

ಮುಂಬೈ: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೆಪ್ಟೆಂಬರ್ 5ರಂದು ಆರಂಭವಾಗಲಿರುವ ದೇಶೀಯ ಕ್ರಿಕೆಟ್ ಟೂರ್ನಿ ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಒಂದು ವಾರದ ಹಿಂದೆ ಬಲಗೈ ಗಾಯಕ್ಕೆ ತುತ್ತಾಗಿದ್ದ ಸೂರ್ಯಕುಮಾರ್, ಟೂರ್ನಿಯ ಆರಂಭದ ವೇಳೆ ಸಂಪೂರ್ಣ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ.
ಕೊಯಂಬತ್ತೂರಿನಲ್ಲಿ ಇತ್ತೀಚೆಗೆ ನಡೆದ ಬುಚ್ಚಿಬಾಬು ಆಹ್ವಾನಿತ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ಸೂರ್ಯ, ಗಾಯಕ್ಕೆ ತುತ್ತಾಗಿದ್ದು ಪಂದ್ಯದ ಕೊನೆಯ ದಿನದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್‌ನಿಂದ ದೂರವುಳಿದಿದ್ದರು. ದುಲೀಪ್ ಟ್ರೋಫಿಯಲ್ಲಿ ಭಾರತ ಸಿ ತಂಡದಲ್ಲಿ ಸ್ಥಾನ ಪಡೆದಿದ್ದ ಸೂರ್ಯ, ಅನಂತಪುರದಲ್ಲಿ ಭಾರತ ಡಿ ವಿರುದ್ಧ ಕಣಕ್ಕಿಳಿಯಬೇಕಿತ್ತು. ಗಾಯದ ಸಮಸ್ಯೆಯಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿದ್ದಾರೆ. ದುಲೀಪ್ ಟ್ರೋಫಿಯು ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರಿಗೆ ನೆರವಾಗಲಿದೆ.