ಇಂದಿನಿಂದ ಭಾರತ-ಆಸೀಸ್​ ಬಾಕ್ಸಿಂಗ್​ ಡೇ ಟೆಸ್ಟ್​; ರೋಹಿತ್​ ಪಡೆಗೆ ವರ್ಷದ ಕೊನೇ ಕಾದಾಟದಲ್ಲಿ ಗೆಲುವಿನ ತವಕ

web bgt 4
Published on

ಮೆಲ್ಬೋರ್ನ್​: ಬಾರ್ಡರ್​-ಗಾವಸ್ಕರ್​ ಟ್ರೋಫಿ ಅಂತಿಮ ಟ್ಟವನ್ನು ತಲುಪುತ್ತಿರುವ ವೇಳೆ ಕ್ರಿಕೆಟ್​ ಪ್ರೇಮಿಗಳ ಕುತೂಹಲ, ರೋಚಕತೆಯೂ ಹೆಚ್ಚಾಗಿದೆ. ಸದ್ಯ 1&1 ಸಮಬಲದಲ್ಲಿರುವ 5 ಪಂದ್ಯಗಳ ಟೆಸ್ಟ್​ ಸರಣಿಯ 4ನೇ ಹಾಗೂ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಭಾರತ ಮತ್ತು ಆತಿಥೇಯ ಆಸ್ಟ್ರೆಲಿಯಾ ತಂಡಗಳ ನಡುವೆ ಗುರುವಾರದಿಂದ ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ (ಎಂಸಿಜಿ) ಬರೋಬ್ಬರಿ 90 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಎದುರು ಕಾದಾಟ ನಡೆಯಲಿದೆ. ಇದು ರೋಹಿತ್​ ಶರ್ಮ ಬಳಗಕ್ಕೆ 2024 ಕ್ಯಾಲೆಂಡರ್​ ವರ್ಷದ ಕೊನೇ ಪಂದ್ಯವಾಗಿದ್ದು, ಗೆಲುವಿನೊಂದಿಗೆ ವರ್ಷ ಮುಗಿಸುವ ಹಂಬಲದಲ್ಲಿದೆ.

ಪರ್ತ್​ನಲ್ಲಿ ಗೆದ್ದು ಶುಭಾರಂಭ ಕಂಡಿದ್ದ ಭಾರತ, ಅಡಿಲೇಡ್​ನಲ್ಲಿ ಆಡಿದ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಮುಗ್ಗರಿಸಿತ್ತು. ನಂತರ ಬ್ರಿಸ್ಬೇನ್​ನಲ್ಲಿ ಇಕ್ಕಟ್ಟಿಗೆ ಸಿಲುಕಿದರೂ, ಫಾಲೋಆನ್​ನಿಂದ ಪಾರಾದ ಸಾಹಸದ ನಡುವೆ ಮಳೆ ಅಡಚಣೆಯಿಂದಾಗಿ ಡ್ರಾ ಸಾಧಿಸಿತ್ತು. ಸರಣಿಯ ಉಳಿದ 2 ಪಂದ್ಯಗಳು ಭಾರತಕ್ಕೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ಗೇರುವ ನಿಟ್ಟಿನಲ್ಲೂ ಮಹತ್ವದ್ದಾಗಿದೆ. ಡಬ್ಲ್ಯುಟಿಸಿ ಫೈನಲ್​ಗೇರಲು ಕೊನೇ 2 ಟೆಸ್ಟ್​ಗಳಲ್ಲಿ ಗೆಲ್ಲಲೇಬೇಕಾದ ಒತ್ತಡವೂ ಭಾರತದ ಮೇಲಿದೆ.

ರೋಹಿತ್​ ಮತ್ತೆ ಆರಂಭಿಕ?

ಅಭ್ಯಾಸದ ವೇಳೆ ಮೊಣಕಾಲಿಗೆ ಚೆಂಡೇಟು ತಿಂದಿದ್ದರೂ ಪಂದ್ಯಕ್ಕೆ ಫಿಟ್​ ಆಗಿರುವ ನಾಯಕ ರೋಹಿತ್​ ಶರ್ಮ ಮತ್ತೆ ಆರಂಭಿಕರಾಗಿ ಆಡಲಿದ್ದಾರೆ. ಜತೆಗೆ ಕನ್ನಡಿಗ ಕೆಎಲ್​ ರಾಹುಲ್​ರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಮೂಲಕ ಅಗ್ರ ಕ್ರಮಾಂಕದಲ್ಲೇ ಉಳಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆಗ ಶುಭಮಾನ್​ ಗಿಲ್​ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು ಅಥವಾ ಸರಣಿಯ 3 ಇನಿಂಗ್ಸ್​ಗಳಲ್ಲಿ 60 ರನ್​ ಮಾತ್ರ ಗಳಿಸಿರುವ ಗಿಲ್​ ಬದಲಿಗೆ ಧ್ರುವ ಜುರೆಲ್​ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.

2ನೇ ಸ್ಪಿನ್ನರ್​ ಕಣಕ್ಕೆ?

ಆಸೀಸ್​ ಸ್ಪಿನ್ನರ್​ ನಾಥನ್​ ಲ್ಯಾನ್​ ಇತ್ತೀಚೆಗೆ ವರ್ಷಗಳಲ್ಲಿ ನಡೆದ ಮೆಲ್ಬೋರ್ನ್​ ಟೆಸ್ಟ್​ಗಳಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ, ರವೀಂದ್ರ ಜಡೇಜಾ ಜತೆಗೆ ವಾಷಿಂಗ್ಟನ್​ ಸುಂದರ್​ರನ್ನು 2ನೇ ಸ್ಪಿನ್ನರ್​ ಆಗಿ ಆಡಿಸುವ ಯೋಜನೆಯಲ್ಲಿದೆ. ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಸರಣಿಯ ಮೊದಲ 3 ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದರೂ, ಬೌಲಿಂಗ್​ನಲ್ಲಿ ಹೆಚ್ಚಿನ ಕೊಡುಗೆ ನೀಡಿರದ ಮತ್ತು ವಾಷಿಂಗ್ಟನ್​ ಬ್ಯಾಟಿಂಗ್​ನಲ್ಲೂ ನೆರವಾಗಬಲ್ಲ ಕಾರಣ ಈ ಬದಲಾವಣೆಯತ್ತ ಭಾರತ ಒಲವು ತೋರಿದೆ. ಇದರಿಂದ ಭಾರತ 3 ವೇಗಿ, 2 ಸ್ಪಿನ್ನರ್​ಗಳ ಬೌಲಿಂಗ್​ ಕಾಂಬಿನೇಷನ್​ ಅನುಸರಿಸಿದಂತಾಗುತ್ತದೆ. ಜತೆಗೆ ಇಬ್ಬರು ಆಲ್ರೌಂಡರ್​ಗಳಿಂದಾಗಿ 7ನೇ ಕ್ರಮಾಂಕದವರೆಗೆ ಬ್ಯಾಟಿಂಗ್​ ವಿಭಾಗವೂ ಬಲ ಪಡೆದುಕೊಳ್ಳಲಿದೆ.

ಭಾರತ ಗೆದ್ದರೆ ಟ್ರೋಫಿ ರಿಟೇನ್​

ಮೆಲ್ಬೋರ್ನ್​ ಟೆಸ್ಟ್​ ಗೆದ್ದ ತಂಡಕ್ಕೆ ಸರಣಿ ಸೋಲುವ ಭೀತಿ ಇರುವುದಿಲ್ಲ. ಯಾಕೆಂದರೆ ಕೊನೇ ಟೆಸ್ಟ್​ ಸೋತರೂ ಸರಣಿ ಸಮಬಲವನ್ನು ಕಾಣಬಹುದು. ಇನ್ನು ಭಾರತ ಗೆದ್ದರೆ ಬಾರ್ಡರ್​&ಗಾವಸ್ಕರ್​ ಟ್ರೋಫಿಯನ್ನು ಉಳಿಸಿಕೊಳ್ಳುವುದು ಕೂಡ ಖಚಿತಗೊಳ್ಳಲಿದೆ. ಯಾಕೆಂದರೆ ಸರಣಿಯ ನಿಯಮದನ್ವಯ, ಸಮಬಲಗೊಂಡಾಗ ಹಾಲಿ ಚಾಂಪಿಯನ್​ ತಂಡವೇ ಟ್ರೋಫಿ ಉಳಿಸಿಕೊಳ್ಳಲಿದೆ. ಇನ್ನು ಆಸೀಸ್​ ಗೆದ್ದರೆ ಟ್ರೋಫಿ ಮರಳಿ ಪಡೆಯುವ ಆಸೆ ಹೆಚ್ಚಲಿದೆ. ಜತೆಗೆ ಭಾರತಕ್ಕೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಬಾಗಿಲನ್ನೂ ಬಹುತೇಕ ಮುಚ್ಚಿದಂತಾಗುತ್ತದೆ.

*ನಾನು ಯಾವ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದು ತಲೆಕೆಡಿಸಿಕೊಳ್ಳಬೇಡಿ. ಅದನ್ನು ನಾವು ತಂಡದೊಳಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಇದನ್ನು ನಾನು ಸುದ್ದಿಗೋಷ್ಠಿಯಲ್ಲಿ ಎಲ್ಲರೆದುರು ಹೇಳುವುದಿಲ್ಲ.

| ರೋಹಿತ್​ ಶರ್ಮ, ಭಾರ ತಂಡದ ನಾಯಕ

ಟೀಮ್​ ನ್ಯೂಸ್​:

ಭಾರತ: ನಾಯಕ ರೋಹಿತ್​ ಶರ್ಮ ಬ್ಯಾಟಿಂಗ್​ ಕ್ರಮಾಂಕದ ಬಗ್ಗೆ ಕುತೂಹಲವಿದೆ. ರೋಹಿತ್​ ಮತ್ತೆ ಆರಂಭಿಕರಾಗಿ ಮತ್ತು ಕೆಎಲ್​ ರಾಹುಲ್​ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಭಾರತೀಯ ಇನಿಂಗ್ಸ್​ ಶುರುವಾದಾಗಲಷ್ಟೇ ಸ್ಪಷ್ಟತೆ ಸಿಗಲಿದೆ. ಇನ್ನು ಭಾರತ 2ನೇ ಸ್ಪಿನ್ನರ್​ ಆಗಿ ಮತ್ತು ಆಲ್ರೌಂಡರ್​ ನಿತೀಶ್​ಕುಮಾರ್​ ರೆಡ್ಡಿಗೆ ಬದಲಾಗಿ ವಾಷಿಂಗ್ಟನ್​ ಸುಂದರ್​ರನ್ನು ಆಡಿಸುವ ಲೆಕ್ಕಾಚಾರವನ್ನೂ ಹೊಂದಿದೆ. 3ನೇ ವೇಗದ ಬೌಲರ್​ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ರೇಸ್​ನಲ್ಲಿದ್ದರೂ, ಆಕಾಶ್​ದೀಪ್​ ಸ್ಥಾನ ಉಳಿಸಿಕೊಳ್ಳಬಹುದು.

ಆಸ್ಟ್ರೆಲಿಯಾ: ಎಂದಿನಂತೆ ಆಸೀಸ್​ ಈ ಸಲವೂ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಅಂತಿಮಗೊಳಿಸಿದೆ. 19 ವರ್ಷದ ಆರಂಭಿಕ ಬ್ಯಾಟರ್​ ಸ್ಯಾಮ್​ ಕಾನ್​ಸ್ಟಾಸ್​, ಮೆಕ್​ಸ್ವೀನಿ ಸ್ಥಾನದಲ್ಲಿ ಟೆಸ್ಟ್​ ಪದಾರ್ಪಣೆ ಮಾಡುವುದು ಈಗಾಗಲೆ ಖಚಿತಗೊಂಡಿದೆ. ಕ್ರಿಸ್​ಮಸ್​ ದಿನ ನಡೆದ ಫಿಟ್ನೆಸ್​ ಟೆಸ್ಟ್​ನಲ್ಲಿ ಟ್ರಾವಿಸ್​ ಹೆಡ್​ ಉತ್ತೀರ್ಣರಾಗಿದ್ದು, ಪಂದ್ಯದಲ್ಲಿ ಆಡುವುದು ಕೂಡ ಖಚಿತಗೊಂಡಿದೆ. ಗಾಯಾಳು ಹ್ಯಾಸಲ್​ವುಡ್​ ಬದಲಿಗೆ ಸ್ಕಾಟ್​ ಬೋಲ್ಯಾಂಡ್​ ಮರಳಿ ಕಣಕ್ಕಿಳಿಯಲಿರುವುದು ಆಸೀಸ್​ ತಂಡದಲ್ಲಿನ ಮತ್ತೊಂದು ಬದಲಾವಣೆಯಾಗಿದೆ.

*ಆರಂಭ: ಬೆಳಗ್ಗೆ 5.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಹಾಟ್​ಸ್ಟಾರ್​.

ಪಿಚ್​ ರಿಪೋರ್ಟ್​

ಎಂಸಿಜಿ ಪಿಚ್​ 2017ರ ನಂತರದಲ್ಲಿ ವೇಗದ ಬೌಲರ್​ಗಳ ಸ್ವರ್ಗವೆನಿಸಿದೆ. ಈ ಸಲವೂ ಪಿಚ್​ ಮೇಲೆ 6 ಎಂಎಂ ಹಸಿರು ಹುಲ್ಲು ಬಿಡಲಾಗುತ್ತದೆ ಎಂದು ಪಿಚ್​ ಕ್ಯುರೇಟರ್​ ಮ್ಯಾಟ್​ ಪೇಜ್​ ತಿಳಿಸಿದ್ದಾರೆ. ಆದರೆ ಮೆಲ್ಬೋರ್ನ್​ನ ಹಾಲಿ ಬಿಸಿಲಿನ ವಾತಾವರಣದಲ್ಲಿ ಪಿಚ್​ ಬ್ಯಾಟರ್​ಗಳಿಗೂ ಹೆಚ್ಚಿನ ಸಹಕಾರ ನೀಡುವ ನಿರೀಕ್ಷೆ ಇದೆ.

*9: ಭಾರತ ಇದುವರೆಗೆ ಮೆಲ್ಬೋರ್ನ್​ನಲ್ಲಿ 9 ಬಾಕ್ಸಿಂಗ್​ ಡೇ ಟೆಸ್ಟ್​ ಆಡಿದ್ದು, 5ರಲ್ಲಿ ಗೆದ್ದು, 2ರಲ್ಲಿ ಸೋತಿದೆ. ಮತ್ತೆ 2 ಡ್ರಾಗೊಂಡಿದೆ. 2018 ಮತ್ತು 2020ರಲ್ಲಿ ಆಡಿದ ಕೊನೇ 2 ಬಾಕ್ಸಿಂಗ್​ ಡೇ ಟೆಸ್ಟ್​ಗಳಲ್ಲಿ ಗೆದ್ದ ಬಲಿಷ್ಠ ದಾಖಲೆ ಭಾರತ ತಂಡದ್ದಾಗಿದೆ.

43: ಆಸೀಸ್​ 1968ರಿಂದ ಇದುವರೆಗೆ ಒಟ್ಟಾರೆ 43 ಬಾಕ್ಸಿಂಗ್​ ಡೇ ಟೆಸ್ಟ್​ ಆಡಿದ್ದು, 26ರಲ್ಲಿ ಗೆದ್ದು, 8ರಲ್ಲಿ ಸೋತಿದೆ. ಉಳಿದ 9 ಡ್ರಾಗೊಂಡಿದೆ.

*ಪ್ರತಿ ದಿನದಾಟ ಹೀಗಿರಲಿದೆ:

ಮೊದಲ ಅವಧಿ: ಬೆಳಗ್ಗೆ 5-7.00

2ನೇ ಅವಧಿ: ಬೆಳಗ್ಗೆ 7.40-9.40

3ನೇ ಅವಧಿ: ಬೆಳಗ್ಗೆ 10-12.00

ಬಾಕ್ಸಿಂಗ್​ ಡೇ ಎಂದರೆ...

ಪ್ರತಿ ವರ್ಷ ಡಿ. 26ರಂದು ಆರಂಭಗೊಳ್ಳುವ ಟೆಸ್ಟ್​ಗೆ "ಬಾಕ್ಸಿಂಗ್​ ಡೇ ಟೆಸ್ಟ್​' ಎನ್ನಲಾಗುತ್ತದೆ. ಆದರೆ, ಬಾಕ್ಸಿಂಗ್​ ಆಟಕ್ಕೂ "ಬಾಕ್ಸಿಂಗ್​ ಡೇ'ಗೂ ಸಂಬಂಧವಿಲ್ಲ. ಕ್ರಿಸ್​ಮಸ್​ ಹಬ್ಬದ ದಿನ ಪಡೆಯುವ ಗಿಫ್ಟ್​ "ಬಾಕ್ಸ್​'ಗಳನ್ನು ಮರುದಿನ ತೆರೆಯುವುದರಿಂದ ಕಾಮನ್ವೆಲ್ತ್​ ದೇಶಗಳಲ್ಲಿ ಆ ದಿನವನ್ನು "ಬಾಕ್ಸಿಂಗ್​ ಡೇ' ಎನ್ನಲಾಗುತ್ತದೆ. 1950ರಲ್ಲಿ ಮೊದಲ ಬಾರಿಗೆ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​ ನಡೆದಿತ್ತು. ಆಸೀಸ್​ನಲ್ಲಿ 1980ರಿಂದ ಪ್ರತಿವರ್ಷ ಮೆಲ್ಬೋರ್ನ್​ ಮೈದಾನದಲ್ಲೇ ಬಾಕ್ಸಿಂಗ್​ ಡೇ ಟೆಸ್ಟ್​ ನಡೆಯುವ ಸಂಪ್ರದಾಯವಿದೆ. ಇತ್ತೀಚೆಗಿನ ವರ್ಷಗಳಲ್ಲಿ ದಣ ಆಫ್ರಿಕಾದಲ್ಲೂ ಸೆಂಚುರಿಯನ್​ನಲ್ಲಿ ಬಾಕ್ಸಿಂಗ್​ ಡೇಯಂದು ಟೆಸ್ಟ್​ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net