

ಲಖನೌ: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡ ಸಂಯೋಜನೆಗೆ ಪ್ರಾಯೋಗಿಕ ಎನಿಸಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಸಜ್ಜಾಗಿದೆ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ನಡೆಯಲಿರುವ ಮೊದಲ ಟಿ20 ಕದನದಲ್ಲಿ ಭಾರತ ಶುಭಾರಂಭ ಕಾಣುವ ವಿಶ್ವಾಸದಲ್ಲಿದೆ. ಕಳೆದ ಭಾನುವಾರವಷ್ಟೇ ಬಲಿಷ್ಠ ವೆಸ್ಟ್ ಇಂಡೀಸ್ ಎದುರು ವೈಟ್‌ವಾಷ್ ಸಾಧಿಸಿರುವ ರೋಹಿತ್ ಶರ್ಮ ಪಡೆ ಮತ್ತೊಂದು ಸರಣಿ ಕ್ಲೀನ್‌ಸ್ವೀಪ್ ಭರವಸೆಯಲ್ಲಿದೆ. ಐಪಿಎಲ್‌ಗೆ ಪೂರ್ವಸಿದ್ಧತೆ ದೃಷ್ಟಿಯಿಂದ ಆಟಗಾರರಿಗೆ ವೈಯಕ್ತಿಕವಾಗಿಯೂ ಈ ಸರಣಿ ಸಾಕಷ್ಟು ಮಹತ್ವದ್ದಾಗಿದೆ. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮನ್ಸ್‌ರಂಥ ಆಟಗಾರರಿಗೆ ಗಮನಸೆಳೆಯಲು ಉತ್ತಮ ಅವಕಾಶ ಲಭಿಸಿದೆ. ಸರಣಿಯ 2 ಮತ್ತು 3ನೇ ಪಂದ್ಯ ಶನಿವಾರ ಮತ್ತು ಭಾನುವಾರ ಸತತ 2 ದಿನಗಳಲ್ಲಿ ಧರ್ಮಶಾಲಾದಲ್ಲಿ ನಡೆಯಲಿವೆ.
ಭಾರತಕ್ಕೆ ಆಗಮಿಸುವುದಕ್ಕೂ ಮುನ್ನ ಆಸ್ಟ್ರೇಲಿಯಾ ಎದುರು 1-4ರಿಂದ ಸೋತಿರುವ ಶ್ರೀಲಂಕಾ ತಂಡಕ್ಕೂ ಪ್ರಮುಖರ ಅಲಭ್ಯತೆ ಕಾಡಲಿದೆ. ಐಪಿಎಲ್ ಹರಾಜಿನಲ್ಲಿ 10 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಆರ್‌ಸಿಬಿ ತಂಡದ ಪಾಲಾಗಿ ಗಮನಸೆಳೆದಿದ್ದ ಆಲ್ರೌಂಡರ್ ವಾನಿಂದು ಹಸರಂಗ ಕೋವಿಡ್‌ನಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. ಸದ್ಯ ಮೆಲ್ಬೋರ್ನ್‌ನಲ್ಲೇ ಉಳಿದಿರುವ ಹಸರಂಗ, ತಂಡದೊಂದಿಗೆ ಭಾರತಕ್ಕೆ ಬಂದಿಲ್ಲ. ನೆಗೆಟಿವ್ ವರದಿ ಬರುವವರೆಗೂ ಹಸರಂಗ ಮೆಲ್ಬೋರ್ನ್‌ನಲ್ಲೇ ಉಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಇದರೊಂದಿಗೆ ಕುಸಲ್ ಮೆಂಡಿಸ್ ಮತ್ತು ಮಹೀಶ್ ತೀಕ್ಷಣ ಕೂಡ ಗಾಯದಿಂದಾಗಿ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಕ್ಲೀನ್‌ಸ್ವೀಪ್ ಸಾಧಿಸಿದರಷ್ಟೇ
ಭಾರತದ ನಂ.1 ಪಟ್ಟ ಭದ್ರ
ವೆಸ್ಟ್ ಇಂಡೀಸ್ ತಂಡದ ಎದುರು ಕ್ಲೀನ್‌ಸ್ವೀಪ್ ಸಾಧಿಸಿ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿರುವ ಭಾರತ ತಂಡ, ಇದೀಗ ಶ್ರೀಲಂಕಾ ತಂಡದ ಎದುರು ಕೂಡ ಕ್ಲೀನ್‌ಸ್ವೀಪ್ ಸಾಧಿಸಿದರಷ್ಟೇ ಈ ಪಟ್ಟ ಉಳಿಸಿಕೊಳ್ಳಲಿದೆ. ಭಾರತ ತಂಡ 2-1ರಿಂದ ಸರಣಿ ಗೆದ್ದರೂ ನಂ.1 ಪಟ್ಟ ಮತ್ತೆ ಇಂಗ್ಲೆಂಡ್ ಪಾಲಾಗಲಿದೆ.
*ಟೀಮ್ ನ್ಯೂಸ್
ಭಾರತ: ವಿಂಡೀಸ್ ಸರಣಿಯಲ್ಲಿ ಆಡಿದ ಕೆಲ ಆಟಗಾರರು ಅಲಭ್ಯರಾಗಿದ್ದಾರೆ. ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದಾರೆ. ಸೂರ್ಯಕುಮಾರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಅವಕಾಶ ಪಡೆಯುವ ನಿರೀಕ್ಷೆ ಇದೆ. ವಿಂಡೀಸ್ ವಿರುದ್ಧದ ಕೊನೇ ಪಂದ್ಯದ ಪ್ರಯೋಗವೇ ಮುಂದುವರಿದರೆ ನಾಯಕ ರೋಹಿತ್ ಶರ್ಮ ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಜಡೇಜಾಗೆ ರವಿ ಬಿಷ್ಣೋಯಿ ಅಥವಾ ಚಾಹಲ್ ಸ್ಥಾನ ಬಿಟ್ಟುಕೊಡಲಿದ್ದಾರೆ.
ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೀ), ಶ್ರೇಯಸ್ ಅಯ್ಯರ್, ರೋಹಿತ್ ಶರ್ಮ (ನಾಯಕ), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯಿ/ಚಾಹಲ್, ಭುವನೇಶ್ವರ್, ಜಸ್‌ಪ್ರೀತ್ ಬುಮ್ರಾ.
ಶ್ರೀಲಂಕಾ: ಗಾಯದ ಸಮಸ್ಯೆಯಿಂದಾಗಿ ಪ್ರಮುಖರು ಅಲಭ್ಯರಾಗಿದ್ದು, ಹೊಸ ಮುಖಗಳೊಂದಿಗೆ ಲಂಕಾ ಕಣಕ್ಕಿಳಿಯಲಿದೆ. ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಸಂಭಾವ್ಯ ತಂಡ: ಪಥುಮ್ ನಿಸ್ಸಾಕ, ಧನುಷ್ಕಾ ಗುಣತಿಲಕ, ಕಮಿಲ್ ಮಿಶಾರ (ವಿಕೀ), ದಿನೇಶ್ ಚಾಂಡಿಮಲ್, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ಚಮಿಕಾ ಕರುಣರತ್ನೆ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ದುಶ್ಮಾಂತ ಚಮೀರಾ, ಲಹಿರು ಕುಮಾರ.
ಪಂದ್ಯ ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 22
ಭಾರತ: 14
ಶ್ರೀಲಂಕಾ: 7
ರದ್ದು: 1