ಹರ್ಮಾನ್‌ಪ್ರೀತ್ ಕೌರ್ ಪಡೆ 2024ರ ಅಭಿಯಾನ ಮುಕ್ತಾಯ: ವಿಂಡೀಸ್ ಎದುರು ಸರಣಿ ಕ್ಲೀನ್‌ಸ್ವೀಪ್

New Project
Published on

ವಡೋದರ: ಅನುಭವಿ ದೀಪ್ತಿ ಶರ್ಮ (39* ರನ್, 48 ಎಸೆತ, 3 ಬೌಂಡರಿ,1 ಸಿಕ್ಸರ್, 31ಕ್ಕೆ 6 ವಿಕೆಟ್) ಆಲ್ರೌಂಡ್ ನಿರ್ವಹಣೆಯ ನೆರವಿನಿಂದ ಭಾರತ ತಂಡ ಮಹಿಳಾ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್ ಸಾಧಿಸಿದೆ.

ನೂತನ ಕೋಟಂಬಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್‌ಗೆ ಇಳಿಯಿತು. ಚಿನ್ಲೆ ಹೆನ್ರಿ (61 ರನ್, 72 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಹೊರತಾಗಿಯೂ ವೇಗಿ ರೇಣುಕಾ ಸಿಂಗ್ (29ಕ್ಕೆ 4) ಹಾಗೂ ದೀಪ್ತಿ ಶರ್ಮ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ 38.5 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ಸಾಧಾರಣ ಮೊತ್ತ ಬೆನ್ನತ್ತಿದ್ದ ಭಾರತ 73 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜೆಮೀಮಾ ರೋಡ್ರಿಗಸ್ (29) ಹಾಗೂ ದೀಪ್ತಿ ಶರ್ಮ 5ನೇ ವಿಕೆಟ್‌ಗೆ ಕಲೆಹಾಕಿದ 56 ರನ್‌ಗಳ ಜತೆಯಾಟದ ನೆರವಿನಿಂದ ಭಾರತ 28.2 ಓವರ್‌ಗಳಲ್ಲಿ 5 ವಿಕೆಟ್‌ಗೆ 167 ರನ್‌ಗಳಿಸಿತು. ಈ ಮೂಲಕ 2024ರ ಅಭಿಯಾನವನ್ನು ಭಾರತ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಭಾರತ ಪರ ತನುಜಾ ಕನ್ವರ್ ಏಕದಿನಕ್ಕೆ ಪದಾರ್ಪಣೆ ಮಾಡಿದರು.

ವೆಸ್ಟ್ ಇಂಡೀಸ್: 38.5 ಓವರ್‌ಗಳಲ್ಲಿ 162 (ಕ್ಯಾಂಪ್‌ಬೆಲ್ಲೆ 46, ಡಾಟಿನ್ 5, ಹೆನ್ರಿ 61, ಅಲೆನ್ನೆ 21, ಮ್ಯಾಡಿ 9, ದೀಪ್ತಿ ಶರ್ಮ 31ಕ್ಕೆ 6, ರೇಣುಕಾ ಸಿಂಗ್ 29ಕ್ಕೆ 4). ಭಾರತ: 28.2 ಓವರ್‌ಗಳಲ್ಲಿ 5 ವಿಕೆಟ್‌ಗೆ 167 (ಸ್ಮತಿ 4, ಪ್ರತೀಕಾ 18, ಹರ್ಲಿನ್ 1, ಹರ್ಮಾನ್‌ಪ್ರೀತ್ 32, ಜೆಮೀಮಾ 29, ದೀಪ್ತಿ 39*, ರಿಚಾ 23*, ಡಾಟಿನ್ 27ಕ್ಕೆ 1).

ಪಂದ್ಯಶ್ರೇಷ್ಠ: ದೀಪ್ತಿ ಶರ್ಮ, ಸರಣಿ ಶ್ರೇಷ್ಠ: ರೇಣುಕಾ ಸಿಂಗ್ (10 ವಿಕೆಟ್).

1. ದೀಪ್ತಿ ಶರ್ಮ (3) ಭಾರತ ಪರ ಏಕದಿನದಲ್ಲಿ ಗರಿಷ್ಠ ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿದರು. ಏಕ್ತಾ ಬಿಷ್ತ್ (2) ಹಿಂದಿನ ಸಾಧಕಿ.

12. ಭಾರತ ಮಹಿಳಾ 12ನೇ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಕ್ಲೀನ್‌ಸ್ವೀಪ್ ಸಾಧಿಸಿ, ಇಂಗ್ಲೆಂಡ್ ದಾಖಲೆಯನ್ನು ಸರಿಗಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net