19 ವಯೋಮಿತಿ ಕ್ರಿಕೆಟ್ ವಿಶ್ವಕಪ್ ; ಇಂದು ಭಾರತ-ಆಸೀಸ್ ಸೆಮೀಸ್ ಹಣಾಹಣಿ

india and australia under 19 match for web
Published on

ಆಂಟಿಗುವಾ: ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿೈನಲ್ ಹಣಾಹಣಿಯಲ್ಲಿ ಬುಧವಾರ ಎದುರಾಗಲಿವೆ. ಕೋವಿಡ್ ಕಾಟದ ನಡುವೆಯೂ ಭಾರತದ ಯುವ ಪಡೆ ಭರ್ಜರಿ ನಿರ್ವಹಣೆಯಿಂದ ಉಪಾಂತ್ಯ ಹಂತಕ್ಕೇರಲು ಯಶಸ್ವಿಯಾಗಿದೆ. ಯಶ್ ಧುಲ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ನಿಶಾಂತ್ ಸಿಂಧು ಕೂಡ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಆಸೀಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಭಾರತ ತಂಡ ಸತತ ನಾಲ್ಕನೇ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿದೆ.

ವಿಶ್ವಕಪ್ ಆರಂಭಕ್ಕು ಮುನ್ನ ಏಷ್ಯಾಕಪ್ ಹೊರತುಪಡಿಸಿ ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಕ್ರಿಕೆಟಿಗರು ಚಟುವಟಿಕೆಗಳಿಂದ ಹೊರಗುಳಿದಿದ್ದರು. 4 ಬಾರಿ ಚಾಂಪಿಯನ್ ಭಾರತ ತಂಡ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೊದಲ ಪಂದ್ಯದ ಬಳಿಕ ಐರ್ಲೆಂಡ್ ಹಾಗೂ ಉಗಾಂಡ ಎದುರಿನ ಪಂದ್ಯಗಳಿಗೆ ನಾಯಕ ಯಶ್ ಧುಲ್ ಸೇರಿದಂತೆ ಐವರು ಆಟಗಾರರು ಅಲಭ್ಯರಾಗಿದ್ದರು. ಬಳಿಕ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧದ ಎಂಟರಘಟ್ಟದ ಹಣಾಹಣಿ ವೇಳೆ ನಿಶಾಂತ್ ಸಿಂಧುಗೆ ವೈರಸ್ ಕಾಣಿಸಿಕೊಂಡಿತ್ತು. ಯಶ್ ಧುಲ್, ಉಪನಾಯಕ ಶೇಕ್ ರಶೀದ್, ಹರ್‌ನೂರ್ ಸಿಂಗ್, ಅಂಕ್ರಿಷ್ ರಘುವಂಶಿ, ರಾಜಾ ಬಾವಾ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಬಾಂಗ್ಲಾದೇಶ ಎದುರು ಭರ್ಜರಿ ನಿರ್ವಹಣೆ ತೋರಿದ್ದ ವೇಗಿ ರವಿ ಕುಮಾರ್, ರಾಜ್ಯವರ್ಧನ್ ಹಂರ್ಗಾರ್ಕೆರ್, ಸ್ಪಿನ್ನರ್ ವಿಕ್ಕಿ ಒಸ್ಟ್‌ವಾಲ್ ಹಾಗೂ ಕೌಶಾಲ್ ತಂಬೆ ಒಳಗೊಂಡ ಬೌಲಿಂಗ್ ಪಡೆ ಆಸೀಸ್ ಬ್ಯಾಟರ್‌ಗಳಿಗೆ ಕಂಕಟವಾಗಲಿದೆ.

ಮತ್ತೊಂದೆಡೆ, ಎಂಟರಘಟ್ಟದ ಹಣಾಹಣಿಯಲ್ಲಿ ಎರಡು ಬಾರಿ ಚಾಂಪಿಯನ್ ಪಾಕಿಸ್ತಾನ ತಂಡವನ್ನು ಮಣಿಸಿರುವ ಆಸ್ಟ್ರೇಲಿಯಾ ತಂಡ ಕೂಡ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. 17 ವರ್ಷದ ಟೈಗೂ ವೈಲೀ ಉತ್ತಮ ಲಯದಲ್ಲಿದ್ದರೆ, ಟಾಮ್ ವಿಟ್ನೆ, ವಿಲಿಯಮ್ ಸಾಲ್ಜಮಾನ್ ಪಾಕಿಸ್ತಾನ ವಿರುದ್ಧ ಬಿಗಿ ಬೌಲಿಂಗ್ ದಾಳಿಯಿಂದ ಗಮನಸೆಳೆದಿದ್ದರು.

ಪಂದ್ಯ ಆರಂಭ: ಸಂಜೆ 6.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net