ಅಂತಿಮ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ ; ಸತತ ಮೂರನೇ ಸರಣಿ ಕ್ಲೀನ್ ಸ್ವೀಪ್

INDIA AND SRILANKA 3T20 MATCH FOR WEB
Published on

ಧರ್ಮಶಾಲಾ: ಕಳೆದ ಎರಡು ವಾರಗಳಿಂದ ತವರಿನಲ್ಲಿ ಗೆಲುವನ್ನೇ ಹೊದಿಕೆಯಾಗಿಸಿಕೊಂಡಿರುವ ಭಾರತ ತಂಡ ಸತತ 3ನೇ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು. ಪ್ರವಾಸಿ ಶ್ರೀಲಂಕಾ ತಂಡದ ಎದುರು ಮತ್ತೊಮ್ಮೆ ಅಬ್ಬರಿಸಿದ ರೋಹಿತ್ ಶರ್ಮ ಬಳಗ, ಶ್ರೇಯಸ್ ಅಯ್ಯರ್ (73*ರನ್, 45ಎಸೆತ, 9 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. 3 ಪಂದ್ಯಗಳ ಸರಣಿಯನ್ನು 3-0ಯಿಂದ ವಶಪಡಿಸಿಕೊಂಡಿತು. ಜತೆಗೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಸತತ 12ನೇ ಗೆಲುವಿನ ವಿಶ್ವದಾಖಲೆ ಸರಿಗಟ್ಟಿತು. ಈ ಪೈಕಿ ಕೊನೇ 9 ಗೆಲುವು ರೋಹಿತ್ ಶರ್ಮ ಸಾರಥ್ಯದ ಒಲಿದಿವೆ.

ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್‌ಗಿಳಿದ ಶ್ರೀಲಂಕಾ ತಂಡ, ಆರಂಭಿಕ ವೈಲ್ಯದ ನಡುವೆಯೂ ನಾಯಕ ದಸುನ್ ಶನಕ (74*ರನ್, 38 ಎಸೆತ, 9 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 146 ರನ್ ಪೇರಿಸಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ 16.5 ಓವರ್‌ಗಳಲ್ಲಿ 4 ವಿಕೆಟ್‌ಗೆ 148 ಗೆಲುವಿನ ನಗೆ ಬೀರಿತು.

ಶ್ರೀಲಂಕಾ: 5 ವಿಕೆಟ್‌ಗೆ 146 (ದಸುನ್ ಶನಕ 74*, ದಿನೇಶ್ ಚಾಂಡಿಮಾಲ್ 22, ಚಮಿಕಾ ಕರುಣರತ್ನೆ 12*, ಆವೇಶ್ ಖಾನ್ 23ಕ್ಕೆ 2, ಹರ್ಷಲ್ ಪಟೇಲ್ 29ಕ್ಕೆ 1, ರವಿ ಬಿಷ್ಣೋಯಿ 32ಕ್ಕೆ 1, ಮೊಹಮದ್ ಸಿರಾಜ್ 22ಕ್ಕೆ 1), ಭಾರತ: 16.5 ಓವರ್‌ಗಳಲ್ಲಿ 4 ವಿಕೆಟ್‌ಗೆ 148 (ಸಂಜು ಸ್ಯಾಮ್ಸನ್ 18, ಶ್ರೇಯಸ್ ಅಯ್ಯರ್ 73*, ದೀಪಕ್ ಹೂಡಾ 21, ಲಹಿರು ಕುಮಾರ 39ಕ್ಕೆ 2, ದುಶ್ಮಾಂಕ ಚಮೀರಾ 19ಕ್ಕೆ 1, ಚಮಿಕಾ ಕರುಣರತ್ನೆ 31ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net