

ಲೀಡ್ಸ್: ಪ್ರತಿಷ್ಠಿತ ಲಾರ್ಡ್ಸ್ ಅಂಗಳದಲ್ಲಿ ಜಯದ ನಗಾರಿ ಬಾರಿಸಿ ಹೆಡಿಂಗ್ಲೆಗೆ ಬಂದಿಳಿದಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಬುಧವಾರದಿಂದ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ. ಆಂಗ್ಲರ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸಿದ ಸುವರ್ಣ ಸಂಭ್ರಮದಲ್ಲಿರುವ ಭಾರತ ತಂಡ, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ವಿರಾಟ್ ಕೊಹ್ಲಿ ಬಳಗ ಸರಣಿ ಗೆಲುವಿನ ಅವಕಾಶ ವೃದ್ಧಿಸಿಕೊಳ್ಳುವ ತವಕದಲ್ಲಿದೆ. ಸಂಘಟಿತ ಹೋರಾಟದಿಂದ ಟೀಮ್ ಇಂಡಿಯಾ ಗಮನಸೆಳೆಯುತ್ತಿದ್ದರೂ 2019ರ ನವೆಂಬರ್‌ನಿಂದ ಶತಕ ಸಿಡಿಸಲು ವಿಫಲವಾಗಿರುವ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ತಂಡದ ಆಡಳಿತ ಮಂಡಳಿಯನ್ನು ಚಿಂತೆಗೀಡುಮಾಡಿದೆ. ಸರಣಿಯಲ್ಲಿ ಇದುವರೆಗೆ ಆಡಿರುವ 3 ಇನಿಂಗ್ಸ್‌ಗಳಿಂದ ಕೊಹ್ಲಿ 62 ರನ್‌ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಆರಂಭಿಕ ಹಂತದಲ್ಲಿ ಕನ್ನಡಿಗ ಕೆಎಲ್ ರಾಹುಲ್, ರೋಹಿತ್ ಶರ್ಮ ಉತ್ತಮ ಆರಂಭ ನೀಡುತ್ತಿದ್ದರೂ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಒಳಗೊಂಡ ಅನುಭವಿಗಳು ನಿರೀಕ್ಷಿತ ನಿರ್ವಹಣೆ ನೀಡುತ್ತಿಲ್ಲ. ಲಾರ್ಡ್ಸ್ ಮೈದಾನದಲ್ಲಿ ಪೂಜಾರ-ಅಜಿಂಕ್ಯ ಜೋಡಿ ಸುಮಾರು 50 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಜವಾಬ್ದಾರಿ ನಿಭಾಯಿಸಿತ್ತು. ಇದನ್ನು ಹೊರತಾಗಿ ಈ ಜೋಡಿಯಿಂದ ಇದುವರೆಗೆ ದೊಡ್ಡ ಮೊತ್ತದ ಆಟ ಬಂದಿಲ್ಲ. ಕಳೆದೆರಡು ವರ್ಷಗಳಿಂದ ಹೆಚ್ಚು ಬೆಂಚು ಕಾಯಿಸಿದ್ದ ರಾಹುಲ್ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಇಶಾಂತ್ ಶರ್ಮ, ಮೊಹಮದ್ ಶಮಿ, ಮೊಹಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ ಒಳಗೊಂಡ ವೇಗಿಗಳ ಪಡೆ ಮತ್ತೊಮ್ಮೆ ಮಿಂಚುವ ತವಕದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವಿಫಲರಾಗುತ್ತಿರುವ ರವೀಂದ್ರ ಜಡೇಜಾ ಬದಲಿಗೆ ಆರ್.ಅಶ್ವಿನ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
*ಒತ್ತಡದಲ್ಲಿ ರೂಟ್ ಬಳಗ
ರನ್‌ಹೊಳೆಯನ್ನೇ ಹರಿಸುತ್ತಿರುವ ನಾಯಕ ಜೋ ರೂಟ್‌ಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ. ಡೊಮಿನಿಕ್ ಸಿಬ್ಲೆಗೆ ಕೊಕ್ ನೀಡಿರುವ ಹಿನ್ನೆಲೆಯಲ್ಲಿ ಹಸೀಬ್ ಹಮೀದ್, ರೋರಿ ಬರ್ನ್ಸ್ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ. ಟಿ20 ಓವರ್ ಸ್ಪೆಷಲಿಸ್ಟ್ ಡೇವಿಡ್ ಮಲಾನ್‌ಗೂ ಮಣೆ ಹಾಕಿದ್ದು, ಹನ್ನೊಂದರ ಬಳಗದಲ್ಲಿ ಆಡುವ ಉತ್ಸಾಹದಲ್ಲಿದ್ದಾರೆ. ಮಲಾನ್ ಮೂರು ವರ್ಷಗಳಿಂದ ಟೆಸ್ಟ್ ಪಂದ್ಯವಾಡಿಲ್ಲ. ವೈಯಕ್ತಿಕವಾಗಿ ಉತ್ತಮ ನಿರ್ವಹಣೆ ನೀಡುತ್ತಿದ್ದರೂ ತಂಡದ ವೈಫಲ್ಯಕ್ಕೆ ಮಾಜಿ ಆಟಗಾರರಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಜೋ ರೂಟ್‌ಗೆ ಈ ಪಂದ್ಯ ವೈಯಕ್ತಿಕವಾಗಿ ಸವಾಲಾಗಿದೆ. ಆದರೆ, ಪಂದ್ಯದಿಂದ ಪಂದ್ಯಕ್ಕೆ ಗಾಯಾಳುಗಳು ಸಮಸ್ಯೆಯೂ ತಂಡದಲ್ಲಿ ಹೆಚ್ಚುತ್ತಿದೆ.
ಟೀಮ್ ನ್ಯೂಸ್
ಭಾರತ: ಲಾರ್ಡ್ಸ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ ನಾಲ್ಕು ಬೌಲರ್‌ಗಳಿಗೂ ಮಣೆ ಹಾಕುವ ಸಾಧ್ಯತೆಗಳಿವೆ. ಲೀಡ್ಸ್ ಪಿಚ್ ಕೊಂಚ ಮಂದಗತಿಯಲ್ಲಿ ವರ್ತಿಸುವ ಕಾರಣ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗೆ ಮಣೆ ಹಾಕಿದರೆ ಇಶಾಂತ್ ಶರ್ಮ ಬದಲಿಗೆ ಹನುಮ ವಿಹಾರಿ ಕಣಕ್ಕಿಳಿಯಬಹುದು. ಒಂದು ವೇಳೆ ರವೀಂದ್ರ ಜಡೇಜಾಗೆ ಕೊಕ್ ನೀಡಿದರಷ್ಟೇ ಮತ್ತೋರ್ವ ಸ್ಪಿನ್ನರ್ ಆರ್.ಅಶ್ವಿನ್ ಕಣಕ್ಕಿಳಿಯಲು ಸಾಧ್ಯ. ಉಳಿದಂತೆ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ.
ಇಂಗ್ಲೆಂಡ್: ವೇಗಿ ಮಾರ್ಕ್ ವುಡ್ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಸಾಕಿದ್ ಮೊಹಮೂದ್ ಅಥವಾ ಕ್ರೇಗ್ ಓವರ್‌ಟನ್ ಆಡುವ ಸಾಧ್ಯತೆಗಳಿವೆ. ಉಳಿದಂತೆ ತಂಡದ ಇತರ ಆಟಗಾರರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ನಾಯಕ ಜೋ ರೂಟ್ ಹೇಳಿದ್ದಾರೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದ ವೇಗಿ ಜೇಮ್ಸ್ ಆಂಡರ್‌ಸನ್ ಸಂಪೂರ್ಣ ಚೇತರಿಸಿಕೊಂಡಿದ್ದು, ಹನ್ನೊಂದರ ಬಳಗದ ಆಯ್ಕೆಗೆ ಲಭ್ಯರಿದ್ದಾರೆ. ತಂಡದಿಂದ ಹೊರಬಿದ್ದಿರುವ ಡೊಮಿನಿಕ್ ಸಿಬ್ಲೆ ಬದಲಿಗೆ ಡೇವಿಡ್ ಮಲಾನ್ ಕಣಕ್ಕಿಳಿಯಲಿದ್ದಾರೆ.
*ಪಂದ್ಯ ಆರಂಭ: ಮಧ್ಯಾಹ್ನ 3.30
*ನೇರಪ್ರಸಾರ: ಸೋನಿ ನೆಟ್‌ವರ್ಕ್