

ಗುವಾಹಟಿ: ಹೊಸ ವರ್ಷದ ಸಂಭ್ರಮಕ್ಕಾಗಿ ಉತ್ತಮ ರೀತಿಯ ವಿಶ್ರಾಂತಿ ಪಡೆದುಕೊಂಡಿರುವ ಟೀಮ್ ಇಂಡಿಯಾ, ಭಾನುವಾರದಿಂದ ತನ್ನ 2020ರ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯ ಸವಾಲಿಗೆ ಅಣಿಯಾಗಲಿದೆ. ಜನವರಿ 5 ರಂದು ಗುವಾಹಟಿಯ ಬರ್ಸಾಪುರ ಸ್ಟೇಡಿಯಂನಲ್ಲಿ ವರ್ಷದ ಮೊದಲ ಪಂದ್ಯ ಆಡಲಿದೆ. ಲಸಿತ್ ಮಾಲಿಂಗ ನೇತೃತ್ವದ ಪ್ರವಾಸಿ ಶ್ರೀಲಂಕಾ ತಂಡ ಗುರುವಾರ ನಾಲ್ಕು ಗಂಟೆಯ ವೇಳೆ ಗುವಾಹಟಿಗೆ ಆಗಮಿಸಿದೆ. ಶುಕ್ರವಾರ ಬೆಳಗ್ಗೆ ಭಿನ್ನ-ಭಿನ್ನ ತಂಡಗಳಲ್ಲಿ ಭಾರತ ಆಟಗಾರರು ಗುವಾಹಟಿಯಲ್ಲಿ ಸೇರಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಟಿ20 ವಿಶ್ವಕಪ್ ನಡೆಯ ಲಿರುವ ವರ್ಷ ಇದಾಗಿರುವ ಕಾರಣ, ಭಾರತ ತಂಡ ಹಾಲಿ ವರ್ಷ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲಿದೆ. ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಟಿ20 ವಿಶ್ವಕಪ್ಗೆ ಭಾರತದ ಸಿದ್ಧತೆಗಳು ಆರಂಭವಾಗಲಿವೆ. ಸರಣಿಯ 2ನೇ ಪಂದ್ಯ ಇಂದೋರ್ (ಜ.7) ಮತ್ತು 3ನೇ ಪಂದ್ಯ ಪುಣೆಯಲ್ಲಿ (ಜ.10) ನಡೆಯಲಿದೆ.
ಎರಡೂ ತಂಡಕ್ಕೆ ಗರಿಷ್ಠ ಮಟ್ಟದ ಭದ್ರತೆ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಅಸ್ಸಾಂನಲ್ಲಿ ಪ್ರತಿಭಟನೆ ನಡೆಯುತ್ತಿದೆ ಆ ಕಾರಣಕ್ಕಾಗಿ ಎರಡೂ ತಂಡಕ್ಕೆ ಗರಿಷ್ಠ ಮಟ್ಟದ ಭದ್ರತೆ ನೀಡಲಾಗಿದೆ. ‘ಕೆಲ ದಿನಗಳ ಹಿಂದೆ ಪ್ರತಿಭಟನೆ ತೀವ್ರವಾಗಿತ್ತು. ಆದರೆ, ಈಗ ಪರಿಸ್ಥಿತಿ ಹತೋಟಿಯಲ್ಲಿದೆ. ಸ್ಟೇಡಿಯಂ ಸೇರಿದಂತೆ ಭದ್ರತೆಯ ಇನ್ನಿತರ ವಿಚಾರಗಳನ್ನು ಪೊಲೀಸರಿಗೆ ನೀಡಿದ್ದೇವೆ. ಶುಕ್ರವಾರ ಬೆಳಗ್ಗೆ ಶ್ರೀಲಂಕಾ ತಂಡ ಅಭ್ಯಾಸ ನಡೆಸಲಿದ್ದರೆ, ಸಂಜೆಯ ವೇಳೆಗ ಭಾರತ ಅಭ್ಯಾಸ ನಡೆಸಲಿದೆ ಎಂದು ರೋಮಿ ದತ್ತಾ ತಿಳಿಸಿದ್ದಾರೆ.
ಜನವರಿ 10ರಿಂದ ಗುವಾಹಟಿಯಲ್ಲಿ ಖೇಲೋ ಇಂಡಿಯಾ ಗೇಮ್್ಸ ಆರಂಭವಾಗಲಿದೆ. ಆ ನಿಟ್ಟಿನಲ್ಲಿ ಮುಂದಿನ ವಾರ ಅಸ್ಸಾಂನಲ್ಲಿ ಕ್ರೀಡಾ ಹಬ್ಬ. 39, 500 ಪ್ರೇಕ್ಷಕರ ಸಾಮರ್ಥ್ಯದ ಬರ್ಸಾಪುರ ಸ್ಟೇಡಿಯಂನಲ್ಲಿ ಈವರೆಗೂ 27 ಸಾವಿರ ಟಿಕೆಟ್ಗಳು ಮಾರಾಟವಾಗಿದೆ. ಜನರು ಕ್ರಿಸ್ವುಸ್ ಹಾಗೂ ಹೊಸ ವರ್ಷದ ಸಂಭ್ರಮದಲ್ಲಿದ್ದರು. ಕೊನೆ ಹಂತದಲ್ಲಿ ಟಿಕೆಟ್ಗೆ ಮತ್ತಷ್ಟು ಬೇಡಿಕೆ ಬರುವ ಸಾಧ್ಯತೆ ಇದೆ.
ನವದೆಹಲಿ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಎಲ್ಲ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಬಹುದು ಎಂದು ವೆಸ್ಟ್ ಇಂಡೀಸ್ನ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಅಂತಾರಾಷ್ಟ್ರೀಯ ತಂಡಗಳು ಐಸಿಸಿ ಟೂರ್ನಿಯಲ್ಲಿ ಭಾರತವನ್ನೇ ಪ್ರಧಾನ ಗುರಿಯನ್ನಾಗಿರಿಸಿಕೊಂಡು ಆಡುತ್ತವೆ. ಭಾರತ ತಂಡ ತಾನು ಆಡುವ ಎಲ್ಲ ಐಸಿಸಿ ಟೂರ್ನಿಗಳನ್ನು ಗೆಲ್ಲುವಂಥ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿದೆ ಎಂದು 50 ವರ್ಷದ ಎಡಗೈ ಬ್ಯಾಟ್ಸ್ಮನ್ ಹೇಳಿದ್ದಾರೆ.
ಐಸಿಸಿ ಟೂರ್ನಿಯ ಕ್ವಾರ್ಟರ್ಫೈನಲ್, ಸೆಮಿಫೈನಲ್ ಅಥವಾ ಫೈನಲ್ ಇವುಗಳಲ್ಲಿ ಯಾವುದಾದರೂ ಒಂದು ಹಂತದಲ್ಲಿ ಭಾರತವನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ ಎನ್ನುವುದು ಎಲ್ಲ ತಂಡಗಳಿಗೂ ತಿಳಿದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಹಾಗೂ ಏಕದಿನದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದರೂ, ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲುವುದು ಸಾಧ್ಯವಾಗಿಲ್ಲ. 2013ರಲ್ಲಿ ಎಂಎಸ್ ಧೋನಿ ಸಾರಥ್ಯದಲ್ಲಿ, ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದು ಭಾರತ ಗೆದ್ದ ಕೊನೆಯ ಐಸಿಸಿ ಟ್ರೋಫಿ ಎನಿಸಿದೆ.