

ವೆಲ್ಲಿಂಗ್ಟನ್: ಸತತ ಎರಡನೇ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡವನ್ನು ಅಂತಿಮ ಓವರ್ನಲ್ಲಿ ಒತ್ತಡಕ್ಕೆ ಸಿಲುಕಿಸಲು ಯಶಸ್ವಿಯಾದ ಭಾರತ ತಂಡ ಸೂಪರ್ ಓವರ್ನಲ್ಲಿ ಗೆಲುವು ಒಲಿಸಿಕೊಂಡಿದೆ. ಆತಿಥೇಯರು ಮಾಡಿದ ಎಡವಟ್ಟಿನಿಂದ, ವೆಸ್ಟ್ಪ್ಯಾಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 4ನೇ ಟಿ20 ಪಂದ್ಯವೂ ಟೈಗೊಂಡಿತು. ಫಲಿತಾಂಶ ನಿರ್ಣಾಯಕ್ಕಾಗಿ ನಡೆದ ಸೂಪರ್ ಓವರ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ
ಬಿರುಸಿನ ಬ್ಯಾಟಿಂಗ್ ಫಲವಾಗಿ ಭಾರತ ತಂಡ, ಒಂದು ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. 5 ಪಂದ್ಯಗಳ ಸರಣಿಯಲ್ಲಿ ಭಾರತ 4-0 ಮುನ್ನಡೆ ಸಾಧಿಸಿದ್ದು, ಕ್ಲೀನ್ಸ್ವೀಪ್ನತ್ತ ದೃಷ್ಟಿ ಹರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಕನ್ನಡಿಗ ಮನೀಷ್ ಪಾಂಡೆ (50*ರನ್, 36 ಎಸೆತ, 3 ಬೌಂಡರಿ) ಸಮಯೋಚಿತ ನಿರ್ವಹಣೆ ಫಲವಾಗಿ 8 ವಿಕೆಟ್ಗೆ 165 ರನ್ಗಳಿಸಿತು. ಪ್ರತಿಯಾಗಿ, ಅಂತಿಮ ಓವರ್ನಲ್ಲಿ ನಾಟಕೀಯ ಕುಸಿತ ಕಂಡ ನ್ಯೂಜಿಲೆಂಡ್, 20 ಓವರ್ಗಳಲ್ಲಿ 7 ವಿಕೆಟ್ಗೆ 165 ರನ್ ಗಳಿಸಿ ಟೈ ಸಾಧಿಸಿತು. ಬಳಿಕ ಸೂಪರ್ ಓವರ್ನಲ್ಲಿ ಎಂದಿನಂತೆ ಕಿವೀಸ್ಗೆ ಅದೃಷ್ಟ ಕೈಕೊಟ್ಟಿತು.
ರಾಹುಲ್ ಸೂಪರ್ ಆಟ: ಬಿಗಿ ಬೌಲಿಂಗ್ ದಾಳಿಗೆ ಹೆಸರಾಗಿರುವ ಜಸ್ಪ್ರೀತ್ ಬುಮ್ರಾ ಸೂಪರ್ ಓವರ್ನಲ್ಲಿ ಎಸೆದ ಆರಂಭಿಕ 3 ಎಸೆತಗಳಿಂದ ಸೀಫರ್ಟ್ 1 ಬೌಂಡರಿ ಸೇರಿದಂತೆ 8 ರನ್ ಗಳಿಸಿ, 4ನೇ ಎಸೆತದಲ್ಲಿ ಔಟಾದರು. ಕಾಲಿನ್ ಮನ್ರೊ 5 ಎಸೆತದಲ್ಲಿ ಬೌಂಡರಿ ಸಿಡಿಸಿದರೆ, 6ನೇ ಎಸೆತದಲ್ಲಿ ಸಿಂಗಲ್ಸ್ ಕಸಿದು ಕಿವೀಸ್ ಮೊತ್ತವನ್ನು 13ಕ್ಕೇರಿಸಿದರು. ಬಳಿಕ ಟಿಮ್ ಸೌಥಿ
ಎಸೆತದಲ್ಲಿ ಕೆಎಲ್ ರಾಹುಲ್ ಆರಂಭಿಕ 2 ಎಸೆತದಲ್ಲೇ ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ಗೆಲುವನ್ನು ಸುಲಭವಾಗಿಸಿದರು. 3ನೇ ಎಸೆತ ದಲ್ಲೂ ಸಿಕ್ಸರ್ ಸಿಡಿಸಲು ಯತ್ನಿಸಿ ಡೀಪ್ ಮಿಡ್ವಿಕೆಟ್ನಲ್ಲಿದ್ದ ಕಗಿಲಿನ್ಗೆ
ಕ್ಯಾಚ್ ನೀಡಿದರು. 4ನೇ ಎಸೆತದಲ್ಲಿ ಮಿಡ್ ಆನ್ನತ್ತ ತಳ್ಳಿದ ಕೊಹ್ಲಿ, ಸಂಜು ಸ್ಯಾಮ್ಸನ್ ಜತೆಗೂಡಿ 2 ರನ್ ಕದ್ದರು. 5ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ ಕೊಹ್ಲಿ ಭಾರತದ ಗೆಲುವನ್ನು ಸಾರಿದರು.
ಭಾರತಕ್ಕೆ ಆರಂಭಿಕ ಆಘಾತ: ಸರಣಿ ಗೆದ್ದಿರುವ ಹಿನ್ನೆಲೆಯಲ್ಲಿ ಕೆಲಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ (8) ಅವಕಾಶವನ್ನು ಬಳಸಿಕೊಳ್ಳ ಲಿಲ್ಲ. ಒಂದೆಡೆ ಕೆಎಲ್ ರಾಹುಲ್ (39 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿಸುತ್ತಿದ್ದರೆ, ಮತ್ತೊಂದೆಡೆ, ಕಿವೀಸ್ ಬಿಗಿ ಬೌಲಿಂಗ್ ದಾಳಿ ಎದುರು ಭಾರತ ದಿಢೀರ್ ಕುಸಿತ ಕಂಡಿತು. ನಾಯಕ ವಿರಾಟ್ ಕೊಹ್ಲಿ (11), ಶ್ರೇಯಸ್ ಅಯ್ಯರ್ (1), ಶಿವಂ ದುಬೆ (12) ನಿರಾಸೆ ಮೂಡಿಸಿದರು. ನಂತರ ರಾಹುಲ್ ಕೂಡ ಸೋಧಿ ಎಸೆತದಲ್ಲಿ ಸ್ಯಾಂಟ್ನರ್ಗೆ ಕ್ಯಾಚ್ ನೀಡಿದರು.
ಕ್ರಿಕೆಟ್ ಜಗತ್ತಿನ ಹೊಸ ಚೋಕರ್ಸ್ ಕಿವೀಸ್!
ನಿರ್ಣಾಯಕ ಘಟ್ಟದಲ್ಲಿ ಮುಗ್ಗರಿಸುವ ಚಾಳಿಯಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿನ ಚೋಕರ್ಸ್ ಎನಿಸಿಕೊಂಡಿದೆ. ಇದೀಗ ಈ ಸ್ಥಾನಕ್ಕೆ ನ್ಯೂಜಿಲೆಂಡ್ ತಂಡ ಬಂದಂತಿದೆ. ಕಳೆದ ವರ್ಷ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಟೈ ಆದ ಬಳಿಕ ಸೂಪರ್ ಓವರ್ನಲ್ಲೂ ಟೈ ಆಗಿ ಬೌಂಡರಿ ಕೌಂಟ್ನಿಂದ ಪ್ರಶಸ್ತಿ ವಂಚಿತವಾಗಿದ್ದ ಕಿವೀಸ್, ನಂತರ ಟಿ20ಯಲ್ಲಿ ಆಡಿದ 3 ಸೂಪರ್ ಓವರ್ನಲ್ಲೂ (ಭಾರತ ವಿರುದ್ಧ 2, ಇಂಗ್ಲೆಂಡ್ ವಿರುದ್ಧ 1) ಎಡವಿದೆ. ಟಿ20ಯಲ್ಲಿ ಒಟ್ಟು 8 ಟೈ ಕಂಡಿರುವ ಕಿವೀಸ್ 6 ಬಾರಿ ಸೂಪರ್ ಓವರ್ನಲ್ಲಿ ಸೋತಿದೆ. ನ್ಯೂಜಿಲೆಂಡ್ ತಂಡ ಆಡಿದ ಕಡೇ 5 ಸೂಪರ್ ಓವರ್ ಪಂದ್ಯಗಳಲ್ಲೂ ಸೋತಿದ್ದು, 2008ರಲ್ಲಿ ಆಕ್ಲೆಂಡ್ನಲ್ಲಿ ವಿಂಡೀಸ್ ಎದುರು ಕಡೆಯ ಬಾರಿಗೆ ಸೂಪರ್ ಓವರ್ನಲ್ಲಿ ಜಯ ದಾಖಲಿಸಿದೆ.
ಮನೀಷ್ ಏಕಾಂಗಿ ಹೋರಾಟ
ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ಕೇವಲ 88 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಕನಿಷ್ಠ ಸಾಧಾರಣ ಮೊತ್ತ ಪೇರಿಸಲು ಪರದಾಡುತ್ತಿದ್ದ ಭಾರತ ತಂಡಕ್ಕೆ ಕನ್ನಡಿಗ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ನಿರ್ವಹಣೆಯಿಂದ ನೆರವಾದರು. ಶಾರ್ದೂಲ್ ಠಾಕೂರ್ (20ರನ್, 15 ಎಸೆತ, 2 ಬೌಂಡರಿ) ಜತೆಗೂಡಿ ತಂಡದ ಮೊತ್ತ ಹಿಗ್ಗಿಸುವಲ್ಲಿ ಮನೀಷ್ ಪಾಂಡೆ ಪ್ರಮುಖ ಪಾತ್ರವಹಿಸಿದರು. ಮನೀಷ್ ಜತೆಗೂಡಿ 7ನೇ ವಿಕೆಟ್ ಉಪಯುಕ್ತ 43 ರನ್ ಕಲೆಹಾಕಿ ಶಾರ್ದೂಲ್ ನಿರ್ಗಮಿಸಿದರು. ನಂತರ ಕ್ರೀಸ್ನಲ್ಲಿ ಏಕಾಂಗಿ ನಿರ್ವಹಣೆ ತೋರಿದ ಮನೀಷ್ ಪಾಂಡೆ, ಯಜುವೇಂದ್ರ ಚಾಹಲ್ (1) ಹಾಗೂ ನವದೀಪ್ ಸೈನಿ (11*) ಜತೆಗೂಡಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಕಡೇ ಓವರ್ನಲ್ಲಿ ಶಾರ್ದೂಲ್ ಜಾದು
ಮೂರನೇ ಪಂದ್ಯದ ಕಡೇ ಓವರ್ನಲ್ಲಿ ಶಮಿ ಮಾಡಿದ ಜಾದುವನ್ನು ಈ ಬಾರಿ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಪುನರಾವರ್ತಿಸಿದರು. ಕಡೇ ಓವರ್ನಲ್ಲಿ ನ್ಯೂಜಿಲೆಂಡ್ ಕೇವಲ 7 ರನ್ ಅವಶ್ಯಕತೆ ಇತ್ತು. ಜತೆಗೆ 7 ವಿಕೆಟ್ಗಳು ಕೈಯಲ್ಲಿದ್ದವು. ಚುಟುಕು ಕ್ರಿಕೆಟ್ನ ಅತ್ಯಂತ ಅನುಭವಿ ಆಟಗಾರ ರಾಸ್ ಟೇಲರ್ ಕೂಡ ಕ್ರೀಸ್ನಲ್ಲಿದ್ದ ಕಾರಣ ನ್ಯೂಜಿಲೆಂಡ್ಗೆ ಸುಲಭ ಗೆಲುವು ಎಂದೇ ಭಾವಿಸಲಾಗಿತ್ತು.
ಆದರೆ, ಶಾರ್ದೂಲ್ ಮೊದಲ ಎಸೆತದಲ್ಲೇ ಟೇಲರ್, ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿದರು. 2ನೇ ಎಸೆತ ಎದುರಿಸಿದ ಡೆರಿಲ್ ಮಿಚೆಲ್ ಬೌಂಡರಿ ಸಿಡಿಸಿದರೆ, ಮರು ಎಸೆತದಲ್ಲಿ ಇಲ್ಲದ ರನ್ಕದಿಯಲು ಹೋಗಿ ಸೀಫರ್ಟ್ ರನೌಟ್ ಬಲೆಗೆ ಬಿದ್ದರು. 4ನೇ ಎಸೆತದಲ್ಲಿ ಸ್ಯಾಂಟ್ನರ್ ಸಿಂಗಲ್ಸ್ ಕಸಿದರು. ಕಿವೀಸ್ಗೆ 2 ಎಸೆತದಲ್ಲಿ 2 ರನ್ ಬೇಕಿದ್ದಾಗ, ದೊಡ್ಡ ಹೊಡೆತಕ್ಕೆ ಮುಂದಾದ ಮಿಚೆಲ್ ಔಟಾದರು. ಕಡೇ ಎಸೆತದಲ್ಲಿ 2ನೇ ರನ್ ಗಳಿಸಲು ಯತ್ನಿಸಿದ ಸ್ಯಾಂಟ್ನರ್ ರನೌಟ್ ಆದರು. ಕಡೇ ಓವರ್ನಲ್ಲಿ 5 ರನ್ಗಳಿಗೆ 4 ವಿಕೆಟ್ ಉರುಳಿತು.
ಭಾರತ: 8 ವಿಕೆಟ್ಗೆ 165
ಇತರ: 12. ವಿಕೆಟ್ ಪತನ: 1-14, 2-48, 3-52, 4-75, 5-84, 6-88, 7-131, 8-143. ಬೌಲಿಂಗ್: ಟಿಮ್ ಸೌಥಿ 4-0-28-1, ಸ್ಕಾಟ್ ಕಗಿಲಿನ್ 4-0-39-1, ಮಿಚೆಲ್ ಸ್ಯಾಂಟ್ನರ್ 4-0-26-1, ಹ್ಯಾಮಿಶ್ ಬೆನ್ನೆಟ್ 4-0-41-2, ಇಶ್ ಸೋಧಿ 4-0-26-3. ನ್ಯೂಜಿಲೆಂಡ್: 7 ವಿಕೆಟ್ಗೆ 165
ಇತರ: 10. ವಿಕೆಟ್ ಪತನ: 1-22, 2-96, 3-97, 4-159, 5-163, 6-164, 7-165. ಬೌಲಿಂಗ್: ಶಾರ್ದೂಲ್ ಠಾಕೂರ್ 4-0-33-2, ನವದೀಪ್ ಸೈನಿ 4-0-29-0, ಜಸ್ಪ್ರೀತ್ ಬುಮ್ರಾ 4-0-20-1, ಚಾಹಲ್ 4-0-38-1, ವಾಷಿಂಗ್ಟನ್ ಸುಂದರ್ 2-0-24-0, ಶಿವಂ ದುಬೆ 2-0-14-0.
ಪಂದ್ಯಶ್ರೇಷ್ಠ: ಶಾರ್ದೂಲ್ ಠಾಕೂರ್
ಅಂತಿಮ ಟಿ20 ಪಂದ್ಯ
·ಯಾವಾಗ: ಫೆಬ್ರವರಿ 2, ಭಾನುವಾರ
·ಎಲ್ಲಿ: ಮೌಂಟ್ ಮೌಂಗನುಯಿ