ವೇಳೆ ಯಶಸ್ವಿ ಜೈಸ್ವಾಲ್ ತಾಳ್ಮೆಯ ಇನಿಂಗ್ಸ್ ಆಡುವ ಮೂಲಕ ತಂಡದ ಮೊತ್ತವನ್ನು 175ರ ಗಡಿ ದಾಟಿಸಿದ್ದರು. ಮೊದಲ 10 ಓವರ್​ಗಳ ಆಟದಲ್ಲಿ ಕೇವಲ 23 ರನ್ ಬಾರಿಸಿದ್ದ ಭಾರತ ತಂಡ ಆ ನಂತರ ಚೇತರಿಸಿಕೊಳ್ಳಲಿಲ್ಲ. 2ನೇ ವಿಕೆಟ್​ಗೆ ಯಶಸ್ವಿ ಜೈಸ್ವಾಲ್ ಹಾಗೂ ತಿಲಕ್ ವರ್ಮ (38 ರನ್, 65 ಎಸೆತ, 3 ಬೌಂಡರಿ) 23.2 ಓವರ್​ಗಳಲ್ಲಿ 93 ರನ್ ಜತೆಯಾಟವಾಡಿದರು. ಜೈಸ್ವಾಲ್ ಔಟಾದ ಬಳಿಕ ಇತರ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ನೀಡಿದರು. ನಾಯಕ ಪ್ರಿಯಂ ಗಾರ್ಗ್ (7) ಅಲ್ಪ ಮೊತ್ತಕ್ಕೆ ಔಟಾದರು. ಧ್ರುವ ಜುರೆಲ್ ಹಾಗೂ ಅಥರ್ವ ಅಂಕೋಲ್ಕರ್ (3) ಜೋಡಿ ಕೆಟ್ಟ ರೀತಿಯಲ್ಲಿ ರನೌಟ್ ಆಗಿ ಬೇರ್ಪಟ್ಟಿತು.

45 ಎಸೆತಗಳ ಕೆಟ್ಟ ಆಟ!

ಭಾರತದ ಬ್ಯಾಟಿಂಗ್​ನ ಕೊನೇ ಹಂತದಲ್ಲಿ 45 ಎಸೆತಗಳ ಕೆಟ್ಟ ಆಟ ಸಾಧಾರಣ ಮೊತ್ತಕ್ಕೆ ತಂಡ ಕುಸಿಯುವಂತೆ ಮಾಡಿತು. ಬಾಂಗ್ಲಾದೇಶದ ಬೌಲರ್​ಗಳ ತಂತ್ರಗಾರಿಕೆಗೆ ಎಡವಿ ಬಿದ್ದ ಭಾರತದ ಬ್ಯಾಟ್ಸ್​ಮನ್​ಗಳು 21 ರನ್​ಗೆ ಕೊನೇ 7 ವಿಕೆಟ್ ಕಳೆದುಕೊಂಡರು. ಅಂದಾಜು ಮಾಡಿದ ಮೊತ್ತಕ್ಕೆ 50 ರನ್​ಗಳನ್ನು ಭಾರತ ಕಡಿಮೆ ಪೇರಿಸಿದ್ದು, ಒಟ್ಟಾರೆಯಾಗಿ ತಂಡದ ಹಿನ್ನಡೆಯಾಗಿ ಪರಿಣಮಿಸಿತು.

ಗೆಲುವು ತಪ್ಪಿಸಿದ ಇತರ ರನ್

ಭಾರತ ಬರೋಬ್ಬರಿ 33 ರನ್​ಗಳನ್ನು ಇತರ ರೂಪದಲ್ಲಿ ನೀಡಿತು. ಇದರಲ್ಲಿ 19 ವೈಡ್​ಗಳಾಗಿದ್ದರೆ, 2 ನೋಬಾಲ್, 4 ಲೆಗ್​ಬೈ ಹಾಗೂ 8 ರನ್​ಗಳನ್ನು ಬೈ ರೂಪದಲ್ಲಿ ನೀಡಿತು. ಮೊದಲೇ ಅಲ್ಪ ಮೊತ್ತ ಪೇರಿಸಿದ್ದ ಭಾರತಕ್ಕೆ 33 ಇತರ ರನ್​ಗಳೇ ಹಿನ್ನಡೆಯಾದವು.

ಉಭಯ ತಂಡಗಳ ಆಟಗಾರರ ಜಟಾಪಟಿ!

ಗೆಲುವಿನ ರನ್ ಬಾರಿಸಿದ ಬೆನ್ನಲ್ಲಿಯೇ ಬಾಂಗ್ಲಾದೇಶ ತಂಡದ ಆಟಗಾರರು ಮೈದಾನಕ್ಕೆ ಇಳಿದು ಭಾರತದ ಆಟಗಾರರನ್ನು ಕೆಣಕಲು ಆರಂಭಿಸಿದ್ದರಿಂದ ಕೊನೆಯಲ್ಲಿ ಸಣ್ಣ ಜಟಾಪಟಿ ಕೂಡ ನಡೆಯಿತು. ಇಡೀ ಪಂದ್ಯದಲ್ಲಿ ಎರಡೂ ತಂಡಗಳು ಸಾಕಷ್ಟು ಬಾರಿ ಮಾತಿನಿಂದ ಕೆಣಕಿದ್ದವು. ಪಂದ್ಯ ಗೆದ್ದ ಬಳಿಕವೂ ಬಾಂಗ್ಲಾದ ಆಟಗಾರರು ಭಾರತ ತಂಡದ ಆಟಗಾರರನ್ನು ಕೆಣಕಿದರು.

01: ಯಾವುದೇ ಮಾದರಿಯ ಕ್ರಿಕೆಟ್​ನಲ್ಲಿ ಬಾಂಗ್ಲಾದೇಶ ತಂಡದ ಮೊಟ್ಟಮೊದಲ ವಿಶ್ವಕಪ್ ಇದಾಗಿದೆ.

ಭಾರತ: 47.2 ಓವರ್​ಗಳಲ್ಲಿ 177 ಯಶಸ್ವಿ ಜೈಸ್ವಾಲ್ ಸಿ ಹಸನ್ ಬಿ ಇಸ್ಲಾಂ 88 ದಿವ್ಯಾಂಶ್ ಸಿ ಹಸನ್ ಜಾಯ್ ಬಿ ಅವಿಷೇಕ್ 2 ತಿಲಕ್ ವರ್ಮ ಸಿ ಇಸ್ಲಾಂ ಬಿ ತಂಜಿಮ್38 ಪ್ರಿಯಂ ಗಾರ್ಗ್ ಸಿ ತಂಜಿಮ್ ಬಿ ರಕಿಬುಲ್ 7 ಧ್ರುವ ಜುರೆಲ್ ರನೌಟ್ (ಹುಸೇನ್/ಅಕ್ಬರ್) 22 ಸಿದ್ಧಾರ್ಥ್ ವೀರ್ ಎಲ್​ಬಿಡಬ್ಲ್ಯು ಬಿ ಇಸ್ಲಾಂ 0 ಅಥರ್ವ ಅಂಕೋಲ್ಕರ್ ಬಿ ಅವಿಷೇಕ್ ದಾಸ್ 3 ರವಿ ಬಿಷ್ಣೋಯಿ ರನೌಟ್ (ಇಸ್ಲಾಂ) 2 ಸುಶಾಂತ್ ಮಿಶ್ರಾ ಸಿ ಇಸ್ಲಾಂ ಬಿ ತಂಜಿಮ್3 ಕಾರ್ತಿಕ್ ತ್ಯಾಗಿ ಸಿ ಅಕ್ಬರ್ ಬಿ ಅವಿಷೇಕ್ 0 ಆಕಾಶ್ ಸಿಂಗ್ ಔಟಾಗದೆ 1 ಇತರ: 11. ವಿಕೆಟ್ ಪತನ: 1-9, 2-103, 3-114, 4-156, 5-156, 6-168, 7-170, 8-170, 9-172. ಬೌಲಿಂಗ್: ಶರೀಫುಲ್ ಇಸ್ಲಾಂ 10-1-31-2, ತಂಜಿಮ್ ಹಸನ್ ಶಕೀಬ್ 8.2-2-28-2, ಅವಿಷೇಕ್ ದಾಸ್ 9-0-40-3, ಶಮೀಮ್ ಹುಸೇನ್ 6-0-36-0, ರಕಿಬುಲ್ ಹಸನ್ 10-1-29-1, ತೌಹಿದ್ ಹೃದಯ್ 4-0-12-0. ಬಾಂಗ್ಲಾದೇಶ: 42.1 ಓವರ್​ಗಳಲ್ಲಿ 7 ವಿಕೆಟ್​ಗೆ 170 (ಪರಿಷ್ಕೃತ ಗುರಿ: 46 ಓವರ್​ಗಳಲ್ಲಿ 170) ಪರ್ವೆಜ್ ಹುಸೇನ್ ಸಿ ಆಕಾಶ್ ಬಿ ಜೈಸ್ವಾಲ್ 47 ತಂಜಿದ್ ಹಸನ್ ಸಿ ಕಾರ್ತಿಕ್ ಬಿ ಬಿಷ್ಣೋಯಿ 17 ಹಸನ್ ಜಾಯ್ ಬಿ ರವಿ ಬಿಷ್ಣೋಯಿ 8 ತೌಹಿದ್ ಹೃದಯ್ ಎಲ್​ಬಿಡಬ್ಲ್ಯು ಬಿ ಬಿಷ್ಣೋಯಿ 0 ಶಹದತ್ ಹುಸೇನ್ ಸ್ಟಂಪ್ ಜುರೆಲ್ ಬಿ ಬಿಷ್ಣೋಯಿ 1 ಅಕ್ಬರ್ ಅಲಿ ಅಜೇಯ 43 ಶಮೀಮ್ ಹುಸೇನ್ ಸಿ ಜೈಸ್ವಾಲ್ ಬಿ ಸುಶಾಂತ್ 7 ಅವಿಷೇಕ್ ದಾಸ್ ಸಿ ಕಾರ್ತಿಕ್ ಬಿ ಸುಶಾಂತ್ 5 ರಕಿಬುಲ್ ಹಸನ್ ಔಟಾಗದೆ 9 ಇತರ: 33. ವಿಕೆಟ್ ಪತನ: 1-50, 2-62, 3-62, 4-65, 5-85, 6-102, 7-143. ಬೌಲಿಂಗ್: ಕಾರ್ತಿಕ್ ತ್ಯಾಗಿ 10-2-33-0, ಸುಶಾಂತ್ ಮಿಶ್ರಾ 7-0-25-2, ಆಕಾಶ್ ಸಿಂಗ್ 8-1-33-0, ರವಿ ಬಿಷ್ಣೋಯಿ 10-3-30-4, ಅಥರ್ವ ಅಂಕೋಲ್ಕರ್ 4.1-0-22-0, ಯಶಸ್ವಿ ಜೈಸ್ವಾಲ್ 3-0-15-1.

07: ಬಾಂಗ್ಲಾದೇಶ ಕಿರಿಯರ ವಿಶ್ವಕಪ್ ಕಿರೀಟ ಜಯಿಸಿದ 7ನೇ ತಂಡವೆನಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net