

ಹರಾರೆ: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 23 ರನ್ ಅಂತರದ ಗೆಲುವು ಸಾಧಿಸಿದೆ.
ಇದರೊಂದಿಗೆ ಆತಿಥೇಯ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದ ಮುನ್ನಡೆ ಗಳಿಸಿದೆ. ಟೀಂ ಇಂಡಿಯಾ ಹರಾರೆಯಲ್ಲಿ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಎರಡನೇ ಟಿ20ಯಲ್ಲಿ 100 ರನ್‌ಗಳ ಜಯ ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಮೂರನೇ ಟಿ20ಯಲ್ಲೂ ಜಿಂಬಾಬ್ವೆಯನ್ನು ಮಣಿಸಿದೆ.
ಹರಾರೆಯ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಯಾವ ಹಂತದಲ್ಲೂ ಪೈಪೋಟಿ ಒಡ್ಡಲಿಲ್ಲ. ಅಲ್ಲದೆ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಟಿ20 ಸರಣಿಯ ಮುಂದಿನ ಪಂದ್ಯ ಶನಿವಾರ ನಡೆಯಲಿದೆ.
ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಔಟಾಗದೇ 65 ರನ್ (49 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ ಕ್ಲೈವ್ ಮದಂಡೆ 37 ರನ್ (26 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ವಾಷಿಂಗ್ಟನ್ ಸುಂದರ್ 3 ವಿಕೆಟ್, ಅವೇಶ್ ಖಾನ್ 2 , ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾ ಪರ ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭಮನ್ ಗಿಲ್ 67 ರನ್ ಜೊತೆಯಾಟವಾಡಿದರು. ಜೈಸ್ವಾಲ್ 36 ರನ್(27 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರೆ ಶುಭಮನ್ ಗಿಲ್ 66 ರನ್(49 ಎಸೆತ, 7 ಬೌಂಡರಿ, 3 ಸಿಕ್ಸ್) ಗಾಯಕ್‌ವಾಡ್ 49 ರನ್ (28 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.
ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರ್ಬಾನಿ ಹಾಗೂ ಸಿಕಂದರ್ ರಾಜಾ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.