ದಾಖಲೆಯ 10ನೇ ಬಾರಿ ಸ್ಯಾಫ್​ ಚಾಂಪಿಯನ್​ಷಿಪ್​ ಗೆದ್ದ ಭಾರತ

ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ 2-1ರಿಂದ ರೋಚಕ ಗೆಲುವು
football
ಸ್ಯಾಫ್​ ಚಾಂಪಿಯನ್​ಷಿಪ್​ ವಿಜೇತ ಭಾರತ ತಂಡಏಜೆನ್ಸಿ
Published on: 

ಢಾಕಾ: ಭಾರತ ತಂಡ ಸತತ ಮೂರನೇ ಮತ್ತು ಒಟ್ಟಾರೆ 10ನೇ ಬಾರಿ ಸ್ಯಾಫ್​ ಫುಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬ್ಲೂ ಟೈಗರ್ಸ್​ ಖ್ಯಾತಿಯ ಭಾರತ ತಂಡ ಮಂಗಳವಾರ ನಡೆದ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.

ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಭಾರತ 0-1ರಿಂದ ಹಿನ್ನಡೆ ಅನುಭವಿಸಿತ್ತು. ಪಾಕಿಸ್ತಾನ ಮೊದಲಾರ್ಧದ ಇಂಜುರಿ ಸಮಯದಲ್ಲಿ ಅಲಂಗಿರ್​ ಘಾಜಿ (45+1ನೇ ನಿಮಿಷ) ಸಿಡಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತ್ತು. 59ನೇ ನಿಮಿಷದಲ್ಲಿ ಜುನೈದ್​ ಶಾ ರೆಡ್​ ಕಾರ್ಡ್​ ಪಡೆದ ಕಾರಣ ಪಾಕ್​ ಆಟಗಾರರ ಸಂಖ್ಯೆ 10ಕ್ಕೆ ಇಳಿಯಿತು. ಬಳಿಕ ಭಾರತ ಇದರ ಸಂಪೂರ್ಣ ಲಾಭವೆತ್ತಿತು. 60ನೇ ನಿಮಿಷದಲ್ಲಿ ಸುಹೈಲ್​ ಬಟ್​ ಸಿಡಿಸಿದ ಗೋಲಿನಿಂದ ಭಾರತ ಸಮಬಲ ಸಾಧಿಸಿತು. ನಂತರ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವ ಲಕ್ಷಣ ಕಾಣಿಸಿದಾಗ 88ನೇ ನಿಮಿಷದಲ್ಲಿ ಸಂದೀಪ್​ ಮಂಡಿ ಭಾರತಕ್ಕೆ ಗೆಲುವಿನ ಗೋಲು ತಂದುಕೊಟ್ಟರು. ಭಾರತ ಈ ಮುನ್ನ ಲೀಗ್​ ಹಂತದಲ್ಲೂ 3-2ರಿಂದ ಪಾಕಿಸ್ತಾನಕ್ಕೆ ಸೋಲುಣಿಸಿತ್ತು.

ಭಾರತ ತಂಡ ಈ ಹಿಂದೆ 1993, 1997, 1999, 2005, 2009, 2011, 2015, 2021, 2023ರಲ್ಲಿ ಪ್ರಶಸ್ತಿ ಜಯಿಸಿತ್ತು. ಪ್ರಧಾನ ತಂಡ ನ್ಯೂಜಿಲೆಂಡ್​ ಪ್ರವಾಸ ಕೈಗೊಂಡಿದ್ದರಿಂದ ಭಾರತ ಈ ಬಾರಿ ಟೂರ್ನಿಯಲ್ಲಿ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಿದ ನಡುವೆಯೂ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ವಿಶೇಷ.