

ಅಹಮದಾಬಾದ್: ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡರೂ ಬಳಿಕ ಮೈಕೊಡವಿ ಎದ್ದುನಿಂತು ತಿರುಗೇಟು ನೀಡಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ತಂಡಕ್ಕೀಗ ಹೊಸ ತಾಣದಲ್ಲಿ ಹೊಸ ಸವಾಲು ಎದುರಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೆರಾದ ಸರ್ದಾರ್ ಪಟೇಲ್ ಅಂಗಳದಲ್ಲಿ ಬುಧವಾರ ಆರಂಭವಾಗಲಿರುವ ಮೂರನೇ ಹಾಗೂ ಅಹರ್ನಿಶಿ ಟೆಸ್ಟ್ ಕದನದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದ ಟೆಸ್ಟ್ ಇತಿಹಾಸದಲ್ಲಿ ಹಲವು ಮಜಲುಗಳಿಗೆ ಸಾಕ್ಷಿಯಾಗಿರುವ ಮೊಟೆರಾ ಮೈದಾನ ಇದೀಗ ಮರುನಿರ್ಮಾಣಗೊಂಡು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸುವ ದೃಷ್ಟಿಯಿಂದಲೂ ವಿರಾಟ್ ಕೊಹ್ಲಿ ಪಡೆಯ ಪಾಲಿಗೆ ಈ ಪಂದ್ಯ ಮಹತ್ವದ್ದೆನಿಸಿದೆ.
ದಾಖಲೆಗಳ ತಾಣ: ದಿಗ್ಗಜ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ್ದು, ದಿಗ್ಗಜ ಆಲ್ರೌಂಡರ್ ಕಪಿಲ್ ದೇವ್ (83ಕ್ಕೆ 9) ವೈಯಕ್ತಿಕ ಶ್ರೇಷ್ಠ ನಿರ್ವಹಣೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಂದಿನ ಗರಿಷ್ಠ ವಿಕೆಟ್ ಕಬಳಿಸಿದ ವಿಶ್ವದಾಖಲೆ ನಿರ್ಮಿಸಿದ್ದು, ದಿಗ್ಗಜ ಸಚಿನ್ ತೆಂಡುಲ್ಕರ್ ಚೊಚ್ಚಲ ದ್ವಿಶತಕ ಸಿಡಿಸಿದ್ದು, ಹರ್ಭಜನ್ ಸಿಂಗ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದು ಮತ್ತು ವಿವಿಎಸ್ ಲಕ್ಷ್ಮಣ್ ಟೆಸ್ಟ್ ಪದಾರ್ಪಣೆ ಮಾಡಿದ್ದು ಕೂಡ ಇದೇ ನೆಲದಲ್ಲಿ. ಇದೀಗ ಇಶಾಂತ್ ಶರ್ಮ ಅವರ 100ನೇ ಟೆಸ್ಟ್ ಪಂದ್ಯಕ್ಕೂ ಇದೇ ಮೈದಾನ ವೇದಿಕೆಯಾಗುತ್ತಿದೆ. ಸ್ಪಿನ್ನರ್ ಆರ್.ಅಶ್ವಿನ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಮೈಲಿಗಲ್ಲು ನೆಡಲಿದ್ದಾರೆ. ಅಲ್ಲದೆ 4 ವಿಕೆಟ್ ಕಬಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ ಸಾಧನೆಯನ್ನೂ ಮಾಡಲಿದ್ದಾರೆ.
* ಆತ್ಮವಿಶ್ವಾಸದಲ್ಲಿ ಟೀಮ್ ಇಂಡಿಯಾ
ಚೆನ್ನೈನಲ್ಲಿ 1-1 ಸಮಬಲ ಸಾಧಿಸಿ ಅಹಮದಾಬಾದ್‌ಗೆ ಬಂದಿಳಿದಿರುವ ಭಾರತ ತಂಡ ಹೊಸ ತಾಣದಲ್ಲಿ ಹೊಸ ಭಾಷ್ಯ ಬರೆಯುವ ತವಕದಲ್ಲಿದೆ. ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವುದರಿಂದ ಪಂದ್ಯಕ್ಕೆ ಇಬ್ಬನಿ ಸಮಸ್ಯೆ ಎದುರಾಗಲಿದ್ದು, ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆ ಇದೆ. ಆದರೆ, ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ ವೇಗಿಗಳೇ ಮಿಂಚಿದ ಇತಿಹಾಸವಿದೆ. ಭಾರತ ತಂಡದ ಪಾಲಿಗೆ ಆರ್. ಅಶ್ವಿನ್ ಹಾಗೂ ಸ್ಥಳೀಯ ಪ್ರತಿಭೆ ಅಕ್ಷರ್ ಪಟೇಲ್ ತಂಡದ ಟ್ರಂಪ್‌ಕಾರ್ಡ್ ಆಗಲಿದ್ದಾರೆ. ಚೆಪಾಕ್ ಅಂಗಳದಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಈ ಜೋಡಿ ಪ್ರಮುಖ ಪಾತ್ರವಹಿಸಿತ್ತು.
*ಪುಟಿದೇಳುವ ವಿಶ್ವಾಸದಲ್ಲಿ ಆಂಗ್ಲರು
ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಗುಂಗಿನಲ್ಲಿದ್ದ ಪ್ರವಾಸಿ ಇಂಗ್ಲೆಂಡ್ ತಂಡ, ಎರಡನೇ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋತಿದೆ. ಇದೀಗ ಹೊಸ ತಾಣದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಎಂದಿನಂತೆ ಆವರ್ತನ ಪದ್ಧತಿಗೆ ಮೊರೆ ಹೋಗಲಿರುವ ಇಂಗ್ಲೆಂಡ್ ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ನಾಯಕ ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೇರ್‌ಸ್ಟೋರಂಥ ಪ್ರಮುಖರಿಗೆ ಈ ಪಂದ್ಯ ಸವಾಲಾಗಿದೆ. ಮೊಯಿನ್ ಅಲಿ ತವರಿಗೆ ವಾಪಸಾಗಿದ್ದು, ಜಾಕ್ ಲೀಚ್ ಸ್ಪಿನ್ ಮೋಡಿಯಿಂದ ಭಾರತೀಯರಿಗೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ.
ಟೀಮ್ ನ್ಯೂಸ್...
ಭಾರತ: ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಅಹರ್ನಿಶಿ ಪಂದ್ಯಕ್ಕೆ ಸಜ್ಜಾಗುವ ದೃಷ್ಟಿಯಿಂದಲೇ ಕಳೆದ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ವೇಗಿ ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ಮರಳಲಿದ್ದು, ಮೊಹಮದ್ ಸಿರಾಜ್ ಜಾಗ ಬಿಟ್ಟುಕೊಡಲಿದ್ದಾರೆ. ಅಹರ್ನಿಶಿ ಟೆಸ್ಟ್‌ನಲ್ಲಿ ವೇಗಿಗಳ ಕೈಮೇಲಾಗಿರುವ ಇತಿಹಾಸದಿಂದಾಗಿ ಭಾರತ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಬಹುದು. ಆಗ ಕುಲದೀಪ್ ಯಾದವ್ ಕೂಡ ಹೊರಗುಳಿಯಲಿದ್ದು, ಅಹರ್ನಿಶಿ ಟೆಸ್ಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ವೇಗಿ ಉಮೇಶ್ ಯಾದವ್ ಅವಕಾಶ ಪಡೆಯಬಹುದು.
ಇಂಗ್ಲೆಂಡ್: ಆವರ್ತನಾ ಪದ್ದತಿ ಹೊಂದಿರುವ ಇಂಗ್ಲೆಂಡ್ ತಂಡದಲ್ಲಿ ಕೆಲ ಬದಲಾವಣೆ ಖಚಿತವೆನಿಸಿದೆ. ಜೇಮ್ಸ್ ಆಂಡರ್‌ಸನ್, ಆರ್ಚರ್, ಜಾನಿ ಬೇರ್‌ಸ್ಟೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಜಾಕ್ ಲೀಚ್ ಏಕೈಕ ಸ್ಪಿನ್ನರ್ ಆಗಿರಲಿದ್ದಾರೆ. ಅಗ್ರ ಕ್ರಮಾಂಕದಲ್ಲಿ ರೋರಿ ಬರ್ನ್ಸ್ ಬದಲಿಗೆ ಜಾಕ್ ಕ್ರೌಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಕಳೆದ ಪಂದ್ಯದಲ್ಲಿ ಆಡಿದ್ದ ಸ್ಟುವರ್ಟ್ ಬ್ರಾಡ್, ಮೊಯಿನ್ ಅಲಿ, ಒಲ್ಲಿ ಸ್ಟೋನ್ ಮತ್ತು ಡೇನಿಯಲ್ ಲಾರೆನ್ಸ್ ಕೂಡ ಹೊರಗುಳಿಯಲಿದ್ದಾರೆ. ಡೊಮಿನಿಕ್ ಬೆಸ್ ಮತ್ತು ಕ್ರಿಸ್ ವೋಕ್ಸ್ ಅವರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಬೇರ್‌ಸ್ಟೋ ಮರಳಿದರೂ, ಕಳೆದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಕೌಶಲದಿಂದ ಗಮನಸೆಳೆದಿದ್ದ ಬೆನ್ ಫೋಕ್ಸ್ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
*ಶತಕದ ಸಂಭ್ರಮದಲ್ಲಿ ಇಶಾಂತ್ ಶರ್ಮ
ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮ, ಈ ಪಂದ್ಯದ ಮೂಲಕ 100 ಟೆಸ್ಟ್ ಆಡಿದ ಭಾರತದ 11ನೇ ಆಟಗಾರ ಹಾಗೂ 2ನೇ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ. 2007ರಲ್ಲಿ ಢಾಕಾದಲ್ಲಿ ಬಾಂಗ್ಲಾದೇಶ ಎದುರು ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಇಶಾಂತ್, 99 ಪಂದ್ಯಗಳಿಂದ 302 ವಿಕೆಟ್ ಕಬಳಿಸಿದ್ದಾರೆ. 11 ಬಾರಿ 5 ವಿಕೆಟ್ ಗೊಂಚಲು ಹಾಗೂ ಒಂದು ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಸಚಿನ್ ತೆಂಡುಲ್ಕರ್ (200), ರಾಹುಲ್ ದ್ರಾವಿಡ್ (164), ವಿವಿಎಸ್ ಲಕ್ಷ್ಮಣ್ (134), ಅನಿಲ್ ಕುಂಬ್ಳೆ (132), ಕಪಿಲ್ ದೇವ್ (131), ಸುನೀಲ್ ಗಾವಸ್ಕರ್ (125), ದಿಲೀಪ್ ವೆಂಗ್ಸಾರ್ಕರ್ (116), ಸೌರವ್ ಗಂಗೂಲಿ (113), ವೀರೇಂದ್ರ ಸೆಹ್ವಾಗ್ (104), ಹರ್ಭಜನ್ ಸಿಂಗ್ (103) ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರು. ಮಾಜಿ ನಾಯಕ ಮೊಹಮದ್ ಅಜರುದ್ದೀನ್ 99 ಪಂದ್ಯಗಳನ್ನಾಡಿದ್ದಾರೆ.
*ರಾಷ್ಟ್ರಪತಿಯಿಂದ ಲೋಕಾರ್ಪಣೆ
ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಖ್ಯಾತಿ ಪಡೆದಿರುವ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂಅನ್ನು ಬುಧವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಇದೇ ವೇಳೆ ಉಪಸ್ಥಿತರಿರಲಿದ್ದಾರೆ. ಮೊದಲಿಗೆ 90 ಸಾವಿರದವರೆಗೆ ಪ್ರೇಕ್ಷಕರನ್ನು ಸೇರಿಸುತ್ತಿದ್ದ ಈಡನ್ ಗಾರ್ಡನ್ಸ್ 2011ರ ವಿಶ್ವಕಪ್ ವೇಳೆ ನವೀಕರಣಗೊಂಡ ಬಳಿಕ 68 ಸಾವಿರಕ್ಕೆ ಇಳಿದಿತ್ತು. ಕಳೆದ ವರ್ಷ ಅಮೆರಿಕದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಮೊಟೆರಾ ಸ್ಟೇಡಿಯಂನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಈ ಸ್ಟೇಡಿಯಂ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಆದರೆ ಈ ಬಾರಿ ಬಿಸಿಸಿಐ ಮಾರ್ಗಸೂಚಿಯಂತೆ ಶೇ. 50 ಅಂದರೆ 55 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಲಿದ್ದಾರೆ. 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಅತಿದೊಡ್ಡ ಸ್ಟೇಡಿಯಂ ಎಂದು ಹೆಸರಾಗಿದ್ದ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ದಾಖಲೆಯನ್ನು ಈ ಕ್ರೀಡಾಂಗಣ ಹಿಂದಿಕ್ಕಿದೆ. ಕೋಲ್ಕತದ ಈಡನ್ ಗಾರ್ಡನ್ಸ್ ಈ ಹಿಂದೆ ಭಾರತದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿತ್ತು.
*ನೀಗುವುದೇ ಕೊಹ್ಲಿ ಶತಕದ ಬರ?
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಕಳೆದ 16 ತಿಂಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿಲ್ಲ. 2019ರಲ್ಲಿ ಕೋಲ್ಕತದಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಕಡೇ ಬಾರಿಗೆ ಶತಕ ಸಿಡಿಸಿದ್ದರು. ಬಳಿಕ ಆಡಿದ 34 ಅಂತಾರಾಷ್ಟ್ರೀಯ ಕ್ರಿಕೆಟ್ ಇನಿಂಗ್ಸ್‌ಗಳಲ್ಲಿ ಕೊಹ್ಲಿ ಶತಕ ಸಿಡಿಸಿಲ್ಲ.
*2: ಭಾರತ ತಂಡ ಇದುವರೆಗೆ 2 ಅಹರ್ನಿಶಿ ಪಂದ್ಯಗಳನ್ನಾಡಿದ್ದು, ತಲಾ ಒಂದರಲ್ಲಿ ಗೆಲುವು ಹಾಗೂ ಸೋಲು ಕಂಡಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಇದುವರೆಗೆ 3 ಅಹರ್ನಿಶಿ ಪಂದ್ಯಗಳನ್ನಾಡಿದ್ದು, 2ರಲ್ಲಿ ಸೋತು, ಒಂದು ಜಯ ದಾಖಲಿಸಿದೆ.
*15: ಟೆಸ್ಟ್ ಇತಿಹಾಸದಲ್ಲಿ ಇದುವರೆಗೆ ನಡೆದಿರುವ 15 ಪಿಂಕ್ ಬಾಲ್ ಪಂದ್ಯಗಳಲ್ಲಿ ವೇಗಿಗಳು 354 ವಿಕೆಟ್ ಕಬಳಿಸಿದರೆ, ಸ್ಪಿನ್ನರ್‌ಗಳು 115 ವಿಕೆಟ್ ಪಡೆದಿದ್ದಾರೆ.
*2012: ಭಾರತ-ಇಂಗ್ಲೆಂಡ್ ತಂಡಗಳು ಮೊಟೆರಾದಲ್ಲಿ ಕಡೇ ಬಾರಿಗೆ 2012ರಲ್ಲಿ ಮುಖಾಮುಖಿಯಾಗಿದ್ದವು. ಅದು ಇಲ್ಲಿ ನಡೆದ ಕಡೇ ಟೆಸ್ಟ್ ಪಂದ್ಯವೂ ಆಗಿತ್ತು. ಆ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅಜೇಯ 206 ಮತ್ತು 41 ರನ್ ಬಾರಿಸಿದ್ದರು. ಭಾರತ 9 ವಿಕೆಟ್‌ಗಳಿಂದೆ ಗೆಲುವು ದಾಖಲಿಸಿತ್ತು.
*ಕೋಲ್ಕತದಲ್ಲಿ ಎರಡೂವರೆ ದಿನಕ್ಕೆ ಗೆಲುವು!
2019ರ ನವೆಂಬರ್‌ನಲ್ಲಿ ಭಾರತದಲ್ಲಿ ನಡೆದಿದ್ದ ಮೊಟ್ಟಮೊದಲ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಕೇವಲ ಎರಡೂವರೆ ದಿನಗಳಲ್ಲೇ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಇನಿಂಗ್ಸ್ ಹಾಗೂ 46 ರನ್‌ಗಳಿಂದ ಮಣಿಸಿತ್ತು. ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ವೇಗಿಗಳು ಎದುರಾಳಿ ತಂಡದ 19 ವಿಕೆಟ್ ಉರುಳಿಸಿದ್ದರು. ಇಶಾಂತ್ ಶರ್ಮ (ಪಂದ್ಯದಲ್ಲಿ 9), ಉಮೇಶ್ ಯಾದವ್ (ಪಂದ್ಯದಲ್ಲಿ 8), ಮೊಹಮದ್ ಶಮಿ (2 ವಿಕೆಟ್) ಬಾಂಗ್ಲಾಗೆ ಕಡಿವಾಣ ಹಾಕಿದ್ದರು. ಮೊದಲ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 106 ರನ್‌ಗಳಿಗೆ ಸರ್ವಪತನ ಕಂಡರೆ, ಭಾರತ 9 ವಿಕೆಟ್‌ಗೆ 347 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡು 241 ರನ್ ಮುನ್ನಡೆ ಸಾಧಿಸಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 195 ರನ್‌ಗಳಿಗೆ ಸರ್ವಪತನ ಕಂಡಿತ್ತು. 3ನೇ ದಿನ 8.4 ಓವರ್‌ಗಳಲ್ಲೇ ಪಂದ್ಯ ಮುಗಿದಿತ್ತು.
ಮೊಟೆರಾ ಸ್ಟೇಡಿಯಂ
*1,10,000
ಪ್ರೇಕ್ಷಕರ ಸಾಮರ್ಥ್ಯ
*800
ಕೋಟಿ ರೂ. ವೆಚ್ಚ
*55,000
ಪಂದ್ಯಕ್ಕೆ ಪ್ರೇಕ್ಷಕರ ಹಾಜರಿ
*04
ಡ್ರೆಸ್ಸಿಂಗ್ ರೂಂಗಳು
*76
ಕಾರ್ಪೋರೇಟ್ ಬಾಕ್ಸ್
*3,000
ಕಾರ್ ಪಾರ್ಕಿಂಗ್ ಜಾಗ
*10,000
ದ್ವಿಚಕ್ರ ವಾಹನ ಪಾರ್ಕಿಂಗ್
*63
ಎಕರೆ ಒಟ್ಟಾರೆ ವ್ಯಾಪ್ತಿ
*ಮೊಟೆರಾ ಸ್ಟೇಡಿಯಂ ವಿಶೇಷತೆ
ಮೊಟೆರಾದಲ್ಲಿ ಈ ಹಿಂದೆ ಇದ್ದ ಸ್ಟೇಡಿಯಂನ್ನು ಸಂಪೂರ್ಣ ಕೆಡವಿ ನೂತನ ಸ್ಟೇಡಿಯಂಅನ್ನು 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಗುಜರಾತ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಈ ನೂತನ ಕ್ರೀಡಾಂಗಣದ ರೂಪುರೇಷೆಗಳನ್ನು ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು 63 ಎಕರೆ ವಿಸ್ತೀರ್ಣ ಜಾಗದಲ್ಲಿರುವ ಸ್ಟೇಡಿಯ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಅಹರ್ನಿಶಿ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್‌ಇಡಿ ಹೊನಲುಬೆಳಕು ಅಳವಡಿಸಲಾಗಿದೆ. ಇದರಿಂದ ನೆರಳಿನ ಅಡಚಣೆ ಇರುವುದಿಲ್ಲ. ಫ್ಲಡ್‌ಲೈಟ್ ಟವರ್ ಮತ್ತು ಪಿಲ್ಲರ್‌ಗಳಿಲ್ಲದ ಕಾರಣ ಪ್ರೇಕ್ಷಕರು ಕ್ರೀಡಾಂಗಣದ ಯಾವುದೇ ಮೂಲೆಯಲ್ಲಿ ಕುಳಿದರೂ ಪಂದ್ಯವನ್ನು ಸರಾಗವಾಗಿ ವೀಕ್ಷಿಸಬಹುದು. ಮೈದಾನದಲ್ಲಿ ಒಟ್ಟು 11 ಪಿಚ್, ಸುಸಜ್ಜಿತ ಜಿಮ್ ವ್ಯವಸ್ಥೆ ಒಳಗೊಂಡ 4 ಡ್ರೆಸ್ಸಿಂಗ್ ರೂಂಗಳಿವೆ. 9 ಪಿಚ್‌ಗಳಿರುವ 2 ಅಭ್ಯಾಸ ಮೈದಾನಗಳು ಇದೇ ಆವರಣದಲ್ಲಿವೆ. ತಲಾ 25 ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಎಸಿ ಒಳಗೊಂಡ 76 ಕಾರ್ಪೋರೇಟ್ ಬಾಕ್ಸ್‌ಗಳು ಕ್ರೀಡಾಂಗಣದಲ್ಲಿವೆ. ಕ್ರೀಡಾಂಗಣದ ಹೊರಗೆ 3 ಸಾವಿರ ಕಾರು, 10 ಸಾವಿರ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ಅಹಮದಾಬಾದ್‌ನಿಂದ ನೇರವಾಗಿ ಮೆಟ್ರೋ ವ್ಯವಸ್ಥೆ ಇರುವುದರಿಂದ ಸರಾಗವಾಗಿ ಟ್ರಾಫಿಕ್ ಜಾಮ್ ಇಲ್ಲದೆ ಕ್ರೀಡಾಂಗಣಕ್ಕೆ ತಲುಪಬಹುದಾಗಿದೆ. ಆಧುನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಭಾರಿ ಮಳೆ ಬಂದರೂ 30 ನಿಮಿಷಗಳಲ್ಲೇ ಪಂದ್ಯ ಆರಂಭಿಸಬಹುದಾಗಿದೆ.
*ಪಿಚ್ ಕುತೂಹಲ
ಸಾಮಾನ್ಯವಾಗಿ ಅಹರ್ನಿಶಿ ಟೆಸ್ಟ್ ಪಂದ್ಯಗಳ ಪಿಚ್ ವೇಗಿಗಳಿಗೆ ಸಹಕಾರಿ. ಪಂದ್ಯಕ್ಕೆ ಬಳಸುವ ಪಿಂಕ್ ಬಾಲ್ ಹೆಚ್ಚು ಸಮಯ ಬಾಳಿಕೆ ಬರಬೇಕೆಂದು ಪಿಚ್ ಮೇಲೆ ಹೆಚ್ಚಿನ ಹಸಿರು ಹುಲ್ಲು ಬಿಡುವುದೇ ಇದಕ್ಕೆ ಕಾರಣ. ಮೊಟೆರಾದಲ್ಲೂ ಹಸಿರು ಹುಲ್ಲು ಹೆಚ್ಚಿರುವ ನಡುವೆಯೂ ಸ್ಪಿನ್ನರ್‌ಗಳ ಮೇಲುಗೈ ನಿರೀಕ್ಷೆ ಇಡಲಾಗಿದೆ. ಆದರೆ ಹೊಸ ಚೆಂಡಿನಲ್ಲಿ ಮತ್ತು ಹೊನಲು ಬೆಳಕಿನಲ್ಲಿ ವೇಗಿಗಳ ದರ್ಬಾರೇ ನಡೆಯಬಹುದು. ಚೆಪಾಕ್‌ನಲ್ಲಿ ಆಂಗ್ಲರಿಗೆ ಕಡಿವಾಣ ಹಾಕಿದ್ದ ಅಶ್ವಿನ್-ಅಕ್ಷರ್ ಜೋಡಿ ಇಲ್ಲಿ ‘ಎಸ್‌ಜಿ ಪಿಂಕ್ ಬಾಲ್’ನಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ದಾಳಿ ಸಂಘಟಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.
*ಪಂದ್ಯ ಆರಂಭ: ಮಧ್ಯಾಹ್ನ 2.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್