

ಕೊಲಂಬೊ: ಹೊಸ ಮುಖಗಳೊಂದಿಗೆ ಹೊಸ ಸವಾಲಿಗೆ ಸಜ್ಜಾಗಿರುವ ಭಾರತ ತಂಡ ಭಾನುವಾರದಿಂದ ಆರಂಭವಾಗಲಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ನಿಗದಿತ ಓವರ್‌ಗಳ ಸರಣಿಯ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡನೇ ಸ್ತರದ ತಂಡವೊಂದು ಕಣಕ್ಕಿಳಿಯಲಿದೆ. ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹನ್ನೊಂದರ ಬಳಗವೇ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಶಿಖರ್ ಧವನ್‌ಗೆ ದೊಡ್ಡ ಸವಾಲಾಗಿದೆ. ಮುಂಬರುವ ಟಿ20 ವಿಶ್ವಕಪ್‌ಗೂ ಮೊದಲು ಭಾರತದ ಪಾಲಿಗೆ ಕಡೇ ಸರಣಿ ಇದಾಗಿದ್ದು, ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲು ಕನಸು ಕಂಡಿರುವ ಯುವ ಆಟಗಾರರ ಪಾಲಿಗೆ ಈ ಸರಣಿ ಮಹತ್ವ ಪಡೆದಿದೆ.
ಮೇ 2 ರಂದು 14ನೇ ಐಪಿಎಲ್ ಸ್ಥಗಿತಗೊಂಡ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ಯುವ ಪಡೆಗೆ ಮೊದಲ ಕ್ರಿಕೆಟ್ ಸರಣಿ ಇದಾಗಿದೆ. 77 ದಿನಗಳ ಬಳಿಕ ಭಾರತದ ಕ್ರಿಕೆಟಿಗರು ಮೈದಾನಕ್ಕಿಳಿಯಲಿದ್ದಾರೆ. ಕಳೆದ ಮಂಗಳವಾರವೇ (ಜುಲೈ 13) ಆರಂಭಗೊಳ್ಳಬೇಕಿದ್ದ ಸರಣಿಯೂ ಆತಿಥೇಯ ತಂಡದ ಇಬ್ಬರು ಸಿಬ್ಬಂದಿ ವರ್ಗದವರಿಗೆ ರೂಪಾಂತರಿ ಡೆಲ್ಟಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಸರಣಿಯನ್ನು ಮುಂದೂಡಲಾಗಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ
ನೇರಪ್ರಸಾರ: ಸೋನಿ ನೆಟ್‌ವರ್ಕ್
ಮುಖಾಮುಖಿ: 159, ಭಾರತ : 91, ಶ್ರೀಲಂಕಾ: 56, ಟೈ: 1, ಫಲಿತಾಂಶವಿಲ್ಲ: 11
ಶ್ರೀಲಂಕಾದಲ್ಲಿ: 61, ಶ್ರೀಲಂಕಾ: 27, ಭಾರತ: 28, ಫಲಿತಾಂಶವಿಲ್ಲ: 6
ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ
ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರೂ ಕೊಂಚ ಮಟ್ಟಿಗೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸ್ಪಿನ್ ಸ್ನೇಹಿ ಪಿಚ್ ಇದಾಗಿದ್ದು, ಸ್ಪಿನ್ ಬೌಲರ್‌ಗಳು ಮಿಂಚಲಿದ್ದಾರೆ. ಟಾಸ್ ಪ್ರಮುಖ ಪಾತ್ರವಹಿಸಲಿದ್ದು, ಇದುವರೆಗೂ 121 ಪಂದ್ಯಗಳು ಇಲ್ಲಿ ನಡೆದಿದ್ದು, 71 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೆ ಜಯ ದಾಖಲಿಸಿವೆ. ಪಂದ್ಯ ಸಾಗುತ್ತಿದ್ದಂತೆ ಪಿಚ್ ಮಂದಗತಿ ಪಡೆಯುವುದೇ ಇದಕ್ಕೆ ಕಾರಣ. ಟಾಸ್ ಜಯಿಸಿದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ.
* ಸತತ 37ನೇ ವರ್ಷ ಮುಖಾಮುಖಿ
ಭಾರತ ಹಾಗೂ ಶ್ರೀಲಂಕಾ ತಂಡಗಳು ಸತತ 37ನೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ಒಂದು ಪಂದ್ಯದಲ್ಲಾದರೂ ಮುಖಾಮುಖಿಯಾಗುತ್ತಿವೆ. 1983ರಲ್ಲಿ ಉಭಯ ತಂಡಗಳು ಎದುರಾಗಿರಲಿಲ್ಲ. ಆ ಬಳಿಕ 1984ರಿಂದ ಪ್ರತಿವರ್ಷ ಕನಿಷ್ಠ ಒಂದು ಪಂದ್ಯದಲ್ಲಾದರೂ ಉಭಯ ತಂಡಗಳು ಪರಸ್ಪರ ಎದುರಾಗುತ್ತಿವೆ.