ಕೊಹ್ಲಿ-ರಹಾನೆ ಜವಾಬ್ದಾರಿಯುತ ಆಟ; ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ 2ನೇ ದಿನ ಮಂದ ಬೆಳಕಿನ ಅಡಚಣೆ

India vs New Zealand,cricket match.
Southampton: India's captain Virat Kohli, right, and batting partner Ajinkya Rahane walk off the field for tea during the second day of the World Test Championship final cricket match between New Zealand and India, at the Rose Bowl in Southampton, England, Saturday, June 19, 2021. AP/PTI Photo(AP06_19_2021_000183B)
Published on

ಸೌಥಾಂಪ್ಟನ್: ಸವಾಲಿನಿಂದ ಕೂಡಿರುವ ಪಿಚ್‌ನಲ್ಲಿ ವೇಗಿಗಳ ಬಿರುಸಿನ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಭಾರತ ತಂಡ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಉತ್ತಮ ಸ್ಥಿತಿ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ. ಉತ್ತಮ ಆರಂಭದ ನಡುವೆಯೂ ದಿಢೀರ್ ಕುಸಿದ ಅನುಭವಿಸಿದ ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ (44*ರನ್, 124 ಎಸೆತ, 1 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (28 ಎಸೆತ, 79 ಎಸೆತ, 4 ಬೌಂಡರಿ) ಜೋಡಿ ಜವಾಬ್ದಾರಿಯುತ ನಿರ್ವಹಣೆ ಮೂಲಕ ಆಸರೆಯಾಗಿದ್ದಾರೆ.

ಮೊದಲ ದಿನದಾಟ ಪೂರ್ತಿ ಮಳೆಯಿಂದಾಗಿ ಆಟ ನಡೆಯದ ಬಳಿಕ ರೋಸ್ ಬೌಲ್ ಸ್ಟೇಡಿಯಂನಲ್ಲಿ ಶನಿವಾರ 2ನೇ ದಿನದಾಟದ ಆರಂಭದಲ್ಲಿ ಟಾಸ್ ಜಯಿಸಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಕೊಹ್ಲಿ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಎಚ್ಚರಿಕೆಯ ನಿರ್ವಹಣೆ ತೋರುತ್ತಿರುವ ಭಾರತ ತಂಡ 2ನೇ ದಿನದಾಟ ಮಂದ ಬೆಳಕಿನಿಂದ ಆಟ ನಿಂತಾಗ 64.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 ರನ್ ಗಳಿಸಿದೆ.

*ದಿಢೀರ್ ಕುಸಿದ ಅಗ್ರ ಕ್ರಮಾಂಕ

ಸುದೀರ್ಘ ಅವಧಿಯನ್ನು ಕ್ವಾರಂಟೈನ್‌ನಲ್ಲಿ ಕಳೆದಿರುವ ಭಾರತದ ಆಟಗಾರರು ಹೆಚ್ಚಿನ ಅಭ್ಯಾಸ ಇಲ್ಲದೆ ಪ್ರತಿಷ್ಠಿತ ಪಂದ್ಯಕ್ಕೆ ಕಣಕ್ಕಿಳಿದರು. ಆರಂಭಿಕರಾದ ರೋಹಿತ್ ಶರ್ಮ (34ರನ್, 68 ಎಸೆತ, 6 ಬೌಂಡರಿ) ಹಾಗೂ ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ (28ರನ್, 64 ಎಸೆತ, 3 ಬೌಂಡರಿ) ಜೋಡಿ ಮಂದಗತಿ ಬ್ಯಾಟಿಂಗ್ ಮೂಲಕ ಎಚ್ಚರಿಕೆ ಆರಂಭ ಕಂಡಿತು. ಕಿವೀಸ್ ಬೌಲರ್‌ಗಳ ದಾಳಿಗೆ ಆರಂಭದಲ್ಲಿ ರನ್ ಗಳಿಸಲು ಪರದಾಡಿದ ಈ ಜೋಡಿ ಕ್ರೀಸ್‌ನಲ್ಲಿ ನೆಲೆಯೂರಲು ಯತ್ನಿಸಿತು. ಶುಭಮಾನ್ ಗಿಲ್ ತವರು ನೆಲದಲ್ಲಿ ಕಳೆದ ಮಾರ್ಚ್‌ನಲ್ಲಿ ಇಂಗ್ಲೆಂಡ್ ಎದುರಿನ ವೈಲ್ಯವನ್ನು ಮೆಟ್ಟಿನಿಲ್ಲಲು ಯತ್ನಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 62 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಕೈಲ್ ಜೇಮಿಸನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ರೋಹಿತ್, 3ನೇ ಸ್ಲಿಪ್‌ನಲ್ಲಿ ಟೀಮ್ ಸೌಥಿ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಕೆಲಹೊತ್ತಿನಲ್ಲೇ ಗಿಲ್ ಕೂಡ ನೀಲ್ ವ್ಯಾಗ್ನರ್ ಎಸೆತದಲ್ಲಿ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್‌ಗೆ ಕ್ಯಾಚ್ ನೀಡಿದರು. ಕೇವಲ 1 ರನ್ ಅಂತರದಲ್ಲಿ ಆರಂಭಿಕರು ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ, ಖಾತೆ ತೆರೆಯಲು ಪರದಾಡುತ್ತಿದ್ದ ಅನುಭವಿ ಚೇತೇಶ್ವರ ಪೂಜಾರ (8 ರನ್) 54 ಎಸೆತ ಎದುರಿಸಿ ಬೌಲ್ಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಈ ವೇಳೆಗೆ ಪೂಜಾರ 3ನೇ ವಿಕೆಟ್‌ಗೆ ನಾಯಕ ಕೊಹ್ಲಿ ಜತೆಗೂಡಿ 25 ರನ್ ಕಲೆಹಾಕಿದ್ದರು.

*ಆಧರಿಸಿದ ರಹಾನೆ-ಕೊಹ್ಲಿ

ಉತ್ತಮ ಆರಂಭದ ನಡುವೆಯೂ ಅಗ್ರ ಕ್ರಮಾಂಕದ ದಿಢೀರ್ ಕುಸಿತದಿಂದ ಆಘಾತ ಎದುರಿಸಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಜೋಡಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದೆ. ನ್ಯೂಜಿಲೆಂಡ್ ವೇಗಿಗಳ ಮೊನಚಿನ ದಾಳಿಯನ್ನು ಈ ಜೋಡಿ ಸಮರ್ಥವಾಗಿ ಎದುರಿಸಿದೆ. ಸತತ 45 ಇನಿಂಗ್ಸ್‌ಗಳಿಂದ (ಎಲ್ಲಾ ಮಾದರಿ) ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ರಹಾನೆ ಜೋಡಿ ಮುರಿಯದ 4ನೇ ವಿಕೆಟ್‌ಗೆ 58 ರನ್ ಜತೆಯವಾಟವಾಡಿ ಇನಿಂಗ್ಸ್ ಮುಂದುವರಿಸಿದೆ.

ಮಿಲ್ಖಾ ಸಿಂಗ್‌ಗೆ ಶ್ರದ್ಧಾಂಜಲಿ

ಟೀಮ್ ಇಂಡಿಯಾ ಆಟಗಾರರು ಶನಿವಾರ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ, ಶುಕ್ರವಾರ ರಾತ್ರಿ ನಿಧನರಾದ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕ್ರಿಕೆಟ್ ಹೊರತಾದ ಕ್ರೀಡಾತಾರೆಯರಿಗೆ ಟೀಮ್ ಇಂಡಿಯಾ ಗೌರವ ಸಲ್ಲಿಸಿದ ಅಪರೂಪದ ಕ್ಷಣ ಇದಾಗಿದೆ.

*ಕಾಡಿದ ಮಂದ ಬೆಳಕು

ಎರಡನೇ ದಿನದಾಟದಲ್ಲೂ ಮಂದಬೆಳಕು ಕಾಡಿತು. ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಕಾಣದೆ ರದ್ದುಗೊಂಡಿದ್ದರಿಂದ ಶನಿವಾರ 30 ನಿಮಿಷ ಬೇಗ ಪಂದ್ಯ ಆರಂಭಿಸಲಾಯಿತು. ಮೊದಲ ಅವಧಿಯ ಆಟ ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗಿದರೆ, 2ನೇ ಅವಧಿಯ ಆಟಕ್ಕೆ ಮಂದ ಬೆಳಕು ಕಾಡಿತು. ಇದರಿಂದ ನಿಗದಿತ ಅವಧಿಗೂ ಮುನ್ನವೇ ಚಹಾ ವಿರಾಮ ಘೋಷಿಸಲಾಯಿತು. ಬಳಿಕ ಕೇವಲ 3 ಓವರ್‌ಗಳ ಆಟ ನಡೆದ ಬಳಿಕ ಮತ್ತೆ ಮಂದಬೆಳಕು ಕಾಡಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

*4: ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನ 4ನೇ ಕ್ರಮಾಂಕದಲ್ಲಿ 6 ಸಾವಿರ ರನ್ ಪೂರೈಸಿದ ವಿಶ್ವದ 9ನೇ ಹಾಗೂ ಭಾರತದ 2ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ ಈ ಕ್ರಮಾಂಕದಲ್ಲಿ 13492 ರನ್ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ.

*42: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 7500 ರನ್ ಪೂರೈಸಿದ ವಿಶ್ವದ 42ನೇ ಹಾಗೂ ಭಾರತದ 6ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ವಿರಾಟ್ ಕೊಹ್ಲಿ ಹಾಗೂ ಸುನೀಲ್ ಗಾವಸ್ಕರ್ ಇಬ್ಬರೂ 154ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

*2: ರೋಹಿತ್ ಶರ್ಮ-ಶುಭಮಾನ್ ಗಿಲ್ ಜೋಡಿ ಐಸಿಸಿ ಫೈನಲ್‌ನಲ್ಲಿ ಅರ್ಧಶತಕದ ಜತೆಯಾಟವಾಡಿದ ಭಾರತದ 2ನೇ ಆರಂಭಿಕ ಜೋಡಿ ಎನಿಸಿಕೊಂಡಿತು. ಇದಕ್ಕೂ ಮೊದಲು 2000ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡುಲ್ಕರ್ ಈ ಸಾಧನೆ ಮಾಡಿತ್ತು.

*ಧೋನಿ ದಾಖಲೆ ಹಿಂದಿಕ್ಕಿದ ಕೊಹ್ಲಿ

ಐತಿಹಾಸಿಕ ಟೆಸ್ಟ್ ಪಂದ್ಯದ ನಾಣ್ಯಚಿಮ್ಮುವುದರೊಂದಿಗೆ ವಿರಾಟ್ ಕೊಹ್ಲಿ ಹಲವು ದಾಖಲೆಗಳ ಒಡೆಯನಾದರು. ಅತಿಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ ಭಾರತದ ನಾಯಕ ಎನಿಸಿಕೊಂಡರು. 61ನೇ ಪಂದ್ಯಕ್ಕೆ ನಾಯಕತ್ವ ವಹಿಸಿಕೊಂಡಿರುವ ಕೊಹ್ಲಿ, ಎಂಎಸ್ ಧೋನಿ (60 ಟೆಸ್ಟ್) ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. 2014ರಿಂದ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 36 ಜಯ, 14 ಸೋಲು, 10ರಲ್ಲಿ ಡ್ರಾ ಕಂಡಿದೆ.

ಭಾರತ: 64.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 (ರೋಹಿತ್ ಶರ್ಮ 34, ವಿರಾಟ್ ಕೊಹ್ಲಿ 44*, ಅಜಿಂಕ್ಯ ರಹಾನೆ 29*, ಶುಭಮಾನ್ ಗಿಲ್ 28, ಚೇತೇಶ್ವರ ಪೂಜಾರ 8, ಟ್ರೆಂಟ್ ಬೌಲ್ಟ್ 32ಕ್ಕೆ 1, ನೀಲ್ ವಾಗ್ನರ್ 28ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net