2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತದ ಜತೆ 6 ದೇಶಗಳ ಪೈಪೋಟಿ!

ನವೆಂಬರ್​ನಲ್ಲಿ ಐಒಸಿ ಎದುರು ಯೋಜನೆಗಳ ವಿವರ ಮಂಡನೆಗೆ ಅವಕಾಶ
2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಭಾರತದ ಜತೆ 6 ದೇಶಗಳ ಪೈಪೋಟಿ!
Published on: 

ಲೌಸನ್ನೆ: ಭಾರತದೊಂದಿಗೆ ಜರ್ಮನಿ, ಕತಾರ್​, ಟರ್ಕಿ ಸಹಿತ 7 ದೇಶಗಳು 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಆಸಕ್ತಿ ತೋರಿಸಿವೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ (ಐಒಸಿ) ಮಂಗಳವಾರ ತಿಳಿಸಿದೆ. ಜತೆಗೆ ಮುಂದಿನ ತಿಂಗಳು ಐಒಸಿಯ "ಭವಿಷ್ಯದ ಆತಿಥೇಯ ಆಯೋಗ'ದ ಎದುರು ಕ್ರೀಡಾಕೂಟದ ಯೋಜನೆಗಳ ವಿವರವನ್ನು ಮಂಡಿಸುವಂತೆ ಈ ದೇಶಗಳನ್ನು ಆಹ್ವಾನಿಸಿದೆ.

ಕ್ರೀಡಾಕೂಟದ ಸ್ಥಳದ ಸಮಗ್ರ ಯೋಜನೆ (ಮಾಸ್ಟರ್​ ಪ್ಲ್ಯಾನ್​) ಮತ್ತು ಕ್ರೀಡಾಪಟುಗಳಿಗೆ ಒದಗಿಸುವ ವ್ಯವಸ್ಥೆ, ಆರ್ಥಿಕ ಸಂಪನ್ಮೂಲಗಳ ಕ್ರೋಢಿಕರಣದ ತಂತ್ರ, ರಾಜಕೀಯ ಮತ್ತು ಸಾರ್ವಜನಿಕ ಬೆಂಬಲ, ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಡುವ ಸಾಮರ್ಥ್ಯ ಮತ್ತು ಆತಿಥೇಯ ದೇಶದ ಜನರಿಗೆ ದೀರ್ಕಾಲೀನ ಪ್ರಯೋಜನಗಳನ್ನು ಕಲ್ಪಿಸುವ ದೂರಗಾಮಿ ಯೋಜನೆ ಮುಂತಾದ ತಾಂತ್ರಿಕ ಅಂಶಗಳ ಆಧಾರದ ಮೇಲೆ ಈ ಯೋಜನೆಗಳನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಐಒಸಿ ತಿಳಿಸಿದೆ. ದಣ ಕೊರಿಯಾ, ದ. ಆಫ್ರಿಕಾ ಮತ್ತು ಹಂಗೆರಿ 2036ರ ಒಲಿಂಪಿಕ್ಸ್​ ಆಯೋಜಿಸುವ ಆಸಕ್ತಿಯನ್ನು ವ್ಯಕ್ತಪಡಿಸಿ ಐಒಸಿ ಜತೆಗೆ ನಿರಂತರ ಮಾತುಕತೆಯಲ್ಲಿರುವ ಇತರ ಮೂರು ದೇಶಗಳಾಗಿವೆ. ಇನ್ನೂ ಕೆಲ ದೇಶಗಳು 2036ರ ನಂತರ ಒಲಿಂಪಿಕ್ಸ್​ ಆವೃತ್ತಿಗಳನ್ನು ಆಯೋಜಿಸುವ ಕುರಿತಾಗಿಯೂ ಐಒಸಿ ಜತೆಗೆ ಮಾತಕತೆಯಲ್ಲಿ ತೊಡಗಿಕೊಂಡಿವೆ. ಅಕ್ಟೋಬರ್​ 31ರ ನಂತರ 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಬೇರೆ ಯಾವುದೇ ಆಸಕ್ತ ದೇಶಗಳನ್ನು ಪರಿಗಣಿಸಲಾಗುವುದಿಲ್ಲ ಎಂದೂ ತಿಳಿಸಲಾಗಿದೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ ಆತಿಥ್ಯದ ರೇಸ್​ನಲ್ಲಿ ಕಾಣಿಸಿಕೊಂಡಿರುವ ಭಾರತ, ಗುಜರಾತ್​ನ ಅಹಮದಾಬಾದ್​ ನಗರದಲ್ಲಿ ಜಾಗತಿಕ ಕ್ರೀಡಾಕೂಟವನ್ನು ಆಯೋಜಿಸುವ ಯೋಜನೆ ಹೊಂದಿದೆ. ಈ ಸಂಬಂಧ ಈಗಾಗಲೆ ಪ್ರಾಥಮಿಕ ಆಸಕ್ತಿಯ ಅಭಿವ್ಯಕ್ತಿಯನ್ನು ಸಲ್ಲಿಸಿದೆ.

2029ರಲ್ಲಿ ಅಂತಿಮ ನಿರ್ಧಾರ

2036ರ ಒಲಿಂಪಿಕ್ಸ್​ ಆತಿಥ್ಯದ ಬಗ್ಗೆ 2029ರ ಮಧ್ಯಭಾಗದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಲಿಂಪಿಕ್ಸ್​ ಆತಿಥ್ಯದ ಮಾತುಕತೆಯಲ್ಲಿ ಕೇಂದ್ರ ಕ್ರೀಡಾ ಸಚಿವಾಲಯದ ಬೆಂಬಲದೊಂದಿಗೆ ಗುಜರಾತ್​ ಸರ್ಕಾರದ ಸಹಯೋಗದಲ್ಲಿ ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯು (ಐಒಎ) ನೇತೃತ್ವ ವಹಿಸಿಕೊಳ್ಳಲಿದೆ. ನವೆಂಬರ್​ನಲ್ಲಿ ಯೋಜನೆಗಳ ವಿವರ ಸಲ್ಲಿಸುವುದು ಆರಂಭಿಕ ಹಂತ ಮಾತ್ರ ಆಗಿರಲಿದೆ. ಆತಿಥ್ಯ ನಿರ್ಧಾರದ ಅಂತಿಮ ಹಂತ 2028ರಲ್ಲಿ ಆರಂಭಗೊಳ್ಳಲಿದೆ. ಬಳಿಕ 2029ರ ಮಧ್ಯಭಾಗದಲ್ಲಿ ಐಒಸಿ ಕಾರ್ಯಕಾರಿ ಮಂಡಳಿಯು "ಆದ್ಯತೆಯ ಆತಿಥೇಯ' ದೇಶವನ್ನು ಆಯ್ಕೆ ಮಾಡಲಿದೆ. ಈ ದೇಶಕ್ಕೆ 2036ರ ಒಲಿಂಪಿಕ್ಸ್​ ಆತಿಥ್ಯ ನೀಡುವ ಬಗ್ಗೆ ಐಒಸಿ ಅಧಿವೇಶನದಲ್ಲಿ ಮತದಾನದ ಮೂಲಕ ಅಂತಿಮವಾಗಿ ನಿರ್ಧರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net