

ಜೊಹಾನ್ಸ್‌ಬರ್ಗ್: ವೇಗಿ ಶಾರ್ದೂಲ್ ಠಾಕೂರ್ (61ಕ್ಕೆ 7) ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಕಡಿವಾಣ ಹೇರಲು ಯಶಸ್ವಿಯಾಯಿತು. ಮುಂಬೈ ವೇಗಿ ಶಾರ್ದೂಲ್ ಅಬ್ಬರದ ನಡುವೆಯೂ ಆತಿಥೇಯ ತಂಡ 27 ರನ್‌ಗಳ ಅಲ್ಪಮುನ್ನಡೆ ಸಾಧಿಸಿತು. ಎರಡನೇ ಸರದಿಯಲ್ಲಿ ಆರಂಭಿಕರನ್ನು ಕಳೆದುಕೊಂಡರೂ ಎಚ್ಚರಿಕೆ ನಿರ್ವಹಣೆಗೆ ಮುಂದಾಗಿರುವ ಭಾರತ ತಂಡ ಆತಿಥೇಯರಿಗೆ ಸವಾಲಿನ ಗುರಿ ನೀಡುವತ್ತ ದೃಷ್ಟಿನೆಟ್ಟಿದೆ.
ವಾಂಡರರ್ಸ್ ಮೈದಾನದಲ್ಲಿ ಮಂಗಳವಾರ 1 ವಿಕೆಟ್‌ಗೆ 35 ರನ್‌ಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 79.4 ಓವರ್‌ಗಳಲ್ಲಿ 229 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ತಂಡ 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 85 ರನ್ ಪೇರಿಸಿದೆ. ಆತಿಥೇಯ ತಂಡದ ಮೊದಲ ಇನಿಂಗ್ಸ್ ರನ್ ಚುಕ್ತಾ ಮಾಡಿ ಒಟ್ಟಾರೆ 58 ರನ್ ಮುನ್ನಡೆ ಸಾಧಿಸಿದೆ. ಭಾರತ ಮೊದಲ ಇನಿಂಗ್ಸ್ 202 ರನ್ ಗಳಿಸಿತ್ತು.
ಭಾರತ : 202 ಮತ್ತು 20 ಓವರ್‌ಗಳಲ್ಲಿ 2 ವಿಕೆಟ್‌ಗೆ 85 (ಚೇತೇಶ್ವರ ಪೂಜಾರ 35*, ಮಯಾಂಕ್ ಅಗರ್ವಾಲ್ 23, ಅಜಿಂಕ್ಯ ರಹಾನೆ 11*, ಕೆಎಲ್ ರಾಹುಲ್ 8, ಡುವಾನೆ ಒಲಿವೀರ್ 22ಕ್ಕೆ 1, ಮಾರ್ಕೋ ಜಾನ್ಸೆನ್ 18ಕ್ಕೆ 1), ದಕ್ಷಿಣ ಆಫ್ರಿಕಾ: 79.4 ಓವರ್‌ಗಳಲ್ಲಿ 229 (ಡೀನ್ ಎಲ್ಗರ್ 28, ಕೀಗನ್ ಪೀಟರ್ಸೆನ್ 62, ತೆಂಬಾ ಬವುಮಾ 51, ಕೈಲ್ ವೆರೀನ್ 21, ಕೇಶವ್ ಮಹಾರಾಜ್ 21, ಶಾರ್ದೂಲ್ ಠಾಕೂರ್ 61ಕ್ಕೆ 7, ಮೊಹಮದ್ ಶಮಿ 52ಕ್ಕೆ 2, ಜಸ್‌ಪ್ರೀತ್ ಬುಮ್ರಾ 49ಕ್ಕೆ 1).