ಕನ್ನಡಿಗ ಮಯಾಂಕ್​ ಅಗರ್ವಾಲ್​ ಸಾರಥ್ಯದ ಭಾರತ ಎ ತಂಡಕ್ಕೆ ಒಲಿದ ದುಲೀಪ್​ ಟ್ರೋಫಿ

web duleep
Published on

ಅನಂತರಪುರ: ಕನ್ನಡಿಗರಾದ ಮಯಾಂಕ್​ ಅಗರ್ವಾಲ್​ ಸಾರಥ್ಯ ಮತ್ತು ಸುನೀಲ್​ ಜೋಶಿ ಮಾರ್ಗದರ್ಶನದ ಭಾರತ ಎ ತಂಡ ದುಲೀಪ್​ ಟ್ರೋಫಿ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಭಾರತ ಎ ತಂಡ ಟೂರ್ನಿಯ 3ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಋತುರಾಜ್​ ಗಾಯಕ್ವಾಡ್​ ನಾಯಕತ್ವದ ಭಾರತ ಸಿ ವಿರುದ್ಧ 132 ರನ್​ಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ಮಯಾಂಕ್​ ಬಳಗ ಒಟ್ಟಾರೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಭಾರತ ಸಿ ತಂಡ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿತು.

ಆರ್​ಡಿಟಿ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 6 ವಿಕೆಟ್​ಗೆ 270 ರನ್​ಗಳಿಂದ 4ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಭಾರತ ಎ ತಂಡ 8 ವಿಕೆಟ್​ಗೆ 286 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಇದರಿಂದ ಗೆಲುವಿಗೆ 350 ರನ್​ ಗುರಿ ಪಡೆದ ಭಾರತ ಸಿ ತಂಡ ಸಾಯಿ ಸುದರ್ಶನ್​ (111) ಶತಕದ ಹೋರಾಟದ ನಡುವೆಯೂ 81.5 ಓವರ್​ಗಳಲ್ಲಿ 217 ರನ್​ಗಳಿಗೆ ಸರ್ವಪತನ ಕಂಡಿತು. ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ಪ್ರಶಸ್ತಿ ಒಲಿಸಿಕೊಳ್ಳುವ ಅವಕಾಶ ಹೊಂದಿದ್ದ ಭಾರತ ಸಿ ತಂಡಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ (50ಕ್ಕೆ 3), ತನುಷ್​ ಕೋಟ್ಯಾನ್​ (47ಕ್ಕೆ 3) ಮತ್ತು ಅಕಿಬ್​ ಖಾನ್​ (26ಕ್ಕೆ 2) ಕಡಿವಾಣ ಹಾಕಿದರು.

ಭಾರತ ಎ: 297 ಮತ್ತು 8 ವಿಕೆಟ್​ಗೆ 286 ಡಿಕ್ಲೇರ್​ (ಕುಶಾಗ್ರ 42, ತನುಷ್​ 26*, ಗೌರವ್​ 68ಕ್ಕೆ 4), ಭಾರತ ಸಿ: 234 ಮತ್ತು 217 (ಋತುರಾಜ್​ 44, ವೈಶಾಕ್​ 17, ಸುದರ್ಶನ್​ 111, ಪಾಟೀದಾರ್​ 7, ಕಿಶನ್​ 17, ಪೊರೆಲ್​ 0, ಪ್ರಸಿದ್ಧ ಕೃಷ್ಣ 50ಕ್ಕೆ 3, ತನುಷ್​ 47ಕ್ಕೆ 3, ಅಕಿಬ್​ 26ಕ್ಕೆ 2, ಮುಲಾನಿ 46ಕ್ಕೆ 1).

ಶ್ರೇಯಸ್​ ಬಳಗಕ್ಕೆ ಸಮಾಧಾನಕರ ಜಯ

ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಸೋತಿದ್ದ ಶ್ರೇಯಸ್​ ಅಯ್ಯರ್​ ಸಾರಥ್ಯದ ಭಾರತ ಡಿ ತಂಡ ಕೊನೇ ಪಂದ್ಯದಲ್ಲಿ ಗೆಲುವಿನ ಸಮಾಧಾನ ಕಂಡಿತು. ವೇಗಿಗಳಾದ ಅರ್ಷದೀಪ್​ ಸಿಂಗ್​ (40ಕ್ಕೆ 6) ಮತ್ತು ಆದಿಥ್ಯ ಠಾಕ್ರೆ (59ಕ್ಕೆ 4) ಮಾರಕ ಬೌಲಿಂಗ್​ ಬಲದಿಂದ ಭಾರತ ಡಿ ತಂಡ ಅಭಿಮನ್ಯು ಈಶ್ವರನ್​ ನೇತೃತ್ವದ ಭಾರತ ಬಿ ವಿರುದ್ಧ 257 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

ಆರ್​ಡಿಟಿಎಸ್​ ಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್​ಗೆ 244 ರನ್​ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ಡಿ ತಂಡ 58.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲೌಟ್​ ಆಯಿತು. ಇದರಿಂದ 373 ರನ್​ ಗುರಿ ಪಡೆದ ಭಾರತ ಬಿ ತಂಡ 22.2 ಓವರ್​ಗಳಲ್ಲೇ 115 ರನ್​ಗಳಿಗೆ ಸರ್ವಪತನ ಕಂಡಿತು. ಭಾರತ ಬಿ ತಂಡ ಪ್ರಶಸ್ತಿಗಾಗಿ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು.

ಭಾರತ ಡಿ: 349 ಮತತ್ತು 305 (ರಿಕಿ ಭುಯಿ 119*, ಸೇನ್​ಗುಪ್ತಾ 29, ಅರ್ಷದೀಪ್​ 13, ಮುಕೇಶ್​ 98ಕ್ಕೆ 4, ನವದೀಪ್​ 58ಕ್ಕೆ 3), ಭಾರತ ಬಿ: 282 ಮತ್ತು 115 (ಈಶ್ವರನ್​ 19, ಜಗದೀಶನ್​ 5, ಮುಶೀರ್​ ಖಾನ್​ 0, ಸೂರ್ಯಕುಮಾರ್​ 16, ನಿತೀಶ್​ ರೆಡ್ಡಿ 40*, ವಾಷಿಂಗ್ಟನ್​ 5, ಅರ್ಷದೀಪ್​ 40ಕ್ಕೆ 6, ಆದಿತ್ಯಾ 59ಕ್ಕೆ 4).

ಅ.1ರಿಂದ ಇರಾನಿ ಕಪ್​

ಇರಾನಿ ಕಪ್​ ಮುಂದಿನ ದೇಶೀಯ ಕ್ರಿಕೆಟ್​ ಟೂರ್ನಿಯಾಗಿದೆ. ಅಕ್ಟೋಬರ್​ 1ರಿಂದ 5ರವರೆಗೆ ಮುಂಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣಜಿ ಚಾಂಪಿಯನ್​ ಮುಂಬೈ ಮತ್ತು ಶೇಷ ಭಾರತ ತಂಡಗಳು ಮುಖಾಮುಖಿ ಆಗಲಿವೆ. ನಂತರ ಅಕ್ಟೋಬರ್​ 11ರಿಂದ ಪ್ರತಿಷ್ಠಿತ ರಣಜಿ ಟ್ರೋಫಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net