ಪಿಂಕ್‌ಬಾಲ್ ಟೆಸ್ಟ್ ಕದನಕ್ಕೆ ಬೆಂಗಳೂರು ಸನ್ನದ್ಧ

india and sl match for web
Published on

ಬೆಂಗಳೂರು: ವಿಶ್ವದರ್ಜೆ ಸೌಕರ್ಯಗಳನ್ನು ಹೊಂದಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುವುದೇ ಒಂದು ಸೊಬಗು. ಕಳೆದ 49 ವರ್ಷಗಳಿಂದ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಖ್ಯಾತಿ ಹೊಂದಿರುವ ಈ ಸ್ಟೇಡಿಯಂ, ಇದೀಗ ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 2020ರ ಜನವರಿ 19ರಂದು ಕಡೇ ಬಾರಿಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಏಕದಿನ ಪಂದ್ಯದಲ್ಲಿ ಎದುರಾಗಿದ್ದವು. ಇದಾದ ಬಳಿಕ ಕೋವಿಡ್‌ನಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿತ್ತು. ಇದೀಗ ನೂತನ ಫ್ಲಡ್ ಲೈಟ್ಸ್ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಕಲ ರೀತಿಯಲ್ಲೂ ಸಜ್ಜಾಗಿದೆ.

* ನೂತನ ಫ್ಲಡ್ ಲೈಟ್ಸ್ 

ಸ್ಟೇಡಿಯಂಗೆ 1996ರಲ್ಲಿ ಅಳವಡಿಸಲಾಗಿದ್ದ ಫ್ಲಡ್ ಲೈಟ್ಸ್ ಗಳನ್ನು ಸಂಪೂರ್ಣ ಬದಲಾಯಿಸಲಾಗಿದೆ. ನೂತನ ಫ್ಲಡ್ ಲೈಟ್ಸ್ ಅಳವಡಿಕೆಯಿಂದಾಗಿಯೇ ಬೆಂಗಳೂರಿಗೆ ಅಹರ್ನಿಶಿ ಟೆಸ್ಟ್ ಪಂದ್ಯದ ಆತಿಥ್ಯ ದಕ್ಕಿದೆ. ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲಡ್ ಲೈಟ್ಸ್ ಗಳನ್ನು ಹಾಕಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ತಾಂತ್ರಿಕ ಸಮಿತಿಯಿಂದಲೂ ಒಪ್ಪಿಗೆ ದಕ್ಕಿದ್ದು, ಲೋಹದ ಟವರ್‌ಗಳಲ್ಲಿ ಹಾಲೈಡ್ ದೀಪಗಳನ್ನು ಹಾಕಲಾಗಿದೆ.

* ಸ್ಟೇಡಿಯಂನಲ್ಲಿ ಹಬ್ಬದ ವಾತಾವರಣ

ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹೊಸ ಫ್ಲಡ್ ಲೈಟ್ಸ್ ಅಡಿಯಲ್ಲಿ ಮೊದಲ ಬಾರಿಗೆ ಅಹರ್ನಿಶಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಸಿಎ ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೆಎಸ್‌ಸಿಎ ಖಜಾಂಚಿ ಹಾಗೂ ವಕ್ತಾರ ವಿನಯ್ ಮೃತ್ಯುಂಜಯ ವಿಜಯವಾಣಿಗೆ ತಿಳಿಸಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸುತ್ತಿರುವುದು ಸಂತೋಷ ತಂದಿದೆ ಎಂದರು.

* ಪಂದ್ಯದ ವೇಳೆ ಮ್ಯೂಸಿಕ್

ಈ ಬಾರಿ ಪಂದ್ಯದ ಜತೆಗೆ ಮ್ಯೂಸಿಕ್ ಕೂಡ ಪ್ರೇಕ್ಷಕರನ್ನು ರಂಜಿಸಲಿದೆ. ಐಪಿಎಲ್‌ನಲ್ಲಷ್ಟೇ ಹಾಕಲಾಗುವ ಮ್ಯೂಸಿಕ್‌ಗೆ ಟೆಸ್ಟ್ ಕ್ರಿಕೆಟ್‌ಗೂ ಅಳವಡಿಸಿಕೊಳ್ಳುವಂತೆ ಬಿಸಿಸಿಐ ಅನುಮತಿ ನೀಡಿದೆ ಎಂದು ವಿನಯ್ ತಿಳಿಸಿದರು. ಪಂದ್ಯದಲ್ಲಿ ಮನರಂಜನೆ ಹೆಚ್ಚಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು. ಪಂದ್ಯದ ಮೊದಲ ಎರಡು ದಿನಗಳ ಆಟ (ಶನಿವಾರ, ಭಾನುವಾರ) ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿದ್ದು, ಪಿಚ್ ಸ್ಪರ್ಧಾತ್ಮಕವಾಗಿದ್ದು. ರೋಚಕ ಪಂದ್ಯಕ್ಕೆ ನಾವೆಲ್ಲರೂ ಸಾಕ್ಷಿಯಾಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net