

ಮುಂಬೈ: ಆತಿಥೇಯ ಭಾರತ ತಂಡ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಬಲಿಷ್ಠ ಆಸ್ಟ್ರೆಲಿಯಾ ತಂಡವನ್ನು ಎದುರಿಸಲಿದ್ದು, ಅದಕ್ಕೂ ಮುನ್ನ ಭಾನುವಾರ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಈ ಔಪಚಾರಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೆಮೀಸ್ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಹರ್ಮಾನ್ಪ್ರೀತ್ ಕೌರ್ ಪಡೆಯ ಗುರಿಯಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಗೆಲುವಿನೊಂದಿಗೆ ಸೆಮಿೈನಲ್ ಸ್ಥಾನ ಖಾತ್ರಿ ಪಡಿಸಿಕೊಂಡಿರುವ ಭಾರತದ ಪಾಲಿಗೆ ಇದು ಅಭ್ಯಾಸ ಪಂದ್ಯ ಎನಿಸಿದರೂ, ಲಯ ಕಾಯ್ದುಕೊಳ್ಳುವುದು ಅನಿವಾರ್ಯ ಎನಿಸಿದೆ. ಚೊಚ್ಚಲ ಐಸಿಸಿ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಭಾರತ ಇದುವರೆಗೆ ಆಡಿರುವ 6ರಲ್ಲಿ ತಲಾ 3 ಜಯ-ಸೋಲು ಕಂಡಿದೆ. ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ ಭಾರತದ 4ನೇ ಸ್ಥಾನದ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತ ಈ ಪಂದ್ಯದ ಜತೆಗೆ ಸೆಮಿಫೈನಲ್, ಫೈನಲ್ ಪಂದ್ಯಗಳನ್ನು (ಅರ್ಹತೆ ಪಡೆದರೆ) ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಡಲಿದೆ.
ಕಳೆದ ಪಂದ್ಯದಲ್ಲಿ ಅಮನ್ಜೋತ್ ಕೌರ್ರನ್ನು ಕೈಬಿಟ್ಟು, ಜೆಮೀಮಾ ರೋಡ್ರಿಗಸ್ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದ ಭಾರತದ ತಂತ್ರ ಫಲ ನೀಡಿದೆ. ಬೌಲಿಂಗ್ ವಿಭಾಗದಲ್ಲಿ ಪರಿಣಾಮಕಾರಿ ಪ್ರದರ್ಶನದ ಅಗತ್ಯವಿದೆ . ರಿಚಾ ಘೋಷ್ ಹಿಂದಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಬಾಂಗ್ಲಾ ವಿರುದ್ಧ ಆಡುವುದು ಅನುಮಾನ ಎನಿಸಿದೆ. ಬಾಂಗ್ಲಾದೇಶ ಕೊನೇ ಸ್ಥಾನ ತಪ್ಪಿಸಲು ಹೋರಾಡಲಿದ್ದು, 6 ಪಂದ್ಯಗಳಲ್ಲಿ ಕೇವಲ 1 ಜಯ, 5 ಸೋಲು ಕಂಡಿದೆ.
ಮುಖಾಮುಖಿ: 8
ಭಾರತ: 6
ಬಾಂಗ್ಲಾದೇಶ: 1
ಟೈ: 1
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್