ವಿರಾಟ್ ಕೊಹ್ಲಿ ಬಳಗಕ್ಕೆ ಮೊದಲ ದಿನದ ಗೌರವ, ಪ್ರವಾಸಿಗರಿಗೆ ಸ್ಪಿನ್ ಕಡಿವಾಣ

india and england match for web
Published on

ಅಹಮದಾಬಾದ್: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಅಕ್ಷರ್ ಪಟೇಲ್ (68ಕ್ಕೆ 4) ಹಾಗೂ ಆರ್.ಅಶ್ವಿನ್ (47ಕ್ಕೆ 3) ಸ್ಪಿನ್ ಜೋಡಿ 4ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲೂ ಪ್ರವಾಸಿಗರಿಗೆ ತಡೆಗೋಡೆಯಾದರು. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ, ಭಾರತೀಯ ಸ್ಪಿನ್ ಜಾಲಕ್ಕೆ ಸಿಲುಕಿ 205 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಆರಂಭಿಕ ಆಘಾತ ಕಂಡಿರುವ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 24 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 181 ರನ್‌ಗಳಿಸಬೇಕಿದೆ.

* ಅಕ್ಷರ್ ಪಟೇಲ್-ಅಶ್ವಿನ್ ಸ್ಪಿನ್ ಮೋಡಿ
ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಅಕ್ಷರ್ ಪಟೇಲ್ ಹಾಗೂ ಆರ್.ಅಶ್ವಿನ್ ಜೋಡಿ ಮತ್ತೊಮ್ಮೆ ಆಘಾತ ನೀಡಿತು. ಎಚ್ಚರಿಕೆ ಆರಂಭ ಪಡೆಯಲು ಯತ್ನಿಸುತ್ತಿದ್ದ ಜಾಕ್ ಕ್ರೌಲಿ (9) ಹಾಗೂ ಡೊಮಿನಿಕ್ ಸಿಬ್ಲೆ (2) ಜೋಡಿಗೆ ಆರಂಭದಲ್ಲೇ ಅಕ್ಷರ್ ಪಟೇಲ್ ಕಡಿವಾಣ ಹೇರಿದರು. ಇನಿಂಗ್ಸ್‌ನ 6 ಓವರ್‌ನ 2ನೇ ಎಸೆತದಲ್ಲಿ ಸಿಬ್ಲೆ ಅವರನ್ನು ಬೌಲ್ಡ್ ಮಾಡುವ ಮೂಲಕ ಅಕ್ಷರ್ ಪಟೇಲ್ ಇಂಗ್ಲೆಂಡ್ ಕುಸಿತಕ್ಕೆ ಮುನ್ನುಡಿ ಬರೆದರು. ಇದರ ಬೆನ್ನಲ್ಲೇ ಜಾಕ್ ಕ್ರೌಲಿ ಕೂಡ ಪಟೇಲ್‌ಗೆ ವಿಕೆಟ್ ನೀಡಿದರು 15 ರನ್ ಪೇರಿಸುವಷ್ಟರಲ್ಲಿ ಇಂಗ್ಲೆಂಡ್ ಆರಂಭಿಕರನ್ನು ಕಳೆದುಕೊಂಡಿತು. ನಾಯಕ ಜೋ ರೂಟ್ (5) ಕೂಡ ಮೊಹಮದ್ ಸಿರಾಜ್ ಎಸೆತದಲ್ಲಿ ಎಲ್‌ಬಿಯಾದರು. ಕೇವಲ 30ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಆರಂಭಿಕ ಆಘಾತದಿಂದ ತತ್ತರಿಸಿತು. ಜಾನಿ ಬೇರ್‌ಸ್ಟೋ (28), ಬೆನ್ ಸ್ಟೋಕ್ಸ್ ಹಾಗೂ ಒಲಿ ಪೊಪ್ (29) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಕೆಲಕಾಲ ಆಸರೆಯಾದರು. ಉಳಿದಂತೆ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಜೋಡಿ ಮಾರಕ ದಾಳಿಗೆ ಇಂಗ್ಲೆಂಡ್ ಬಾಲಂಗೋಚಿ ನೆಲಕಚ್ಚಿತು.

ಇಂಗ್ಲೆಂಡ್: 205 (ಜಾನಿ ಬೇರ್‌ಸ್ಟೋ 28, ಬೆನ್ ಸ್ಟೋಕ್ಸ್ 55, ಒಲಿ ಪೊಪ್ 29, ಡೇನಿಲ್ ಲಾರೆನ್ಸ್ 46, ಅಕ್ಷರ್ ಪಟೇಲ್ 68ಕ್ಕೆ 4, ಆರ್.ಅಶ್ವಿನ್ 47ಕ್ಕೆ 3, ಮೊಹಮದ್ ಸಿರಾಜ್ 45ಕ್ಕೆ 2). ಭಾರತ : 12 ವರ್‌ಗಳಲ್ಲಿ 1 ವಿಕೆಟ್‌ಗೆ 24 (ಶುಭಮಾನ್ ಗಿಲ್ 0, ರೋಹಿತ್ ಶರ್ಮ 8, ಚೇತೇಶ್ವರ ಪೂಜಾರ 15, ಆಂಡರ್‌ಸನ್ 0ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net