

ಕೋಲ್ಕತ: ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ತಂಡ, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಸನ್ನದ್ಧವಾಗಿದೆ. ನೂತನ ಕೋಚ್ ರಾಹುಲ್ ದ್ರಾವಿಡ್ ಹಾಗೂ ನೂತನ ನಾಯಕ ರೋಹಿತ್ ಶರ್ಮ ಜೋಡಿ ಮೊದಲ ಸರಣಿಯಲ್ಲೇ ಮೋಡಿ ಮಾಡಿದ್ದು, ಇದೀಗ ಸರಣಿ ಕ್ಲೀನ್‌ಸ್ವೀಪ್ ಕನಸಿನಲ್ಲಿದೆ. ಅಲ್ಲದೆ, ಅಂತಿಮ ಪಂದ್ಯಕ್ಕೆ ಕೆಲವೊಂದು ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಗಳಿವೆ. 19 ವಯೋಮಿತಿ ಹಾಗೂ ಭಾರತ ಎ ತಂಡಗಳಿಗೆ ಮಾರ್ಗದರ್ಶಕರಾಗಿದ್ದ ವೇಳೆಯೂ ದ್ರಾವಿಡ್ ತಂಡದಲ್ಲಿ ಆವರ್ತನ ಪದ್ಧತಿ ಜಾರಿಗೊಳಿಸಿದ್ದರು. ಇದೀಗ ಸರಣಿ ವಶವಾಗಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲೂ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಕಡೇ ಎರಡು ವಾರಗಳಲ್ಲಿ 5 ಟಿ20 ಪಂದ್ಯಗಳನ್ನಾಡಿರುವ ಪ್ರವಾಸಿ ನ್ಯೂಜಿಲೆಂಡ್ ಆಟಗಾರರು ಸಾಕಷ್ಟು ಬಳಲಿದ್ದು, ವೈಟ್‌ವಾಷ್ ಭೀತಿಯಿಂದ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
* ಆತ್ಮವಿಶ್ವಾಸದಲ್ಲಿ ಭಾರತ
ಜೈಪುರ ಹಾಗೂ ರಾಂಚಿಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಇದೀಗ ಈಡನ್ ಗಾರ್ಡನ್ ಮೈದಾನದಲ್ಲಿ ಟ್ರೋಫಿ ಎತ್ತಿ ಹಿಡಿಯುವುದು ಪಕ್ಕಾ ಆಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಬೆಂಚು ಕಾಯಿಸಿರುವ ಕೆಲ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ವೆಂಕಟೇಶ್ ಅಯ್ಯರ್, ತಂಡದಲ್ಲಿ 6ನೇ ಬೌಲರ್ ಎಂದು ಗುರುತಿಸಿಕೊಂಡಿದ್ದರೂ ಇದುವರೆಗೂ ಒಂದು ಓವರ್ ಎಸೆದಿಲ್ಲ. ಹೀಗಾಗಿ ವೆಂಕಟೇಶ್ ಅಯ್ಯರ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆದರೂ ಸ್ಲಾಗ್ ಓವರ್‌ಗಳಲ್ಲಿ ದಿಢೀರ್ ಕುಸಿತ ತಂಡವನ್ನು ಕಾಡುತ್ತಿದೆ. ಸರಣಿ ಕೈತಪ್ಪಿದ್ದರೂ ಕಡೇ ಹಣಾಹಣಿಯಲ್ಲಿ ಗೆಲುವು ಸಾಧಿಸಿ ಟೆಸ್ಟ್ ಸರಣಿಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಯೋಚನೆಯಲ್ಲಿದೆ.
ಟೀಮ್ ನ್ಯೂಸ್:
ಭಾರತ: ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದ ಋತುರಾಜ್ ಗಾಯಕ್ವಾಡ್, ಆವೇಶ್ ಖಾನ್, ಇಶಾನ್ ಕಿಶನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದಿರುವ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಉಪನಾಯಕ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಿದರೆ, ಋತುರಾಜ್ ಕಣಕ್ಕಿಳಿಯಲಿದ್ದಾರೆ. ದೀಪಕ್ ಚಹರ್ ಅಥವಾ ಭುವನೇಶ್ವರ್ ಕುಮಾರ್ ಬದಲಿಗೆ ಆವೇಶ್ ಖಾನ್, ಅಕ್ಷರ್ ಪಟೇಲ್ ಅಥವಾ ಆರ್.ಅಶ್ವಿನ್ ಬದಲಿಗೆ ಯಜುವೇಂದ್ರ ಚಾಹಲ್ ಸ್ಥಾನ ಪಡೆಯಬಹುದು. ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡಬೇಕಿರುವ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಕಣಕ್ಕಿಳಿಬಹುದು.
ನ್ಯೂಜಿಲೆಂಡ್: ಎರಡನೇ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿಕೊಂಡಿದ್ದ ಕಿವೀಸ್ ತಂಡ ಕಡೇ ಪಂದ್ಯಕ್ಕೂ ಕೆಲವೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.
* ಇಲ್ಲೂ ಟಾಸ್ ನಿರ್ಣಾಯಕ
ಈಡನ್ ಗಾರ್ಡನ್ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ರನ್ ಹೊಳೆ ಹರಿಯುವ ಸಾಧ್ಯತೆಗಳಿವೆ. ನವೆಂಬರ್ ತಿಂಗಳಲ್ಲಿ ಇಬ್ಬನಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಟಾಸ್ ನಿರ್ಣಾಯಕವಾಗಲಿದೆ. ಹಿಂದಿನ ಎರಡೂ ಪಂದ್ಯಗಳಲ್ಲೂ ರೋಹಿತ್ ಶರ್ಮ ಟಾಸ್ ಜತೆಗೆ ಪಂದ್ಯ ಜಯಿಸಲು ಯಶಸ್ವಿಯಾಗಿದ್ದರು.
ಪಂದ್ಯ ಆರಂಭ; ರಾತ್ರಿ 7.00ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್