ಇಂದಿನಿಂದ ಭಾರತ - ಇಂಗ್ಲೆಂಡ್ ತಂಡಗಳ ಅಭ್ಯಾಸ

INDIA TEAM PRACTICE FOR WEB
Published on

ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮಂಗಳವಾರದಿಂದ ಅಭ್ಯಾಸಕ್ಕೆ ಇಳಿಯಲಿವೆ. ಕಳೆದ 6 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ಉಭಯ ತಂಡಗಳ ಆಟಗಾರರ ಮೂರನೇ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಶುಕ್ರವಾರದಿಂದ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಹಂತ ಹಂತವಾಗಿ ವಾಪಸಾದ ಭಾರತ ತಂಡದ ಆಟಗಾರರು ಕಳೆದ ಬುಧವಾರ (ಜ.27) ಬಯೋ ಬಬಲ್‌ಗೆ ಎಂಟ್ರಿಕೊಟ್ಟಿದ್ದರು. ಇಂಗ್ಲೆಂಡ್ ತಂಡ ಕೂಡ ಶ್ರೀಲಂಕಾ ಪ್ರವಾಸದಿಂದ ಚೆನ್ನೈಗೆ ಕಳೆದ ಬುಧವಾರವೇ ಆಗಮಿಸಿತ್ತು.

ಬೆಳಗ್ಗೆ 10ರಿಂದ ಭಾರತ ಅಭ್ಯಾಸ:

ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡದ ಆಟಗಾರರು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನೆಟ್ಸ್ ನಲ್ಲಿ ಅಭ್ಯಾಸ ನಡೆಸಲಿದ್ದಾರೆ. ನೆಟ್ಸ್ ಅವಧಿಗೂ ಮೊದಲು ಮೈದಾನದಲ್ಲಿ ದೈಹಿಕ ಕಸರತ್ತಿಗೆ ಮೊರೆ ಹೋಗಲಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಆಟಗಾರರು ಕಠಿಣ ಅಭ್ಯಾಸ ನಡೆಸಲಿದ್ದಾರೆ. ‘ಭಾರತ ತಂಡದ ಆಟಗಾರರ ಕ್ವಾರಂಟೈನ್ ಅವಧಿ ಸೋಮವಾರಕ್ಕೆ ಮುಕ್ತಾಯಗೊಂಡಿದ್ದು, ಆಟಗಾರರಿಗೆ ಮೂರು ಆರ್‌ಟಿ- ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಎಲ್ಲ ಪರೀಕ್ಷೆಗಳ ವರದಿ ನೆಗೆಟಿವ್ ಬಂದಿದ್ದು, ಮಂಗಳವಾರದಿಂದ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ತಂಡದ ಆಟಗಾರರಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಹಾಗೂ ರೋರಿ ಬರ್ನ್ಸ್ ಕಳೆದ ವಾರವೇ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಈ ಮೂವರು ಶ್ರೀಲಂಕಾ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ತಂಡದ ಇತರ ಆಟಗಾರರಿಗಿಂತ ಮೊದಲೇ ಚೆನ್ನೈಗೆ ಆಗಮಿಸಿದ್ದರು. ‘ಇಂಗ್ಲೆಂಡ್ ತಂಡದ ಆಟಗಾರರ ಮೂರನೆ ಕೋವಿಡ್-19 ಪರೀಕ್ಷೆಗಳ ವರದಿ ನೆಗೆಟಿವ್ ಬಂದಿದ್ದು, ಮಂಗಳವಾರ ಮಧ್ಯಾಹ್ನ 2ರಿಂದ 5ರವರೆಗೆ ಅಭ್ಯಾಸ ನಡೆಸಲಿದ್ದಾರೆ’ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ವಕ್ತಾರರು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡ ಶ್ರೀಲಂಕಾದಿಂದ ಕಳೆದ ಬುಧವಾರ ಚೆನ್ನೈಗೆ ಆಗಮಿಸಿತ್ತು.

ಲಂಕಾ ವಿರುದ್ಧದ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು. ಭಾರತ ತಂಡಕ್ಕೆ ಈ ಸರಣಿಯೂ 2012ನೇ ಸಾಲಿನ ಸರಣಿಗಿಂತಲೂ ಸವಾಲಾಗಿದೆ. 2012ರ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1ರಿಂದ ಜಯ ದಾಖಲಿಸಿತ್ತು. 2016ರಲ್ಲಿ ಭಾರತ ತಂಡ ತವರಿನಲ್ಲಿ 5 ಪಂದ್ಯಗಳ ಸರಣಿಯಲ್ಲಿ 4-0ಯಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಕಳೆದ ಮೂರು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತುಂಗದಲ್ಲಿರುವ ಭಾರತ ತಂಡ ಈ ಅವಧಿಯಲ್ಲಿ 2 ಬಾರಿ ಆಸೀಸ್ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net