ಬ್ರಿಸ್ಬೇನ್‌ನಲ್ಲಿ ಅಂತಿಮ ಟೆಸ್ಟ್ ಕಾದಾಟ, ಭಾರತ ತಂಡಕ್ಕೆ ಗಾಯದ ಸಮಸ್ಯೆ

match schedule for web
Published on

ಬ್ರಿಸ್ಬೇನ್: ಗಾಯದ ಸಮಸ್ಯೆಯಿಂದ ಬಳಲಿರುವ ಪ್ರವಾಸಿ ಭಾರತ ತಂಡ ಶುಕ್ರವಾರದಿಂದ ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಕಳೆದ ಎರಡೂವರೆ ತಿಂಗಳಿಂದ ಆಸೀಸ್ ನೆಲದಲ್ಲೇ ಬಿಡುಬಿಟ್ಟಿರುವ ಭಾರತ ಸರಣಿಯ ನಿರ್ಣಾಯಕ ಕದನಕ್ಕೆ ಅಣಿಯಾಗಿದೆ. ಸರಣಿ ಗೆಲುವಿನ ತವಕದಲ್ಲಿರುವ ಟೀಮ್ ಇಂಡಿಯಾಗೆ ಗಾಯಾಳುಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿದೆ. 1988 ರಿಂದಲೂ ಗಾಬಾ ಸ್ಟೇಡಿಯಂನಲ್ಲಿ ಅಜೇಯ ಸಾಧನೆಯೊಂದಿಗೆ ಬೀಗುತ್ತಿರುವ ಆಸ್ಟ್ರೇಲಿಯಾ ತಂಡದ ಟ್ರೋಫಿ ಮರಳಿ ಪಡೆಯುವ ಯತ್ನದಲ್ಲಿದೆ. ಪಂದ್ಯ ಡ್ರಾಗೊಂಡರೂ ಭಾರತವೇ ಟ್ರೋಫಿ ಉಳಿಸಿಕೊಳ್ಳಲಿದೆ. ಆಸೀಸ್ ಪ್ರವಾಸದ ಕಡೇ ಹಂತಕ್ಕೆ ಬಂದು ತಲುಪಿರುವ ಟೀಮ್ ಇಂಡಿಯಾ, ಸರಣಿ ಗೆಲುವಿನೊಂದಿಗೆ ಪ್ರವಾಸಕ್ಕೆ ತೆರೆ ಎಳೆಯುವ ವಿಶ್ವಾಸದಲ್ಲಿದೆ. ಸಿಡ್ನಿ ಮೈದಾನದಲ್ಲಿ ಎದುರಾಳಿಗಳ ಸ್ಲೆಡ್ಜಿಂಗ್ ನಡುವೆಯೂ ದಿಟ್ಟ ನಿರ್ವಹಣೆ ತೋರಿ ಡ್ರಾ ಸಾಧಿಸಿದ್ದ ಭಾರತ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು.

* ಟೀಮ್ ಇಂಡಿಯಾಗೆ ಗಾಯಾಳು ಸಮಸ್ಯೆ

ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯದ ಎರಡನೇ ಇನಿಂಗ್ಸ್ ನಿರ್ವಹಣೆ ಹೊರತುಪಡಿಸಿ ಭಾರತ ಸರಣಿಯಲ್ಲಿ ಇದುವರೆಗೂ ಉತ್ತಮ ನಿರ್ವಹಣೆಯನ್ನೇ ತೋರುತ್ತಾ ಬಂದಿದೆ. ಆದರೆ, ಭಾರತಕ್ಕೆ ಗಾಯದ ಸಮಸ್ಯೆಯೇ ದೊಡ್ಡ ಸವಾಲಾಗಿದೆ. ಪ್ಯಾಟ್ ಕಮ್ಮಿನ್ಸ್, ಜೋಸ್ ಹ್ಯಾಸಲ್‌ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಒಳಗೊಂಡ ಆಸೀಸ್ ವೇಗಿಗಳನ್ನು ಎದುರಿಸಬೇಕಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಅಲಭ್ಯತೆ ತಂಡವನ್ನು ಕಾಡುವುದಂತು ಸತ್ಯ. ಜತೆಗೆ ಜಸ್‌ಪ್ರೀತ್ ಬುಮ್ರಾ ಲಭ್ಯತೆ ಕೂಡ ಖಚಿತವಾಗಿಲ್ಲ. ಇದಲ್ಲದೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ಗಾಯಕ್ಕೆ ತುತ್ತಾಗಿದ್ದು, ಆರ್.ಅಶ್ವಿನ್ ಕೂಡ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅನುಭವಿಗಳಾದ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ.

* ಸರಣಿ ಮೇಲೆ ಆಸೀಸ್ ಕಣ್ಣು

ಎರಡನೇ ಹಾಗೂ 3ನೇ ಪಂದ್ಯದಲ್ಲಿ ತಿರುಗೇಟು ಅನುಭವಿಸಿರುವ ಆಸ್ಟ್ರೇಲಿಯಾ ತಂಡ ಗಾಬಾದಲ್ಲಿ ಗೆಲುವಿನ ದಾಖಲೆ ಉಳಿಸಿಕೊಳ್ಳುವ ತವಕದಲ್ಲಿದೆ. ಈ ನೆಲದಲ್ಲಿ ಕಳೆದ 33 ವರ್ಷಗಳಿಂದ ಅಜೇಯವಾಗಿರುವ ಆಸೀಸ್ ಗಾಯದ ಸಮಸ್ಯೆಯಿಂದ ನಲುಗಿರುವ ಪ್ರವಾಸಿ ತಂಡಕ್ಕೆ ಕಡಿವಾಣ ಹಾಕಲು ಸಜ್ಜಾಗಿದೆ. ಸಮರ್ಥ ಬೌಲಿಂಗ್ ಪಡೆ ಹೊಂದಿದ್ದರೂ ಭಾರತದ ಬ್ಯಾಟ್ಸ್‌ಮನ್‌ಗಳ ದಿಟ್ಟ ನಿರ್ವಹಣೆಯೇ ಸಿಡ್ನಿಯಲ್ಲಿ ಗೆಲುವಿಗೆ ಅಡ್ಡಿಯಾಯಿತು. ಇದೀಗ ಗಾಯದ ಸಮಸ್ಯೆಯಲ್ಲಿರುವ ಟೀಮ್ ಇಂಡಿಯಾ ಮೇಲೆ ಸವಾರಿ ಮಾಡಲು ಆಸೀಸ್ ಸನ್ನದ್ಧವಾಗಿದೆ. ಡೇವಿಡ್ ವಾರ್ನರ್ ಾರ್ಮ್ ಕೊಂಚಮಟ್ಟಿಗೆ ಹಿನ್ನಡೆ ಎನಿಸಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸ್ಟೀವನ್ ಸ್ಮಿತ್ ಾರ್ಮ್‌ಗೆ ಮರಳಿರುವುದು ತಂಡದ ಪಾಲಿಗೆ ಸಮಾಧಾನಕರ ಸಂಗತಿ. ತಂಡ ಇದುವರೆಗೂ ಉತ್ತಮ ಆರಂಭ ಪಡೆದಿಲ್ಲ. ಲಬುಶೇನ್, ಕ್ಯಾಮೆರೊನ್ ಗ್ರೀನ್ ಲಯದಲ್ಲಿದ್ದಾರೆ.

* ಟೀಮ್ ನ್ಯೂಸ್

ಭಾರತ

ಗಾಯದ ಸಮಸ್ಯೆಯಿಂದ ಬಳಲಿರುವ ಭಾರತ ತಂಡದಲ್ಲಿ ಕನಿಷ್ಠ 2 ರಿಂದ 3 ಬದಲಾವಣೆ ಪಕ್ಕಾ ಆಗಿದೆ. ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜಾ ಈಗಾಗಲೇ ಹೊರಗುಳಿದಿದ್ದು, ಜಸ್‌ಪ್ರೀತ್ ಬುಮ್ರಾ ಲಭ್ಯತೆ ಕೂಡ ಸ್ಪಷ್ಟವಾಗಿಲ್ಲ. ಬುಮ್ರಾ ಲಭ್ಯವಾಗದಿದ್ದರೆ ಶಾರ್ದೂಲ್ ಠಾಕೂರ್ ಅಥವಾ ಟಿ.ನಟರಾಜನ್ ಕಣಕ್ಕಿಳಿಯಲಿದ್ದಾರೆ. ಕುಲದೀಪ್ ಯಾದವ್ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿದ್ದು, ವೃದ್ಧಿಮಾನ್ ಸಾಹ ಹಾಗೂ ರಿಷಭ್ ಪಂತ್ ಇಬ್ಬರೂ ಕಣಕ್ಕಿಳಿಯಬಹುದು. ಹನುಮ ವಿಹಾರಿ ಬದಲಿಗೆ ಮಯಾಂಕ್ ಅಥವಾ ಸಾಹಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಸಾಹ ಆಡಿದರೂ ರಿಷಭ್ ಪಂತ್ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಸಂಭಾವ್ಯ ತಂಡ: ರೋಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ರಿಷಭ್ ಪಂತ್ (ವಿಕೀ), ಮಯಾಂಕ್ ಅಗರ್ವಾಲ್/ವೃದ್ಧಿಮಾನ್ ಸಾಹ, ಆರ್.ಅಶ್ವಿನ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ/ಶಾರ್ದೂಲ್ ಠಾಕೂರ್/ಟಿ.ನಟರಾಜನ್, ನವದೀಪ್ ಸೈನಿ, ಮೊಹಮದ್ ಸಿರಾಜ್.

ಆಸ್ಟ್ರೇಲಿಯಾ:

ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಖಾತ್ರಿಯಾಗಿದೆ. ಭುಜದ ನೋವಿನಿಂದ ಹೊರಬಿದ್ದಿರುವ ಪುಕೊವ್‌ಸ್ಕಿ ಬದಲಿಗೆ ಮಾರ್ಕಸ್ ಹ್ಯಾರಿಸ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019ರ ಆಶಸ್ ಬಳಿಕ ಹ್ಯಾರಿಸ್‌ಗೆ ಮೊದಲ ಟೆಸ್ಟ್ ಪಂದ್ಯ ಇದಾಗಲಿದೆ. ಉಳಿದಂತೆ ಆಸೀಸ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಂಬುಶೇನ್, ಸ್ಟೀವನ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮೆರೊನ್ ಗ್ರೀನ್, ಟಿಮ್ ಪೇನ್ (ನಾಯಕ, ವಿಕೀ), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಥಾನ್ ಲ್ಯಾನ್, ಜೋಸ್ ಹ್ಯಾಸಲ್‌ವುಡ್.

ಪಿಚ್ ರಿಪೋರ್ಟ್:

ಗಾಬಾ ಸ್ಟೇಡಿಯಂ ಪಿಚ್ ವೇಗಿಗಳಿಗೆ ನೆರವು ನೀಡಲಿದೆ. ಪ್ರಸಕ್ತ ಆವೃತ್ತಿಯಲ್ಲಿ ಹೆಚ್ಚು ಪಂದ್ಯಗಳು ಈ ಮೈದಾನದಲ್ಲಿ ನಡೆದಿಲ್ಲ. ಜನವರಿ ತಿಂಗಳಲ್ಲಿ ಈ ಮೈದಾನದಲ್ಲಿ ಇದುವರೆಗೂ ಕೇವಲ 2 ಪಂದ್ಯಗಳಷ್ಟೆ ಆಯೋಜನೆಗೊಂಡಿವೆ. ಸ್ಥಳೀಯ ಹವಾಮಾನ ಇಲಾಖೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆಗಳಿವೆ. ಮೊದಲ ದಿನದಾಟಕ್ಕೆ ಹೊರತುಪಡಿಸಿ ಉಳಿದ ದಿನ ಮಳೆ ಭೀತಿಯಿದೆ.

* 100: ಆಸೀಸ್ ಸ್ಪಿನ್ನರ್ ನಾಥನ್ ಲ್ಯಾನ್‌ಗೆ 100ನೇ ಟೆಸ್ಟ್ ಪಂದ್ಯ ಇದಾಗಿದೆ. ಇನ್ನು 4 ವಿಕೆಟ್ ಕಬಳಿಸಿದರೆ 400 ವಿಕೆಟ್ ಪೂರೈಸಲಿದ್ದಾರೆ.

* 6: ಭಾರತ ತಂಡ ಗಾಬಾದಲ್ಲಿ ಇದುವರೆಗೂ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, 5ರಲ್ಲಿ ಸೋತು, 2003ರಲ್ಲಿ ಒಂದು ಪಂದ್ಯ ಡ್ರಾ ಸಾಧಿಸಿತ್ತು.

‘ಪಿಚ್ ಬೌನ್ಸಿ ಎಸೆತಗಳಿವೆ ಪಿಚ್ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ತಂಡವೂ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಪಂದ್ಯದಲ್ಲಿ ವೇಗಿಗಳ ಪಾತ್ರ ಪ್ರಮುಖವಾಗಿದ್ದು, ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿದೆ. ತಂಡದ ವೈದ್ಯಕೀಯ ತಂಡ ಬುಮ್ರಾ ಗಾಯದ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಶುಕ್ರವಾರ ಬೆಳಗ್ಗೆಯೇ ಹನ್ನೊಂದರ ಬಳಗ ಅಂತಿಮಗೊಳಿಸಲಾಗುವುದು’

- ವಿಕ್ರಮ್ ರಾಥೋಡ್, ಬ್ಯಾಟಿಂಗ್ ಕೋಚ್

ಪಂದ್ಯ ಆರಂಭ: ಬೆಳಗ್ಗೆ 5 ಗಂಟೆಗೆ, ನೇರ ಪ್ರಸಾರ: ಸೋನಿ ಸಿಕ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net