

ದುಬೈ: ಉಪಾಂತ್ಯಕ್ಕೇರುವ ಕನಸು ಬತ್ತಿಹೋಗಿದ್ದರೂ ಅಬ್ಬರದ ಪ್ರದರ್ಶನ ತೋರಿದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಗೆ ಗೆಲುವಿನ ವಿದಾಯ ಹಾಡಿತು. ಆಲ್ರೌಂಡ್ ನಿರ್ವಹಣೆ ತೋರಿದ ವಿರಾಟ್ ಕೊಹ್ಲಿ ಬಳಗ 9 ವಿಕೆಟ್‌ಗಳಿಂದ ಕ್ರಿಕೆಟ್ ಶಿಶು ನಮೀಬಿಯ ಎದುರು ಜಯಭೇರಿ ಬಾರಿಸಿತು. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಹಾಗೂ ಮುಖ್ಯಕೋಚ್ ರವಿಶಾಸ್ತ್ರಿ ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗವನ್ನು ಗೆಲುವಿನ ಉಡುಗೊರೆಯೊಂದಿಗೆ ಬೀಳ್ಕೊಟ್ಟಿತು. 2012ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಲು ವಿಫಲವಾದ ಭಾರತ ತಂಡ ಬರಿಗೈಲಿ ತವರಿಗೆ ಮರಳಲಿದೆ.
ಟಾಸ್ ಜಯಿಸಿದ ನಾಯಕ ವಿರಾಟ್ ಕೊಹ್ಲಿ ನಮೀಬಿಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಸ್ಪಿನ್ ಜೋಡಿ ರವೀಂದ್ರ ಜಡೇಜಾ (16ಕ್ಕೆ 3) ಹಾಗೂ ಆರ್.ಅಶ್ವಿನ್ (20ಕ್ಕೆ 3) ಮಾರಕ ದಾಳಿಗೆ ನಲುಗಿದ ನಮೀಬಿಯ 8 ವಿಕೆಟ್‌ಗೆ 132 ರನ್‌ಗಳಿಸಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ, ಉಪನಾಯಕ ರೋಹಿತ್ ಶರ್ಮ (56ರನ್, 37 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (54*ರನ್, 36ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 136 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ನಮೀಬಿಯ: 8 ವಿಕೆಟ್‌ಗೆ 132 (ಸ್ಟೇನ್ ಬಾರ್ಡ್ 21, ಡೇವಿಡ್ ವೈಸ್ 26, ಜಸ್‌ಪ್ರೀತ್ ಬುಮ್ರಾ 19ಕ್ಕೆ 2, ಆರ್.ಅಶ್ವಿನ್ 20ಕ್ಕೆ 3, ರವೀಂದ್ರ ಜಡೇಜಾ 16ಕ್ಕೆ 3), ಭಾರತ : 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 136 (ಕೆಎಲ್ ರಾಹುಲ್ 54*, ರೋಹಿತ್ ಶರ್ಮ 56, ಸೂರ್ಯಕುಮಾರ್ ಯಾದವ್ 25*)