ಸ್ಫೋಟಿಸಿದ ರಾಹುಲ್, ಇಶಾನ್; ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತಕ್ಕೆ ಜಯ

india and england match for web
Published on

ದುಬೈ: ಕನ್ನಡಿಗ ಕೆಎಲ್ ರಾಹುಲ್ (51ರನ್, 24 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಇಶಾನ್ ಕಿಶನ್ (70ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಇದರಿಂದ ಪ್ರತಿಷ್ಠಿತ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಬಳಗ ಭರ್ಜರಿ ತಾಲೀಮು ನಡೆಸಿತು.

ದುಬೈ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ವಿರಾಟ್ ಕೊಹ್ಲಿ, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ವೇಗಿ ಮೊಹಮದ್ ಶಮಿ (40ಕ್ಕೆ 3) ಮಾರಕ ದಾಳಿ ನಡುವೆಯೂ ಜಾನಿ ಬೇರ್‌ಸ್ಟೋ (49 ರನ್, 36 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಮೊಯಿನ್ ಅಲಿ (43*ರನ್, 20 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ 5 ವಿಕೆಟ್‌ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ಭಾರತ ತಂಡ 19 ಓವರ್‌ಗಳಲ್ಲಿ 3 ವಿಕೆಟ್‌ಗೆ 192 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

* ಸ್ಫೋಟಿಸಿದ ರಾಹುಲ್-ಇಶಾನ್
ಕೆಎಲ್ ರಾಹುಲ್ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಐಪಿಎಲ್‌ನಲ್ಲೂ ಭರ್ಜರಿ ಫಾರ್ಮ್‌ನಲ್ಲಿದ್ದ ರಾಹುಲ್ ಅದೇ ಲಯ ಮುಂದುವರಿಸಿದರು. ವೇಗಿ ಕ್ರಿಸ್ ವೋಕ್ಸ್ ಎಸೆದ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ತಲಾ 2 ಸಿಕ್ಸರ್, ಬೌಂಡರಿ ಸಿಡಿಸಿ ಗಮನಸೆಳೆದರು. ಈ ಜೋಡಿ ಮೊದಲ ವಿಕೆಟ್‌ಗೆ 82ರನ್ ಕಲೆಹಾಕಿತು. ಬಿರುಸಿನ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ರಾಹುಲ್ ನಿರ್ಗಮಿಸಿದರೆ, ಬಳಿಕ ಬಂದ ಕೊಹ್ಲಿ (11) ನಿರಾಸೆ ಅನುಭವಿಸಿದರು. ಇಶಾಂತ್ ಶರ್ಮ ಅಬ್ಬರದ ಬ್ಯಾಟಿಂಗ್ ನಡೆಸಿ ಸ್ವಯಂ ನಿವೃತ್ತಿ ಪಡೆದು ಹೊರನಡೆದರು. ಸೂರ್ಯಕುಮಾರ್ ಯಾದವ್ (8) ನಿರಾಸೆ ಕಂಡರೆ, ರಿಷಭ್ ಪಂತ್ (29*ರನ್, 14 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (16*ರನ್, 10 ಎಸೆತ, 3 ಬೌಂಡರಿ) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಬೇರ್‌ಸ್ಟೋ-ಮೊಯಿನ್ ಅಲಿ ಆಸರೆಯಾದರು. ಮೊಯಿನ್ ಅಲಿ, ಭುವನೇಶ್ವರ್ ಕುಮಾರ್ ಎಸೆದ ಇನಿಂಗ್ಸ್‌ನ ಕಡೇ ಓವರ್‌ನಲ್ಲಿ 2 ಸಿಕ್ಸರ್ ಸೇರಿದಂತೆ 21 ರನ್ ಕಲೆಹಾಕಿ ತಂಡದ ಮೊತ್ತವನ್ನು 190ರ ಗಡಿಗೆ ತಂದು ನಿಲ್ಲಿಸಿದರು.

ಇಂಗ್ಲೆಂಡ್: 5 ವಿಕೆಟ್‌ಗೆ 188 (ಜೇಸನ್ ರಾಯ್ 17, ಬಟ್ಲರ್ 18, ಮಲಾನ್ 18, ಜಾನಿ ಬೇರ್‌ಸ್ಟೋ 49, ಲಿವಿಂಗ್‌ಸ್ಟೋನ್ 30, ಮೊಯಿನ್ ಅಲಿ 43*, ಮೊಹಮದ್ ಶಮಿ 40ಕ್ಕೆ 3, ಬುಮ್ರಾ 26ಕ್ಕೆ 1, ರಾಹುಲ್ ಚಹರ್ 43ಕ್ಕೆ 1). ಭಾರತ : 19 ಓವರ್‌ಗಳಲ್ಲಿ 3 ವಿಕೆಟ್‌ಗೆ 192 (ಕೆಎಲ್ ರಾಹುಲ್ 51, ಇಶಾನ್ 70, ಕೊಹ್ಲಿ 11, ರಿಷಭ್ ಪಂತ್ 29*, ಹಾರ್ದಿಕ್ ಪಾಂಡ್ಯ 16*, ಮಾರ್ಕ್ ವುಡ್ 22ಕ್ಕೆ 1). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net