

ನವದೆಹಲಿ: ಮಹಾಮಾರಿ ಕರೊನಾ ಸೋಂಕಿನ ಭಯದಿಂದ ಇಡೀ ಜಗತ್ತೇ ತತ್ತರಿಸಿರುವ ನಡುವೆ ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಿಗದಿಯಂತೆ ನಡೆಯುವ ಬಗ್ಗೆ ಅನುಮಾನ ಹೆಚ್ಚುತಲೇ ಇದೆ. ಆದರೂ, ಒಂದು ವೇಳೆ ಟೋಕಿಯೊ ಒಲಿಂಪಿಕ್ಸ್ ನಿಗದಿಯಂತೆಯೇ ನಡೆದರೆ ಭಾರತದ ಕ್ರೀಡಾ ತಂಡ ಸ್ಪರ್ಧಿಸುವುದು ನಿಶ್ಚಿತ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಹೇಳಿದೆ.
ಟೋಕಿಯೊ ಗೇಮ್್ಸ ಸಂಘಟಕರು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಈಗಾಗಲೆ ನಿಗದಿಯಂತೆಯೇ ಜುಲೈ 24ರಿಂದ ಆಗಸ್ಟ್ 9ರವರೆಗೆ ಒಲಿಂಪಿಕ್ಸ್ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಕರೊನಾ ಸೋಂಕು ಜಗತ್ತಿನೆಲ್ಲೆಡೆ ಜನರ ಆರೋಗ್ಯಕ್ಕೆ ಮಾರಕವಾಗಿರುವ ಮತ್ತು ಆರ್ಥಿಕ ಸ್ಥಿತಿಯನ್ನೇ ಹದಗೆಡಿಸಿರುವ ನಡುವೆಯೂ, ಒಲಿಂಪಿಕ್ಸ್ ಬಗ್ಗೆ ಯಾವುದೇ ನಿಷ್ಠುರ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಐಒಸಿ ಇತ್ತೀಚೆಗೆ ಪ್ರಕಟಿಸಿತ್ತು. ಇದಕ್ಕೆ ವಿಶ್ವದೆಲ್ಲೆಡೆಯ ಹಲವು ಕ್ರೀಡಾಪಟುಗಳು ಈಗಾಗಲೆ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ, ಐಒಸಿಯ ಈ ನಿರ್ಧಾರಕ್ಕೆ ಐಒಎ ಬೆಂಬಲ ವ್ಯಕ್ತಪಡಿಸಿದೆ. ಇದರಿಂದಾಗಿ ಭಾರತವೂ ಕ್ರೀಡಾಪಟುಗಳ ಜೀವವನ್ನು ಪಣಕ್ಕಿಟ್ಟು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಸಿದ್ಧವಾದಂತಾಗಿದೆ.
‘ಕರೊನಾ ಜಗತ್ತನ್ನೇ ಕಂಗೆಡಿಸಿರಬಹುದು. ಆದರೆ ಮುಂದಿನ ಒಂದೆರಡು ತಿಂಗಳಲ್ಲಿ ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ವಿಶ್ವಾಸವಿದೆ. ಚೀನಾದಲ್ಲಿ ಈಗಾಗಲೆ ಈ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಒಲಿಂಪಿಕ್ಸ್ ಕೂಡ ಯಾವುದೇ ಅಡೆತಡೆ ಇಲ್ಲದೆ ನಡೆಯುವ ನಿರೀಕ್ಷೆಯಲ್ಲಿದ್ದೇವೆ. ಒಲಿಂಪಿಕ್ಸ್ ನಡೆದರೆ ಯಾವುದೇ ಭೀತಿಯ ನಡುವೆಯೂ ನಾವು ಸ್ಪರ್ಧಿಸಲಿದ್ದೇವೆ’ ಎಂದು ಐಒಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕಿನ ಭೀತಿಯಿಂದ ಭಾರತದ ಕ್ರೀಡಾಪಟುಗಳ ಸಿದ್ಧತೆಗೆ ಹಿನ್ನಡೆ ಆಗಿದ್ದರೂ, ಈ ಬಾರಿ ಒಲಿಂಪಿಕ್ಸ್ನಲ್ಲಿ ಎರಡಂಕಿ ಪದಕಗಳನ್ನು ಬಾಚಿಕೊಳ್ಳುವ ವಿಶ್ವಾಸವಿದೆ ಎಂದು ಐಒಎ ಹೇಳಿದೆ. -ಏಜೆನ್ಸೀಸ್
ಜ್ಯೋತಿ ಜಪಾನ್ಗೆ ಹಸ್ತಾಂತರ
ಗ್ರೀಸ್ನ ಅಥೆನ್ಸ್ನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬೆಳಗಿರುವ ಒಲಿಂಪಿಕ್ಸ್ ಜ್ಯೋತಿಯನ್ನು ಗುರುವಾರ ಆತಿಥೇಯ ಜಪಾನ್ಗೆ ಹಸ್ತಾಂತರಿಸಲಾಗಿದೆ. ಕರೊನಾ ಭೀತಿಯ ನಡುವೆ ಖಾಲಿ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ ಲೆಫ್ಟೆರಿಸ್ ಪೆಟ್ರೋನಿಯಸ್ ಜ್ಯೋತಿಯೊಂದಿಗೆ ಒಂದು ಸುತ್ತು ಬಂದರು. ಬಳಿಕ ಒಲಿಂಪಿಕ್ಸ್ ಪೋಲ್ವಾಲ್ಟ್ ಚಾಂಪಿಯನ್ ಕ್ಯಾಥರಿನಾ ಸ್ಟೆಫಾನಿಡಿ, ಕಡಾಯಿಯಲ್ಲಿ ಜ್ಯೋತಿ ಬೆಳಗಿದರು. ಬಳಿಕ ಜ್ಯೋತಿಯನ್ನು ಜಪಾನ್ನ ಪ್ರತಿನಿಧಿಯಾಗಿದ್ದ ಮಾಜಿ ಈಜುಪಟು ನವೊಕೊ ಇಮೊಟೊಗೆ ಹಸ್ತಾಂತರಿಸಲಾಯಿತು. ಮಾರ್ಚ್ 12ರಂದು ಜ್ಯೋತಿ ಬೆಳಗಲಾಗಿದ್ದು, ಶುಕ್ರವಾರ ಜಪಾನ್ ತಲುಪಲಿದೆ.
ಭಾರತಕ್ಕೆ ಸ್ಪರ್ಧೆ ಯಾಕೆ ಅಗತ್ಯ
ಆತಿಥೇಯ ಜಪಾನ್ ಜತೆಗೆ ಭಾರತ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿರುವುದರಿಂದ ಅದನ್ನು ಉಳಿಸಿಕೊಳ್ಳಲು ಒಲಿಂಪಿಕ್ಸ್ ಸ್ಪರ್ಧೆ ಅಗತ್ಯವೆನಿಸುತ್ತದೆ. ಈಗಾಗಲೆ
ಒಲಿಂಪಿಕ್ಸ್ಗೆ 91 ಸಾವಿರ ಕೋಟಿ ರೂ.ಗೂ ಅಧಿಕ ಖರ್ಚು ಮಾಡಿರುವ ಜಪಾನ್, ನಷ್ಟದಿಂದ ಪಾರಾಗಲು ಒಲಿಂಪಿಕ್ಸ್ ಆಯೋಜನೆ ಅಗತ್ಯ. ಆಗ ಅದಕ್ಕೆ ಜಗತ್ತಿನ ಇತರ ದೇಶಗಳ ಸಹಾಯಹಸ್ತ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಭಾರತ ಕೈಕೊಟ್ಟರೆ ಸಂಬಂಧ ಹದಗೆಡುತ್ತದೆ. ಬೇಕಿದ್ದರೆ ಭಾರತದ ಕ್ರೀಡಾಪಟುಗಳಿಗೆ ಕೂಟದಿಂದ ಸ್ವಯಂ ಹಿಂದೆ ಸರಿಯುವ ಆಯ್ಕೆಯನ್ನಷ್ಟೇ ನೀಡಬಹುದಾಗಿರುತ್ತದೆ.
ಹೆಚ್ಚಿನ ದೇಶ ಹಿಂದೆ ಸರಿಯುವ ಸಾಧ್ಯತೆ
ಕರೊನಾ ಭೀತಿಯ ನಡುವೆ ಒಂದು ವೇಳೆ ಒಲಿಂಪಿಕ್ಸ್ ನಡೆದರೂ ಜಗತ್ತಿನ ಬಹುತೇಕ ರಾಷ್ಟ್ರಗಳು ಕೂಟದಿಂದ ಹಿಂದೆ ಸರಿಯುವ ಸಾಧ್ಯತೆ ಈಗಾಗಲೆ ಕಾಣಿಸಿದೆ. ಜನರ ಆರೋಗ್ಯಕ್ಕಿಂತ ಯಾರಿಗೂ ಕ್ರೀಡೆ ದೊಡ್ಡದೆನಿಸದು. ಆದರೆ ಕೂಟಕ್ಕೆ ಇನ್ನೂ 4 ತಿಂಗಳು ಬಾಕಿ ಇರುವುದರಿಂದ ಪರಿಸ್ಥಿತಿ ಸುಧಾರಣೆಯ ನಿರೀಕ್ಷೆಯನ್ನೂ ಇಡಬಹುದು.
ಒಲಿಂಪಿಕ್ಸ್ ವಿಳಂಬ ಎಂದ ಅಥ್ಲೆಟಿಕ್ಸ್ ಮುಖ್ಯಸ್ಥ
ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯ ಮುಖ್ಯಸ್ಥ ಸೆಬಾಸ್ಟಿಯನ್ ಕೋಯಿ, ಟೋಕಿಯೊ ಒಲಿಂಪಿಕ್ಸ್ ಮುಂದೂಡಲ್ಪಡುವ ಸೂಚನೆಯನ್ನು ನೀಡಿದ್ದಾರೆ. ಈ ವರ್ಷದ ಹಲವು ಪ್ರಮುಖ ಕ್ರೀಡಾಕೂಟಗಳು ಈಗಾಗಲೆ ಮುಂದೂಡಲ್ಪಟ್ಟಿರುವ ನಡುವೆ, ಒಲಿಂಪಿಕ್ಸ್ ಕೂಡ ವಿಳಂಬವಾಗಲಿದೆ. ಆದರೆ ಇದೇ ವರ್ಷ ಒಲಿಂಪಿಕ್ಸ್ ಆಯೋಜನೆಗೊಳ್ಳಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ನಡೆಯಬಹುದು ಎಂದು ಕೋಯಿ ತಿಳಿಸಿದ್ದಾರೆ.