ಟಿ20 ವಿಶ್ವಕಪ್ ಟೂರ್ನಿ; ಇಂದು ಭಾರತ-ಪಾಕ್ ಟಿ20 ಕದನ

india and pakistan match preview for web
Published on

ದುಬೈ: ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ದುಬೈ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿ ಆಗಲಿವೆ. ವಿಶ್ವಕಪ್ ಹುಟ್ಟಿನಿಂದಲೂ ಪಾಕ್ ಎದುರು ಅಜೇಯ ಸಾಧನೆ ಮಾಡುತ್ತಾ ಬಂದಿರುವ ಭಾರತ ತಂಡ ಮಾನಸಿಕವಾಗಿ ಮೇಲುಗೈ ಹೊಂದಿದೆ. ರಾಜತಾಂತ್ರಿಕ ಸಮಸ್ಯೆಯಿಂದಾಗಿ ಎರಡು ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟುಗಳಿಂದ ಅಭಿಮಾನಿಗಳ ಪಾಲಿಗೂ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2007ರಿಂದ ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಎದುರಾಗಿರುವ 5 ಹಣಾಹಣಿಯಲ್ಲೂ ಭಾರತವೇ ಜಯ ದಾಖಲಿಸಿದೆ. ಹಿಂದಿನ 5 ಜಯಕ್ಕೆ ರೂಪುರೇಷೆ ಸಿದ್ಧಪಡಿಸಿದ್ದ ಎಂಎಸ್ ಧೋನಿ, ಈ ಬಾರಿ ತಂಡದ ಮೆಂಟರ್ ಆಗಿರುವುದು ವಿಶೇಷ. ವಿರಾಟ್ ಕೊಹ್ಲಿ ಸಾರಥ್ಯದಲ್ಲೂ ಅಜೇಯ ದಾಖಲೆ ಕಾಯ್ದುಕೊಂಡು ಟೂರ್ನಿಯಲ್ಲಿ ಶುಭಾರಂಭ ಕಾಣುವುದು ಟೀಮ್ ಇಂಡಿಯಾದ ಕನಸಾಗಿದೆ. ಎಲ್ಲ ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಅನ್ವಯ, ಈ ಸಲವೂ ಭಾರತವೇ ಪಂದ್ಯದ ೇವರಿಟ್ ತಂಡವೆನಿಸಿದೆ.

*ಕೊಹ್ಲಿ ಪಡೆಗೆ ಗೆಲುವಿನ ಕನಸು

ವಿಶ್ವಕಪ್ ಟೂರ್ನಿಗಳಲ್ಲಿ (ಏಕದಿನ, ಟಿ20) ಪಾಕ್ ಎದುರು ಭಾರತ ತಂಡ ಸೋತಿಲ್ಲ. ಇದೀಗ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರಿಸುವ ಹಂಬಲದಲ್ಲಿದೆ. ಭಾರತ ತಂಡ ಇದುವರೆಗೆ ಸೋಲನುಭವಿಸದಿದ್ದರೂ ಪ್ರತಿ ಪಂದ್ಯಗಳೂ ಪ್ರಮುಖವಾಗಿರುತ್ತವೆ. ವಿಶ್ವದರ್ಜೆ ಬ್ಯಾಟರ್‌ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಪಡೆಗೆ ಬ್ಯಾಟಿಂಗ್ ವಿಭಾಗವೇ ದೊಡ್ಡ ಶಕ್ತಿಯಾಗಿದೆ. ರೋಹಿತ್ ಶರ್ಮ, ಕನ್ನಡಿಗ ರಾಹುಲ್ ರಾಹುಲ್, ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಆಲ್ರೌಂಡರ್ ಕೋಟಾದಡಿ ರವೀಂದ್ರ ಜಡೇಜಾ ಏಕೈಕ ಆಟಗಾರನಾಗಿದ್ದಾರೆ. ಹಾರ್ದಿಕ್ ಪಾಂಡ್ಯರನ್ನು ಕೇವಲ ಬ್ಯಾಟರ್ ಆಗಿ ಉಪಯೋಗಿಸಿಕೊಂಡರೆ ಭಾರತಕ್ಕೆ 6ನೇ ಬೌಲರ್‌ನ ಅಲಭ್ಯತೆ ಕಾಡಲಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯೇ ತಂಡಕ್ಕೆ ದೊಡ್ಡ ಕಂಗಟ್ಟಾಗಿದೆ. ಹಾರ್ದಿಕ್ ಪಾಂಡ್ಯ ಕೇವಲ ಬ್ಯಾಟರ್ ಆಗಿ ಆಯ್ಕೆ ಲಭ್ಯರಾದರೆ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರನ್ನೂ ಆಯ್ಕೆಗೆ ಪರಿಗಣಿಸಬಹುದು. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಭುವನೇಶ್ವರ್ ಕುಮಾರ್ ವೇಗಿಗಳ ಜತೆಗೆ ಆರ್. ಅಶ್ವಿನ್, ರಾಹುಲ್ ಚಹರ್ ಅಥವಾ ವರುಣ್ ಚಕ್ರವರ್ತಿ ಸ್ಪಿನ್ ವಿಭಾಗದಲ್ಲಿ ಚೆಂಡು ಹಂಚಿಕೊಳ್ಳಬಹುದು.

*ಪಾಕ್ ಕಳಚುವುದೇ ಸೋಲಿನ ಸರಪಳಿ?

ತವರಿಗೆ ವಿದೇಶಿ ತಂಡಗಳು ಆಗಮಿಸದ ಹಿನ್ನೆಲೆಯಲ್ಲಿ ಯುಎಇಯನ್ನು ಬದಲಿ ತವರು ತಾಣವನ್ನಾಗಿ ಆಯ್ದುಕೊಂಡಿರುವ ಪಾಕಿಸ್ತಾನ ತಂಡ ದೊಡ್ಡ ಟೂರ್ನಿಗಳಲ್ಲಿ ಭಾರತದ ಎದುರು ಅನುಭವಿಸುತ್ತಿರುವ ಸರಣಿ ಸೋಲಿನ ಸರಪಳಿ ಕಳಚುವ ಯತ್ನದಲ್ಲಿದೆ. ನಾಯಕ ಬಾಬರ್ ಅಜಮ್, ಅನುಭವಿ ಮೊಹಮದ್ ಹಫೀಜ್, ಖರ್ ಜಮಾನ್, ಶೋಯಿಬ್ ಮಲಿಕ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿಯೇ ಇದೆ. ಶಾಹಿನ್ ಷಾ ಅಫ್ರಿದಿ, ಹ್ಯಾರಿಸ್ , ಹಸನ್ ಅಲಿ, ಹೈದರ್ ಅಲಿರಂಥ ಬೌಲರ್‌ಗಳು ಕಡಿವಾಣ ಹಾಕಬಲ್ಲರು.

ಟೀಮ್ ನ್ಯೂಸ್:

ಭಾರತ: ಆರಂಭಿಕ ಕೆಎಲ್ ರಾಹುಲ್ ಅಭ್ಯಾಸ ಪಂದ್ಯದ ವೇಳೆ ಸಣ್ಣ ಪ್ರಮಾಣದಲ್ಲಿ ಬೆನ್ನು ನೋವು ಅನುಭವಿಸಿದರೂ ಯಾವುದೇ ಸಮಸ್ಯೆ ಇಲ್ಲ. ಪಾಕ್ ತಂಡದ ಫಖರ್ ಜಮಾನ್ ಅಬ್ಬರವನ್ನು ಅರಿತಿರುವ ಭಾರತ, ಅಶ್ವಿನ್ ಅವರನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿದೆ. ಮೂವರು ವೇಗಿಗಳನ್ನು ಕಣಕ್ಕಿಳಿಸಲಿದ್ದು, ವರುಣ್ ಚಕ್ರವರ್ತಿ ಅದೃಷ್ಟದ ನಿರೀಕ್ಷೆಯಲ್ಲಿದೆ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್/ಇಶಾನ್ ಕಿಶನ್, ರಿಷಭ್ ಪಂತ್ (ವಿಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ರಾಹುಲ್ ಚಹರ್/ವರುಣ್ ಚಕ್ರವರ್ತಿ, ಭುವನೇಶ್ವರ್/ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ.

ಪಾಕಿಸ್ತಾನ: ಪಂದ್ಯಕ್ಕೂ ಮುನ್ನಾದಿನವೇ ಪಾಕ್ ತಂಡ 12ರ ಬಳಗವನ್ನು ಬಿಡುಗಡೆ ಮಾಡಿದೆ. ಈ ಪೈಕಿ ರ್ಸ್ರಾಜ್ ಅಹ್ಮದ್, ಮೊಹಮದ್ ವಾಸಿಂ ಹಾಗೂ ಮೊಹಮದ್ ನವಾಜ್ 11ರ ಬಳಗದ ರೇಸ್‌ನಿಂದ ಹೊರಗುಳಿದಿದ್ದಾರೆ. ಅನುಭವಿ ಶೋಯಿಬ್ ಮಲಿಕ್ ಅಥವಾ ಹೈದರ್ ಅಲಿ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಸಂಭಾವ್ಯ ತಂಡ: ಬಾಬರ್ ಅಜಮ್ (ನಾಯಕ), ಮೊಹಮದ್ ರಿಜ್ವಾನ್ (ವಿಕೀ), ಫಖರ್ ಜಮಾನ್, ಮೊಹಮದ್ ಹಫೀಜ್, ಶೋಯಿಬ್ ಮಲಿಕ್/ಹೈದರ್ ಅಲಿ, ಅಸಿಫ್ ಅಲಿ, ಇಮಾದ್ ವಾಸಿಂ, ಶಾದಬ್ ಖಾನ್, ಹಸನ್ ಅಲಿ, ಹ್ಯಾರಿಸ್, ಶಾಹಿನ್ ಷಾ ಅಫ್ರಿದಿ.

*5: ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಪಾಕ್ ಎದುರು ಇದುವರೆಗೆ ಆಡಿರುವ 5 ಪಂದ್ಯಗಳಲ್ಲೂ ಜಯ ದಾಖಲಿಸಿದ್ದು, ಐದೂ ಜಯ ಧೋನಿ ಸಾರಥ್ಯದಲ್ಲಿಯೇ ಬಂದಿರುವುದು ವಿಶೇಷ.

* ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಪಾಕ್ ಎದುರು ಆಡಿರುವ ಮೂರು ಪಂದ್ಯಗಳಲ್ಲೂ ಅಜೇಯ ಸಾಧನೆ ಮಾಡಿದ್ದಾರೆ. 2012, 2014 ಹಾಗೂ 2016ರಲ್ಲಿ ಕ್ರಮವಾಗಿ 78, 36 ಹಾಗೂ 55 ರನ್‌ಗಳಿಸಿದ್ದಾರೆ.

* 2019ರ ಜುಲೈನಿಂದ ಪಾಕಿಸ್ತಾನ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟಿದೆ. ಪ್ರತಿ 24.9 ಎಸೆತಗಳಿಗೆ ಒಂದು ಸಿಕ್ಸರ್ ನೀಡಿದೆ. ಟೂರ್ನಿಯಲ್ಲಿ ಸ್ಪರ್ಧಿಸಿರುವ ಎಲ್ಲ ತಂಡಗಳಿಗೂ ಹೋಲಿಸಿದರೆ ದುಬಾರಿ ಎನಿಸಿದೆ.

*ಮುಖಾಮುಖಿ: 8

ಭಾರತ: 7

ಪಾಕಿಸ್ತಾನ: 1

ಟಿ20 ವಿಶ್ವಕಪ್‌ನಲ್ಲಿ: 5

ಭಾರತ: 5

ಪಾಕಿಸ್ತಾನ: 0

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net