ಇಂದು ಭಾರತ-ಆಸ್ಟ್ರೇಲಿಯಾ 3ನೇ ಟಿ20 ಕದನ, ಸರಣಿ ಕ್ಲೀನ್‌ಸ್ವೀಪ್‌ನತ್ತ ವಿರಾಟ್ ಕೊಹ್ಲಿ ಪಡೆ ಚಿತ್ತ

india and australia preview for web
Published on

ಸಿಡ್ನಿ: ಏಕದಿನ ಸರಣಿ ಸೋಲಿಗೆ ಪ್ರತೀಕಾರವಾಗಿ ಚುಟುಕು ಕ್ರಿಕೆಟ್ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ನಿಗದಿತ ಓವರ್‌ಗಳ ಕಡೇ ಪಂದ್ಯವೂ ಇದಾಗಿದ್ದು, ಭಾರತ ತಂಡ ಸರಣಿ ಕ್ಲೀನ್‌ಸ್ವೀಪ್ ಕನಸಿನಲ್ಲಿದೆ. ಇದರೊಂದಿಗೆ ಮುಂಬರುವ ಬಹುನಿರೀಕ್ಷಿತ ಟೆಸ್ಟ್ ಸರಣಿಗೆ ಆತ್ಮವಿಶ್ವಾಸದ ವೃದ್ಧಿಗೆ ಸಹಕಾರಿಯಾಗಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಏಕದಿನ ಸರಣಿ ಕೈಚೆಲ್ಲಿದ್ದ ಭಾರತ ತಂಡ ಅದೇ ನೆಲದಲ್ಲಿ ಭಾನುವಾರ ಟಿ20 ಸರಣಿ ವಶಪಡಿಸಿಕೊಂಡು ಆತಿಥೇಯರಿಗೆ ತಿರುಗೇಟು ನೀಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.

* ಆತ್ಮವಿಶ್ವಾಸದಲ್ಲಿ ಟೀಮ್ ಇಂಡಿಯಾ

ಮೊದಲ ಟಿ20 ಪಂದ್ಯದ ಗೆಲುವಿನ ರೂವಾರಿ ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿಯಂಥ ಅನುಭವಿಗಳ ಅನುಪಸ್ಥಿತಿ ಸ್ಥಿತಿ ನಡುವೆಯೂ ಭರ್ಜರಿ ನಿರ್ವಹಣೆ ತೋರಿತ್ತು. ಯಾರ್ಕರ್ ಸ್ಪೆಷಲಿಸ್ಟ್ ಟಿ.ನಟರಾಜನ್, ಸಿಕ್ಕ ಎರಡನೇ ಅವಕಾಶದಲ್ಲೂ ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಮನೀಷ್ ಪಾಂಡೆ ಬದಲಿಗೆ ಸಿಕ್ಕ ಅವಕಾಶವನ್ನು ಶ್ರೇಯಸ್ ಅಯ್ಯರ್ ಸೂಕ್ತವಾಗಿ ಬಳಸಿಕೊಂಡರು. ಸ್ಲಾಗ್ ಓವರ್‌ನಲ್ಲಿ ಭಾರತದ ಗೆಲುವಿಗೆ ಹಾರ್ದಿಕ್ ಪಾಂಡ್ಯ ಜತೆಗೂಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಸಮರ್ಥ ನಿರ್ವಹಣೆ ತೋರುತ್ತಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿದ್ದು, ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.

* ಪುಟಿದೇಳುವ ವಿಶ್ವಾಸದಲ್ಲಿ ಆಸೀಸ್

ನಾಯಕ ಆರನ್ ಫಿಂಚ್, ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹಾಗೂ ಜೋಸ್ ಹ್ಯಾಸಲ್‌ವುಡ್‌ರಂಥ ಅನುಭವಿ ಆಟಗಾರರ ಸೇವೆಯನ್ನು ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ತಂಡದ ಸಂಯೋಜನೆಯೇ ದೊಡ್ಡ ತಲೆನೋವಾಗಿದೆ. ಗಾಯದ ಸಮಸ್ಯೆಯಿಂದ ಫಿಂಚ್ ಚೇತರಿಸಿಕೊಂಡಿದ್ದು, ಮಂಗಳವಾರ ಹನ್ನೊಂದರ ಬಳಗದ ಸಾರಥ್ಯ ವಹಿಸಿಕೊಳ್ಳುವ ಸಾಧ್ಯತೆಗಳಿವೆ. ಡಾರ್ಸಿ ಶಾರ್ಟ್ ಆರಂಭಿಕ ಹಂತದಲ್ಲಿ ಸ್ಫೋಟಿಸುತ್ತಿಲ್ಲ. ಮಾರ್ಕಸ್ ಸ್ಟೋಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್‌ರಂಥ ಅನುಭವಿ ಆಟಗಾರರಿಂದಲೂ ನಿರೀಕ್ಷಿತ ನಿರ್ವಹಣೆ ಕಂಡು ಬರುತ್ತಿಲ್ಲ. ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ತಪ್ಪಿಸಿಕೊಳ್ಳುವ ಸಲುವಾಗಿ ಆಸ್ಟ್ರೇಲಿಯಾ ಹೋರಾಡಲೇ ಬೇಕಿದೆ. ಮುಂಬರುವ ಟೆಸ್ಟ್ ಸರಣಿಗೆ ಅಗತ್ಯ ಸಿದ್ಧತೆ ಹಾಗೂ ಆತ್ಮವಿಶ್ವಾಸ ಉಳಿಸಿಕೊಳ್ಳುವ ಆಸೀಸ್ ತಂಡಕ್ಕೆ ಪ್ರಬಲ ಹೋರಾಟ ಅನಿವಾರ್ಯವಾಗಿದೆ.

ಟೀಮ್ ನ್ಯೂಸ್

ಭಾರತ

ಸರಣಿ ಜಯಿಸಿದ ಹುಮ್ಮಸ್ಸಿನಲ್ಲಿರುವ ಭಾರತ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವುದು ಕಷ್ಟ. ಮೊಹಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಅಲಭ್ಯತೆ ನಡುವೆಯೂ ನಟರಾಜನ್-ಶಾರ್ದೂಲ್ ಠಾಕೂರ್ ಜೋಡಿ ಉತ್ತಮ ನಿರ್ವಹಣೆ ತೋರಿದೆ. ಟೆಸ್ಟ್‌ಗೆ ಸಿದ್ಧತೆ ಕೈಗೊಳ್ಳುವ ದೃಷ್ಟಿಯಿಂದ ಬುಮ್ರಾ-ಶಮಿಗೆ ವಿಶ್ರಾಂತಿ ಮುಂದುವರಿಯಲಿದೆ. ಹೀಗಾಗಿ ಮನೀಷ್ ಪಾಂಡೆ ಈ ಪಂದ್ಯದಲ್ಲೂ ಹೊರಗುಳಿಯಲಿದ್ದಾರೆ.

ಸಂಭಾವ್ಯ ತಂಡ: ಶಿಖರ್ ಧವನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ದೀಪರ್ ಚಹರ್, ಟಿ.ನಟರಾಜನ್, ಯಜುವೇಂದ್ರ ಚಾಹಲ್.

ಆಸ್ಟ್ರೇಲಿಯಾ:

ಗಾಯದ ಸಮಸ್ಯೆಯಿಂದ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ಆರನ್ ಫಿಂಚ್ ತಂಡಕ್ಕೆ ವಾಪಸಾಗಬಹುದು. ಫಿಂಚ್ ತಂಡದಲ್ಲಿ ಕಾಣಿಸಿಕೊಂಡರೆ ಡಾರ್ಸಿ ಶಾರ್ಟ್ ಹೊರಗುಳಿಯಲಿದ್ದಾರೆ. ಟೆಸ್ಟ್ ಸರಣಿ ದೃಷ್ಟಿಯಿಂದ ಸ್ಟೀವನ್ ಸ್ಮಿತ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿದ್ದು, ಮಾರ್ಕಸ್ ಸ್ಟೋಯಿನಿಸ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವರು. ಜತೆಗೆ ಅಲೆಕ್ಸ್ ಕ್ಯಾರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಕಾಣುವಂತಿಲ್ಲ. ಇದರಿಂದ ಜೋಸ್ ಹ್ಯಾಸಲ್‌ವುಡ್‌ಗೆ ಈ ಪಂದ್ಯದಲ್ಲೂ ವಿಶ್ರಾಂತಿ ನೀಡಲಾಗುತ್ತಿದೆ.

ಸಂಭಾವ್ಯ ತಂಡ: ಆರನ್ ಫಿಂಚ್/ಡಾರ್ಸಿ ಶಾರ್ಟ್, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್/ಅಲೆಕ್ಸ್ ಕ್ಯಾರಿ, ಗ್ಲೇನ್ ಮ್ಯಾಕ್ಸ್‌ವೆಲ್, ಮೋಯ್ಸಿಸ್ ಹೆನ್ರಿಕ್ಸ್, ಮಾರ್ಕಸ್ ಸ್ಟೋಯಿನಿಸ್, ಸೀನ್ ಅಬೋಟ್, ಡೇನಿಯಲ್ ಸ್ಯಾಮ್ಸ್, ಮಿಚೆಲ್ ಸ್ವಿಪ್‌ಸನ್, ಆಡಂ ಜಂಪಾ, ಆಂಡ್ರ್ಯೋ ಟೈ.

ಪಂದ್ಯ ಆರಂಭ: ಮಧ್ಯಾಹ್ನ 1.40ಕ್ಕೆ ನೇರ ಪ್ರಸಾರ: ಸೋನಿ ಸಿಕ್ಸ್

ಮುಖಾಮುಖಿ: 22, ಭಾರತ : 13, ಆಸ್ಟ್ರೇಲಿಯಾ: 8, ರದ್ದು: 1

ಆಸ್ಟ್ರೇಲಿಯಾದಲ್ಲಿ : 11, ಭಾರತ: 7, ಆಸ್ಟ್ರೇಲಿಯಾ: 3, ರದ್ದು: 1.

ಪಿಚ್ ರಿಪೋರ್ಟ್

ಹಿಂದಿನ ಪಂದ್ಯದಲ್ಲಿ ರನ್‌ಹೊಳೆಯೇ ಹರಿದಿತ್ತು. ಮಂಗಳವಾರವೂ ಬ್ಯಾಟ್ಸ್‌ಮನ್‌ಗಳು ಮಿಂಚುವ ಸಾಧ್ಯತೆಗಳಿವೆ. ವಾತಾವರಣ ಸಂಪೂರ್ಣ ತಂಪಾಗಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್ ಸಂಯೋಜನೆಗೆ ಕೆಲಕಾಲ ಅಡ್ಡಿಯಾಗಬಹುದು.

* 3: ಒಂದು ವೇಳೆ ಆಸ್ಟ್ರೇಲಿಯಾ ಸೋತರೆ ಟಿ20 ಸರಣಿಯಲ್ಲಿ ಮೂರನೇ ಬಾರಿಗೆ ವೈಟ್‌ವಾಷ್ ಆಗಲಿದೆ. ಇದಕ್ಕೂ ಮೊದಲು ಭಾರತ ಹಾಗೂ ಪಾಕಿಸ್ತಾನ ವಿರುದ್ಧ ತಲಾ ಒಂದು ಬಾರಿ ವೈಟ್‌ವಾಷ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net