

ಕ್ಯಾರಾರಾ: ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (80*ರನ್, 144 ಎಸೆತ, 15 ಬೌಂಡರಿ, 1 ಸಿಕ್ಸರ್) ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೆರವಿನಿಂದ ಭಾರತ ತಂಡ ಮಹಿಳೆಯರ ಏಕೈಕ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಸುಸ್ಥಿತಿಯಲ್ಲಿದೆ. ಮಳೆಯಿಂದಾಗಿ ದಿನದಾಟದ ಕಡೇ ಅವಧಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಮಳೆಯಿಂದಾಗಿ ದಿನದಾಟ ಸ್ಥಗಿತಗೊಂಡಾಗ 1 ವಿಕೆಟ್‌ಗೆ 132 ರನ್ ಪೇರಿಸಿತ್ತು. ಸ್ಮೃತಿ ಜತೆಗೆ ಪೂನಂ ರಾವತ್ (16*ರನ್, 57 ಎಸೆತ, 1 ಬೌಂಡರಿ) ಕ್ರೀಸ್‌ನಲ್ಲಿದ್ದಾರೆ.
ಭಾರತ ಉತ್ತಮ ಆರಂಭ: ಬೌಲಿಂಗ್ ಆಯ್ದುಕೊಂಡ ಆಸೀಸ್ ಲೆಕ್ಕಾಚಾರ ಫಲಿಸದಂತೆ ಭಾರತದ ಆರಂಭಿಕರಾದ ಸ್ಮೃತಿ ಮಂದನಾ ಹಾಗೂ ಶೆಫಾಲಿ ವರ್ಮ (31ರನ್, 64 ಎಸೆತ, 4 ಬೌಂಡರಿ) ನೋಡಿಕೊಂಡರು. ಈ ಮೂಲಕ ಭಾರತಕ್ಕೆ ತನ್ನ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಉತ್ತಮ ಆರಂಭ ನೀಡಿದರು. ಏಕದಿನ ಸರಣಿಯಲ್ಲಿ ಸೋಲಿನ ನಡುವೆಯೂ ಭಾರತದ ಬ್ಯಾಟರ್‌ಗಳು ಗಮನಸೆಳೆದಿದ್ದರು. ಅದೇ ಲಯ ಮುಂದುವರಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 93 ರನ್ ಪೇರಿಸಿತು. ಸ್ಮತಿ ಕೇವಲ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಆತಿಥೇಯ ಬೌಲರ್‌ಗಳನ್ನು ಕಾಡಿದರು. ಭೋಜನ ವಿರಾಮಕ್ಕೂ ಕೆಲ ಹೊತ್ತು ಬಾಕಿ ಇರುವಾಗ ಸೋಫಿ ಮೊಲಿನೆಕ್ಸ್ ಭಾರತಕ್ಕೆ ಆಘಾತ ನೀಡಿದರು. ಮೊಲಿನೆಕ್ಸ್ ಎಸೆತದಲ್ಲಿ ಶೆಫಾಲಿ ವರ್ಮ, ತಹ್ಲಿಯಾ ಮೆಕ್‌ಗ್ರಾತ್‌ಗೆ ಕ್ಯಾಚ್ ನೀಡಿದರು. ಬಳಿಕ ಮಂದನಾ ಹಾಗೂ ಪೂನಂ ಜೋಡಿ ಮುರಿಯದ 2ನೇ ವಿಕೆಟ್‌ಗೆ 39 ರನ್ ಜತೆಯಾಟವಾಡಿತು. ಭೋಜನ ವಿರಾಮದ ಬಳಿಕ ಪದೆ ಪದೇ ಮಳೆ ಅಡ್ಡಿಪಡಿಸಿತು. ಇದರಿಂದ ನಿಗದಿತ ಅವಧಿಗೂ ಮೊದಲೇ ಚಹಾ ವಿರಾಮ ಘೋಷಿಸಲಾಯಿತು. ಬಳಿಕ ಮಳೆ ಬಿಡುವು ನೀಡದ ಕಾರಣ ದಿನದಾಟ ಪುನರಾರಂಭಗೊಳ್ಳಲಿಲ್ಲ.
ಭಾರತ: 44.1 ಓವರ್‌ಗಳಲ್ಲಿ 1 ವಿಕೆಟ್‌ಗೆ 132 (ಸ್ಮೃತಿ ಮಂದನಾ 80*, ಶೆಾಲಿ ವರ್ಮ 31, ಪೂನಂ ರಾವತ್ 16*, ಸೋಫಿ ಮೊಲಿನೆಕ್ಸ್ 18ಕ್ಕೆ 1).