

ನವದೆಹಲಿ: ಕರೊನಾ ವೈರಸ್ ಭೀತಿಯಿಂದ ಇಡೀ ಜಾಗತಿಕ ಕ್ರೀಡಾ ಲೋಕವೇ ಸ್ತಬ್ಧಗೊಂಡಿದ್ದು, ಸಹಜ ಸ್ಥಿತಿಗೆ ಕ್ರೀಡಾ ಚಟುವಟಿಕೆಗಳು ಮರಳಿದ ಬಳಿಕ 2032ರ ಒಲಿಂಪಿಕ್ ಕ್ರೀಡಾಕೂಟ ಹಾಗೂ 2026ರ ಯೂತ್ ಒಲಿಂಪಿಕ್ಸ್ ಆಯೋಜಿಸಲು ಬಿಡ್ ಸಲ್ಲಿಸಲಾಗುವುದು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೀಂದರ್ ಬಾತ್ರ್ರಾ ಹೇಳಿದ್ದಾರೆ. 10 ವರ್ಷಗಳ ಹಿಂದೆ ನವದೆಹಲಿಯಲ್ಲಿ ಕಾಮನ್ವೆಲ್ತ್ ಗೇಮ್್ಸ ಆಯೋಜಿಸಲಾಗಿತ್ತು. ಇದರಿಂದ ದೊಡ್ಡ ಕ್ರೀಡಾಕೂಟಗಳ ಆಯೋಜನೆ ಕುರಿತು ಸೂಕ್ಷ್ಮವಾಗಿ ಅರಿತುಗೊಂಡಿದ್ದು, ಇದೀಗ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಮರ್ಥವಾಗಿದೆ ಎಂದಿದ್ದಾರೆ.
‘2026ರ ಯೂತ್ ಒಲಿಂಪಿಕ್ ಗೇಮ್್ಸ ಹಾಗೂ 2032ರ ಒಲಿಂಪಿಕ್ಸ್ ಆಯೋಜನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಈ ಕುರಿತು ಈಗಾಗಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಪತ್ರ ಬರೆದಿರುವುದಾಗಿ’ ಬಾತ್ರ್ರಾ ಹೇಳಿದ್ದಾರೆ. ಭಾರತದೊಂದಿಗೆ ಥಾಯ್ಲೆಂಡ್, ರಷ್ಯಾ, ಕೊಲಂಬಿಯಾ ಕೂಡ ಯೂತ್ ಒಲಿಂಪಿಕ್ಸ್ ಆಯೋಜನೆಗೆ ಬಿಡ್ ಸಲ್ಲಿಸಲು ಮುಂದಾಗಿವೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್, ಚೀನಾದ ಶಾಂಘೈ, ದಕ್ಷಿಣ ಕೊರಿಯಾದ ಸಿಯೊಲ್ ನಗರಗಳು 2032ರ ಒಲಿಂಪಿಕ್ಸ್ ಆಯೋಜನೆಗೆ ಮುಂದೆ ಬಂದಿವೆ. ಆದರೆ, ಕರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಕ್ರೀಡಾ ಲೋಕವೇ ಸ್ತಬ್ಧಗೊಂಡಿದ್ದು, ಸದ್ಯಕ್ಕೆ ಎಲ್ಲವೂ ನಿಂತ ನೀರಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ನ ಮುಖ್ಯಸ್ಥರೂ ಆಗಿರುವ ಬಾತ್ರ್ರಾ ತಿಳಿಸಿದ್ದಾರೆ. 2032ರ ಒಲಿಂಪಿಕ್ಸ್ ನಿಗದಿ ಕುರಿತು 2025ರವರೆಗೆ ಸಮಯಾವಕಾಶವಿದೆ ಎಂದು ಹೇಳಿದ್ದಾರೆ.
ಮುಂದಿನ ಡಿಸೆಂಬರ್ವರೆಗೂ ಏನು ಹೇಳುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಮೊದಲಿಗೆ ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೋವಿಡ್-19ರಿಂದ ಎಲ್ಲರೂ ಪಾರಾಗಬೇಕು ಎಂದಿದ್ದಾರೆ.