

ಮೆಲ್ಬೋರ್ನ್: 88 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಹೀನಾಯ ಸೋಲನುಭವಿಸಿ ಮುಖಭಂಗಕ್ಕೀಡಾಗಿರುವ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ 2ನೇ ಎರಡನೇ ಹೋರಾಟಕ್ಕೆ ಸಜ್ಜಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆರಂಭವಾಗಲಿರುವ ಆತಿಥೇಯಾ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರ ಹಂಗಾಮಿ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ತಿರುಗೇಟು ನೀಡುವ ತವಕದಲ್ಲಿದೆ.
ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೇಲೆ ತವರಿಗೆ ಮರಳಿರುವುದರಿಂದ ಕೊನೇ 3 ಟೆಸ್ಟ್‌ಗಳಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನಡೆಯ ನಡುವೆಯೂ ಆಸೀಸ್‌ಗೆ ದಿಟ್ಟ ತಿರುಗೇಟು ನೀಡಿ ಸರಣಿಯಲ್ಲಿ ಸಮಬಲ ಸಾಧಿಸುವ ಕಠಿಣ ಸವಾಲು ಭಾರತ ತಂಡದ ಮುಂದಿದೆ. ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳು ನಿರೀಕ್ಷಿತ ನಿರ್ವಹಣೆ ತೋರಿದ್ದರೂ ಬ್ಯಾಟ್ಸ್‌ಮನ್‌ಗಳು ನೀರಸ ಪ್ರದರ್ಶನ ನೀಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ರನೌಟ್ ಆದ ಬಳಿಕ ಪಂದ್ಯದ ದಿಕ್ಕೇ ಬದಲಾಗಿತ್ತು.
ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ಮಯಾಂಕ್ ಅಗರ್ವಾಲ್ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿರಲಿಲ್ಲ. ಆದರೆ ಈ ಬಾರಿ ಇವರೆಲ್ಲರೂ ಮೊದಲ ಪಂದ್ಯದ ಕಹಿ ಮರೆತು ಜವಾಬ್ದಾರಿಯುತ ಆಟವಾಡಬೇಕಾಗಿದೆ. ಮತ್ತೊಂದೆಡೆ, ಆರಂಭಿಕ ಡೇವಿಡ್ ವಾರ್ನರ್ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ 2ನೇ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಅಡಿಲೇಡ್‌ನಲ್ಲಿ ಎರಡೂವರೆ ದಿನಗಳಲ್ಲೇ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ಕಂಡಿರುವ ಆಸ್ಟ್ರೇಲಿಯಾ ತಂಡ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.
* ತಿರುಗೇಟು ನೀಡುವ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ
ನಾಯಕ ವಿರಾಟ್ ಕೊಹ್ಲಿ ಸೇವೆ ಕಳೆದುಕೊಂಡಿರುವ ಟೀಮ್ ಇಂಡಿಯಾ ಸರಣಿ ಉಳಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಅಡಿಲೇಡ್‌ನಲ್ಲಿ ಕೇವಲ ಎರಡೂವರೆ ದಿನಕ್ಕೆ ಸೋತು ವಿಶ್ವಕ್ರಿಕೆಟ್‌ನಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಭಾರತ ಪುಟಿದೇಳಬೇಕಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಇತರ ಬ್ಯಾಟ್ಸ್‌ಮನ್‌ಗಳು ಸಮರ್ಥ ಹೋರಾಟ ನೀಡಬೇಕಿದೆ. ಇಬ್ಬರು ಆಟಗಾರರ ಪದಾರ್ಪಣೆ ಪಂದ್ಯ ಕೂಡ ಇದಾಗಿದ್ದು, ಅಳೆದು ತೂಗಿ ತಂಡವನ್ನು ಆಯ್ಕೆ ಮಾಡಲಾಗಿದೆ. ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಎದುರಾಗಿದ್ದ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿದ್ದು, ಬ್ಯಾಟಿಂಗ್ ಜತೆಗೆ ಬೌಲಿಂಗ್ ಬಲ ಹೆಚ್ಚಿಸಿದೆ.
ಟೀಮ್ ನ್ಯೂಸ್
ಭಾರತ: ಈ ಬಾರಿಯೂ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಪ್ರಕಟಿಸಲಾಗಿದೆ. 4 ಬದಲಾವಣೆ ಮಾಡಿಕೊಳ್ಳಲಾಗಿದ್ದರೂ, ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನ ನೀಡದಿರುವುದು ಅಚ್ಚರಿಯಾಗಿದೆ. ಪಿತೃತ್ವ ರಜೆ ಮೇಲೆ ನಾಯಕ ಕೊಹ್ಲಿ ತವರಿಗೆ ವಾಪಸಾದರೆ, ಮೊಹಮದ್ ಶಮಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ನಿರಾಸೆ ಮೂಡಿಸಿದ್ದ ಪೃಥ್ವಿ ಷಾ, ವೃದ್ಧಿಮಾನ್ ಸಾಹಗೆ ಕೊಕ್ ನೀಡಲಾಗಿದೆ. ಶುಭಮಾನ್ ಗಿಲ್ ಹಾಗೂ ಮೊಹಮದ್ ಸಿರಾಜ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾದರೆ, ಆಲ್ರೌಂಡರ್ ರವೀಂದ್ರ ಜಡೇಜ ಹಾಗೂ ರಿಷಭ್ ಪಂತ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ ಅಥವಾ ಕ್ಯಾಮರಾನ್ ಗ್ರೀನ್ ಅಡಿಲೇಡ್‌ನಲ್ಲಿ ನಿರೀಕ್ಷಿತ ನಿರ್ವಹಣೆ ತೋರದಿದ್ದರೂ, ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಯಾಕೆಂದರೆ ಡೇವಿಡ್ ವಾರ್ನರ್ ಫಿಟ್ ಆಗಿ 3ನೇ ಟೆಸ್ಟ್‌ಗೆ ಮರಳುವವರೆಗೆ 11ರ ಬಳಗದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ.
*ಪಂದ್ಯ ಆರಂಭ: ಬೆಳಗ್ಗೆ 5.00 (ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್.
*ಪೂಜಾರ ಉಪನಾಯಕ
ಕೊಹ್ಲಿ ಗೈರಿನಲ್ಲಿ ಅಜಿಂಕ್ಯ ರಹಾನೆ ನಾಯಕರಾಗಿ ಬಡ್ತಿ ಪಡೆದಿರುವುದರಿಂದ ಟೆಸ್ಟ್ ತಂಡದ ಉಪನಾಯಕರನ್ನಾಗಿ ಚೇತೇಶ್ವರ ಪೂಜಾರ ಅವರನ್ನು ನೇಮಿಸಲಾಗಿದೆ. 2ನೇ ಟೆಸ್ಟ್‌ಗೆ ಪ್ರಕಟಿಸಿರುವ ಆಡುವ 11ರ ಬಳಗದ ಪಟ್ಟಿಯಲ್ಲಿ ಬಿಸಿಸಿಐ ಇದನ್ನು ಉಲ್ಲೇಖಿಸಿದೆ.
*100: ಭಾರತ-ಆಸ್ಟ್ರೇಲಿಯಾ ನಡುವಿನ 100ನೇ ಟೆಸ್ಟ್ ಪಂದ್ಯ ಇದಾಗಿದೆ. ಹಿಂದಿನ 99 ಪಂದ್ಯಗಳಲ್ಲಿ ಆಸೀಸ್ 43 ಹಾಗೂ ಭಾರತ 28ರಲ್ಲಿ ಜಯಿಸಿದೆ. 27 ಡ್ರಾ ಆಗಿದ್ದು, 1 ಟೈ ಕಂಡಿದೆ. ಭಾರತ ತಂಡ ಇದಕ್ಕೆ ಮುನ್ನ ಇಂಗ್ಲೆಂಡ್ (122) ವಿರುದ್ಧ 100 ಟೆಸ್ಟ್ ಆಡಿತ್ತು.
* 2: 2007ರ ಬಳಿಕ ಭಾರತ ತಂಡ, ಮೊಹಮದ್ ಶಮಿ ಹಾಗೂ ಇಶಾಂತ್ ಶರ್ಮ ಇಲ್ಲದೆ ಏಷ್ಯಾದಿಂದ ಹೊರಗೆ ಎರಡನೇ ಬಾರಿಗೆ ಕಣಕ್ಕಿಳಿಯುತ್ತಿದೆ.
* 2014-15 ರಿಂದ ಈಚೆಗೆ ಎಂಸಿಜಿಯಲ್ಲಿ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ಸರಾಸರಿ ಮೊತ್ತ 460.
* 5: ಸ್ಟೀವನ್ ಸ್ಮಿತ್, ಎಂಸಿಜಿಯಲ್ಲಿ ಆಡಿದ ಕಡೇ 5 ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ 113.50 ರಂತೆ 908 ರನ್ ಬಾರಿಸಿದ್ದಾರೆ.
* 6: ಆಸ್ಟ್ರೇಲಿಯಾ ತಂಡ ಕಳೆದ ವರ್ಷಾಂತ್ಯದಿಂದ ಆಡಿದ ಎಲ್ಲ 6 ಟೆಸ್ಟ್ ಪಂದ್ಯಗಳನ್ನು ಜಯ ದಾಖಲಿಸಿದೆ.
* 2: ಭಾರತ ತಂಡ ಪರ ವಿದೇಶಿ ನೆಲದಲ್ಲಿ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರು ಪದಾರ್ಪಣೆ ಮಾಡುತ್ತಿರುವ
2ನೇ ದೃಷ್ಟಾಂತ ಇದಾಗಿದೆ. 2001ರಲ್ಲಿ ವೀರೇಂದ್ರ ಸೆಹ್ವಾಗ್ ಹಾಗೂ ದೀಪ್ ದಾಸ್‌ಗುಪ್ತಾ ಪದಾರ್ಪಣೆ ಮಾಡಿದ್ದರೆ, 2011ರಲ್ಲಿ ವಿರಾಟ್ ಕೊಹ್ಲಿ, ಅಭಿನವ್ ಮುಕುಂದ್ ಹಾಗೂ ಪ್ರವೀಣ್ ಕುಮಾರ್ ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.
* 50: ಆಲ್ರೌಂಡರ್ ರವೀಂದ್ರ ಜಡೇಜಾ ಅವರ 50 ಟೆಸ್ಟ್ ಪಂದ್ಯ ಇದಾಗಿದೆ.
*ಪಿಚ್ ರಿಪೋರ್ಟ್
ಪಂದ್ಯದ ಮೊದಲ ಎರಡು ದಿನ ಮೆಲ್ಬೋರ್ನ್‌ನಲ್ಲಿ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ನಿರೀಕ್ಷೆ ಇದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ಹೆಚ್ಚು ರನ್ ನಿರೀಕ್ಷಿಸಬಹುದು. ಕಳೆದ ಐದು ವರ್ಷಗಳಿಂದ ನಡೆದಿರುವ ಪಂದ್ಯಗಳಲ್ಲಿ ಹರಿದಿರುವ ರನ್‌ಪ್ರವಾಹ ಇದಕ್ಕೆ ಪುಷ್ಠಿಯಾಗಿದೆ.