ಟೆಸ್ಟ್ ತಂಡಕ್ಕೂ ರೋಹಿತ್ ಸಾರಥ್ಯ ; ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ ; ರಹಾನೆ, ಪೂಜಾರ, ಇಶಾಂತ್‌ಗೆ ಕೊಕ್

indian test team for web
Published on

ನವದೆಹಲಿ: ನಿಗದಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮ ಅವರಿಗೆ ಅಧಿಕೃತವಾಗಿ ಭಾರತ ಟೆಸ್ಟ್ ತಂಡದ ಸಾರಥ್ಯವನ್ನು ವಹಿಸಲಾಗಿದೆ. ಮಾರ್ಚ್ 4 ರಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮ ಭಾರತ ತಂಡ ಮುನ್ನಡೆಸಲಿದ್ದಾರೆ. ಇದರಿಂದ ಮೂರು ಮಾದರಿಗೂ ಪೂರ್ಣ ಪ್ರಮಾಣದ ನಾಯಕನಾಗಿ ರೋಹಿತ್ ಶರ್ಮ ಆಯ್ಕೆಯಾದಂತಾಗಿದೆ. ನಿಸ್ತೇಜ ನಿರ್ವಹಣೆಯಿಂದ ಬಳಲುತ್ತಿದ್ದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಮುಂಬರುವ ಶ್ರೀಲಂಕಾ ವಿರುದ್ಧದ 3 ಟಿ20 ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಗೆ ಶನಿವಾರ ಭಾರತ ತಂಡಗಳನ್ನು ಪ್ರಕಟಿಸಲಾಯಿತು. ಪೂಜಾರ, ರಹಾನೆ, ಸಾಹಾ ಹಾಗೂ ಇಶಾಂತ್‌ಗೆ ರಣಜಿ ಟ್ರೋಫಿಯಲ್ಲಿ ಆಡಲು ಸೂಚಿಸಲಾಗಿದೆ. 18 ಸದಸ್ಯರ ತಂಡದಲ್ಲಿ ಉತ್ತರ ಪ್ರದೇಶದ ಎಡಗೈ ವೇಗಿ ಸೌರಭ್ ಕುಮಾರ್ ಸ್ಥಾನ ಪಡೆದಿರುವ ಹೊಸಮುಖ. ಚೇತನ್ ಶರ್ಮ ಸಾರಥ್ಯದ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಶಾರ್ದೂಲ್ ಠಾಕೂರ್‌ಗೆ ವಿಶ್ರಾಂತಿ ನೀಡಿದೆ.

* ರಾಹುಲ್-ಸುಂದರ್ ಅಲಭ್ಯ

ಕನ್ನಡಿಗ ಕೆಎಲ್ ರಾಹುಲ್ ಹಾಗೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆಯ್ಕೆಗೆ ಅಲಭ್ಯರಾಗಿದ್ದಾರೆ. ಆರ್.ಅಶ್ವಿನ್ ಆಯ್ಕೆಯಾದರೂ ಫಿಟ್ನೆಸ್ ಸಮಸ್ಯೆಯಿಂದ ಅಕ್ಷರ್ ಪಟೇಲ್ ಅವರನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ. ಕೆಎಲ್ ರಾಹುಲ್ ಅಲಭ್ಯರಾದ ಹಿನ್ನೆಲೆಯಲ್ಲಿ ಜಸ್‌ಪ್ರೀತ್ ಬುಮ್ರಾ ಎರಡು ಸರಣಿಗೂ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.ರಾಹುಲ್ ಹಾಗೂ ಸುಂದರ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಒಂದು ವೇಳೆ ಚೇತರಿಸಿಕೊಂಡರೆ ತಂಡಕ್ಕೆ ಸೇರ್ಪಡೆಗೊಳಿಸಲಾಗುವುದು’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮ ಹೇಳಿದ್ದಾರೆ.

ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮಾನ್ ಗಿಲ್, ರಿಷಭ್ ಪಂತ್ (ವಿಕೀ), ಕೆಎಸ್ ಭರತ್ (ವಿಕೀ), ಆರ್.ಅಶ್ವಿನ್ (ಫಿಟ್ನೆಸ್ ಸಾಬೀತಾಗಬೇಕು), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಮೊಹಮದ್ ಶಮಿ, ಮೊಹಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್.

ಟಿ20 ತಂಡ: ರೋಹಿತ್ ಶರ್ಮ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್‌ಪ್ರೀಥ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ರವಿ ಬಿಷ್ಣೋಯಿ, ಆವೇಶ್ ಖಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net