

ಸಿಡ್ನಿ: ಎದುರಾಳಿ ಬೌಲರ್‌ಗಳ ಕರಾರುವಾಕ್ ದಾಳಿ ಒಂದೆಡೆಯಾದರೆ, ಫೀಲ್ಡರ್‌ಗಳ ಸ್ಲೆಡ್ಜಿಂಗ್ ನಡುವೆಯೂ ತಾಳ್ಮೆಯನ್ನೇ ಬಂಡವಾಳವಾಗಿಸಿಕೊಂಡ ಹನುಮ ವಿಹಾರಿ (23*ರನ್, 161 ಎಸೆತ, 4 ಬೌಂಡರಿ) ಹಾಗೂ ಅನುಭವಿ ಆರ್.ಅಶ್ವಿನ್ (39*ರನ್, 128 ಎಸೆತ, 7 ಬೌಂಡರಿ) ಜೋಡಿಯ ದಿಟ್ಟ ಪ್ರತಿಹೋರಾಟದ ನೆರವಿನಿಂದ ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಡ್ರಾ ಸಾಧಿಸಿತು. 4 ಪಂದ್ಯಗಳ ಸರಣಿಯ 3ನೇ ಟೆಸ್ಟ್ ಅಂತ್ಯಕ್ಕೆ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ಜನವರಿ 15 ರಿಂದ ಆರಂಭವಾಗಲಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಅಂತ್ಯಗೊಂಡ ಪಂದ್ಯದಲ್ಲಿ 2 ವಿಕೆಟ್‌ಗೆ 98 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ 5 ವಿಕೆಟ್‌ಗೆ 334 ರನ್‌ಗಳಿಸಿ ಡ್ರಾ ಸಾಧಿಸಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 338 ರನ್‌ಗಳಿಸಿದರೆ, ಭಾರತ 244 ರನ್ ಗಳಿಸಿದ್ದ ಭಾರತ 94 ರನ್ ಹಿನ್ನಡೆ ಅನುಭವಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 312 ರನ್ ಗಳಿಸಿದ ಆಸ್ಟ್ರೇಲಿಯಾ 407ರನ್ ಗೆಲುವಿನ ಗುರಿ ನೀಡಿತ್ತು. 9 ರನ್‌ಗಳಿಂದ ಚೇತೇಶ್ವರ್ ಪೂಜಾರ ಹಾಗೂ 4 ರನ್‌ಗಳಿಂದ ದಿನದಾಟ ಆರಂಭಿಸಿದ ನಾಯಕ ಅಜಿಂಕ್ಯ ರಹಾನೆ ಜೋಡಿಗೆ ಆರಂಭದಲ್ಲೇ ನಾಥನ್ ಲ್ಯಾನ್ ಶಾಕ್ ನೀಡಿದರು.