

ಕೇಪ್‌ಟೌನ್: ಕೆಳ ಕ್ರಮಾಂಕದ ಬ್ಯಾಟರ್ ದೀಪಕ್ ಚಹರ್ (54 ರನ್,34 ಎಸೆತ, 5 ಬೌಂಡರಿ, 2 ಸಿಕ್ಸರ್) ಕಡೇ ಹಂತದಲ್ಲಿ ಗೆಲುವಿಗಾಗಿ ಹೋರಾಡಿದರೂ ದಕ್ಷಿಣ ಆಫ್ರಿಕಾದ ಸಂಘಟಿತ ದಾಳಿಗೆ ನಲುಗಿದ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ ವೀರೋಚಿತ ಸೋಲು ಕಂಡಿತು. ಕಡೇ ಏಕದಿನ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸುವ ಯತ್ನದಲ್ಲಿದ್ದ ಕನ್ನಡಿಗ ಕೆಎಲ್ ರಾಹುಲ್ ಪಡೆ 0-3 ವೈಟ್‌ವಾಷ್ ಮುಖಭಂಗ ಅನುಭವಿಸಿತು. ದಿಗ್ಗಜ ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಮೊದಲ ವಿದೇಶಿ ಪ್ರವಾಸದಲ್ಲೇ ಭಾರತ ಮುಗ್ಗರಿಸಿತು. ಈ ಮುನ್ನ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಭಾರತ 1-2ರಿಂದ ಸೋತಿತ್ತು.
ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್ ಡಿ ಕಾಕ್ (124 ರನ್, 130 ಎಸೆತ, 12 ಬೌಂಡರಿ, 2 ಸಿಕ್ಸರ್) ಅಕರ್ಷಕ ಶತಕದ ನಡುವೆಯೂ ಕೆಳಕ್ರಮಾಂಕದಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ (59ಕ್ಕೆ 3) ದಾಳಿಗೆ ನಲುಗಿ 49.5 ಓವರ್‌ಗಳಲ್ಲಿ 287ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ತಂಡ ಸಂಘಟಿತ ಹೋರಾಟದ ನಡುವೆಯೂ 49.2 ಓವರ್‌ಗಳಲ್ಲಿ 283 ರನ್‌ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ: 49.5 ಓವರ್‌ಗಳಲ್ಲಿ 287 (ಕ್ವಿಂಟನ್ ಡಿ ಕಾಕ್ 124, ರಾಸೀ ವ್ಯಾನ್ ಡರ್ ಡುಸೆನ್ 52, ಡೇವಿಡ್ ಮಿಲ್ಲರ್ 39, ಡ್ವೈನ್ ಪ್ರಿಟೋರಿಯಸ್ 20, ಪ್ರಸಿದ್ಧ ಕೃಷ್ಣ 59ಕ್ಕೆ 3, ಜಸ್‌ಪ್ರೀತ್ ಬುಮ್ರಾ 52ಕ್ಕೆ 2, ದೀಪಕ್ ಚಹರ್ 53ಕ್ಕೆ 2), ಭಾರತ: 49.2 ಓವರ್‌ಗಳಲ್ಲಿ 283 (ರಾಹುಲ್ 9, ಶಿಖರ್ ಧವನ್ 61, ವಿರಾಟ್ ಕೊಹ್ಲಿ 65, ಶ್ರೇಯಸ್ ಅಯ್ಯರ್ 26, ಸೂರ್ಯಕುಮಾರ್ ಯಾದವ್ 39, ದೀಪಕ್ ಚಹರ್ 54, ಲುಂಗಿ ಎನ್‌ಗಿಡಿ 58ಕ್ಕೆ 3, ಡ್ವೈನ್ ಪ್ರಿಟೋರಿಯಸ್ 54ಕ್ಕೆ 2).