

ಪುಣೆ: ಸಂಘಟಿತ ನಿರ್ವಹಣೆಯ ಬಲದೊಂದಿಗೆ ತವರಿನಲ್ಲಿ ಪ್ರಶಸ್ತಿ ಜಯಿಸುವ ಕನಸಿನ ಓಟವನ್ನು ಮುಂದುವರಿಸಿರುವ ಆತಿಥೇಯ ಭಾರತ ತಂಡ, 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೆ ವಿಸ್ತರಿಸಿದೆ. ಚೇಸಿಂಗ್ ಮಾಸ್ಟರ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (103* ರನ್, 97 ಎಸೆತ, 6 ಬೌಂಡರಿ, 4 ಸಿಕ್ಸರ್) ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ 48ನೇ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯೊಂದಿಗೆ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ರೋಹಿತ್ ಶರ್ಮ ಪಡೆ ಟೂರ್ನಿಯಲ್ಲಿ ಅಜೇಯವಾಗಿ ಉಳಿಯಿತು.
ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಲಿಟನ್ ದಾಸ್ (66 ರನ್, 82 ಎಸೆತ, 7 ಬೌಂಡರಿ) ಹಾಗೂ ತಂಜಿದ್ ಹಸನ್ (51 ರನ್, 43 ಎಸೆತ, 5 ಬೌಂಡರಿ, 3 ಸಿಕ್ಸರ್) ಒದಗಿಸಿದ ಉತ್ತಮ ಆರಂಭದ ಬಳಿಕ ಭಾರತದ ಬಿಗಿ ದಾಳಿಗೆ ಕುಸಿದು 8 ವಿಕೆಟ್‌ಗೆ 256 ರನ್‌ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಸರಾಗ ಚೇಸಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮಾನ್ ಗಿಲ್ (53 ರನ್, 55 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಆಟದ ನೆರವಿನಿಂದ 41.3 ಓವರ್‌ಗಳಲ್ಲಿ 3 ವಿಕೆಟ್‌ಗೆ 261 ರನ್‌ಗಳಿಸಿ, ಇನ್ನೂ 51 ಎಸೆತ ಬಾಕಿಯಿರುವಂತೆಯೇ ಗೆದ್ದು ಬೀಗಿತು. ಇದರ ನಡುವೆಯೂ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ.
ಚೇಸಿಂಗ್‌ಗೆ ವಿರಾಟ್ ಬಲ: ರೋಹಿತ್ ಶರ್ಮ (48) ಬಿರುಸಿನ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿದರು. ಶುಭಮಾನ್ ಗಿಲ್ ಜತೆಗೂಡಿ ಮೊದಲ ವಿಕೆಟ್‌ಗೆ 88 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟರು. ಬಳಿಕ ಶುಭಮಾನ್ ಹಾಗೂ ವಿರಾಟ್ ಕೊಹ್ಲಿ 2ನೇ ವಿಕೆಟ್‌ಗೆ 44 ರನ್ ಪೇರಿಸಿದರು. ಚೊಚ್ಚಲ ವಿಶ್ವಕಪ್ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಶುಭಮಾನ್ ಔಟಾದರು. ಶ್ರೇಯಸ್ ಅಯ್ಯರ್ (19) ಹೆಚ್ಚು ಹೊತ್ತು ನಿಲ್ಲಿಲಲ್ಲ. ಬಳಿಕ ಕೊಹ್ಲಿ ಜತೆಗೂಡಿದ ವಿಕೆಟ್ ಕೀಪರ್-ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ (34*) ಮುರಿಯದ 4ನೇ ವಿಕೆಟ್‌ಗೆ 74 ಎಸೆತಗಳಲ್ಲಿ 83 ರನ್ ಸಿಡಿಸಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಭಾರತದ ಗೆಲುವಿಗೆ ಹಾಗೂ ವಿರಾಟ್ ಶತಕಕ್ಕೆ 20 ರನ್ ಅಗತ್ಯವಿದ್ದಾಗ, ಕೆಎಲ್ ರಾಹುಲ್ ನಿಸ್ವಾರ್ಥ ಆಟವಾಡಿ ಕ್ರೀಡಾಭಿಮಾನಿಗಳ ಹೃದಯ ಗೆದ್ದರು. ಗೆಲುವಿಗೆ 2 ರನ್ ಅಗತ್ಯವಿದ್ದಾಗ 97 ರನ್ ಗಳಿಸಿದ್ದ ಕೊಹ್ಲಿ, ಸಿಕ್ಸರ್ ಸಿಡಿಸುವ ಮೂಲಕ 97 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶ್ವಕಪ್ ಚೇಸಿಂಗ್‌ನಲ್ಲಿ ಕೊಹ್ಲಿಗೆ ಇದು ಮೊದಲ ಸೆಂಚುರಿ ಎನಿಸಿದೆ.