

ಅಬುಧಾಬಿ: ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಆರಂಭಿಕರಾದ ರೋಹಿತ್ ಶರ್ಮ (74 ರನ್, 47 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (69 ರನ್, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಮತ್ತು 4 ವರ್ಷಗಳ ಬಳಿಕ ನಿಗದಿತ ಓವರ್‌ಗಳ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಆರ್. ಅಶ್ವಿನ್ (14ಕ್ಕೆ 2) ಸ್ಪಿನ್ ದಾಳಿಯಿಂದ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು 66 ರನ್‌ಗಳಿಂದ ಮಣಿಸಿತು. ಈ ಜಯದೊಂದಿಗೆ ಟೀಮ್ ಇಂಡಿಯಾದ ಸೆಮೀಸ್ ಆಸೆ ಜೀವಂತವಾಗಿ ಉಳಿಯಿತು. ಮತ್ತೊಂದೆಡೆ, ಎರಡನೇ ಸೋಲು ಕಂಡ ಅಫ್ಘಾನಿಸ್ತಾನ ಉಪಾಂತ್ಯದ ಹಾದಿ ಮತ್ತಷ್ಟು ಕಠಿಣಗೊಂಡಿತು.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ನ್ಯೂಜಿಲೆಂಡ್‌ಗೆ ಆಘಾತ ನೀಡಿದರೆ, ಭಾರತಕ್ಕೆ ಸೆಮೀಸ್ ಆಸೆ ವೃದ್ಧಿಸಲಿದೆ. ಆಗ ರನ್‌ರೇಟ್ ಲೆಕ್ಕಾಚಾರದಲ್ಲಿ ಭಾರತ ಉಪಾಂತ್ಯಕ್ಕೇರಬಹುದಾಗಿದೆ. ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 2 ವಿಕೆಟ್‌ಗೆ 210 ರನ್‌ಗಳಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 7 ವಿಕೆಟ್‌ಗೆ 144 ರನ್‌ಗಳಿಸಲಷ್ಟೇ ಶಕ್ತವಾಯಿತು.
ಭಾರತ: 2 ವಿಕೆಟ್‌ಗೆ 210 (ಕೆಎಲ್ ರಾಹುಲ್ 69, ರೋಹಿತ್ ಶರ್ಮ 74, ರಿಷಭ್ ಪಂತ್ 27*, ಹಾರ್ದಿಕ್ ಪಾಂಡ್ಯ 35*, ಗುಲ್ಬಾದಿನ್ ನೈಬ್ 39ಕ್ಕೆ 1, ಕರೀಮ್ ಜನತ್ 7ಕ್ಕೆ 1), ಅಫ್ಘಾನಿಸ್ತಾನ: 7 ವಿಕೆಟ್‌ಗೆ 144 (ಕರೀಮ್ ಜನತ್ 42*, ಮೊಹಮದ್ ನಬಿ 35, ಗುಲ್ಬಾದಿನ್ ನೈಬ್ 18, ಆರ್.ಅಶ್ವಿನ್ 14ಕ್ಕೆ 2, ಮೊಹಮದ್ ಶಮಿ 32ಕ್ಕೆ 3).