ಈ 3 ಪ್ರಮುಖ ಕಾರಣಗಳಿಂದಲೇ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋತಿದ್ದು!

Team India
Published on

ನವದೆಹಲಿ: ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಲಂಕಾ ವಿರುದ್ಧ ಭಾರತ ಸೋಲುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸಿಂಹಳಿಯರ ಪಡೆಯಲ್ಲಿ ಮೂವರು ಪ್ರಮುಖ ಬೌಲರ್‌ಗಳಿಲ್ಲದಿದ್ದರೂ ಭಾರತವನ್ನು ಸುಲಭವಾಗಿ ಸೋಲಿಸಿತು. ಕೇವಲ 241 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ರೋಹಿತ್ ಪಡೆ ಎಡವಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಕೂಡ ಅರ್ಧ ಶತಕ ಬಾರಿಸಲಿಲ್ಲ. ಆದರೆ, ಅವರಲ್ಲಿ ಹಲವರು ಕನಿಷ್ಠ ರನ್ ಗಳಿಸಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಆದರೆ, ರೋಹಿತ್ ಶರ್ಮ ಮತ್ತು ಅಕ್ಷರ್ ಪಟೇಲ್ ಹೊರತುಪಡಿಸಿ, ಭಾರತ ತಂಡದಲ್ಲಿ ಉಳಿದ ಎಲ್ಲ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಈಗ ಶ್ರೀಲಂಕಾ ವಿರುದ್ಧ ಭಾರತದ ಸೋಲಿನ ಹಿಂದಿರುವ ಮೂರು ಪ್ರಮುಖ ಕಾರಣಗಳೇನು ಎಂಬುದನ್ನು ತಿಳಿಯೋಣ.

1. ಕಳಪೆ ಬ್ಯಾಟಿಂಗ್​

ಅತ್ಯುತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಟೀಮ್​ ಇಂಡಿಯಾಗೆ 241 ರನ್​ಗಳ ಗುರಿ ಕಷ್ಟವೇನಲ್ಲ. ಆದರೆ, ಸಾಧ್ಯವಾಗಲಿಲ್ಲ. ಅದು ಕೂಡ ಲಂಕಾದ ಯುವ ತಂಡದ ವಿರುದ್ಧ ಅನ್ನೋದೆ ಅಚ್ಚರಿಯ ಸಂಗತಿ. ನಾಯಕ ರೋಹಿತ್ ಶರ್ಮ 44 ಎಸೆತಗಳಲ್ಲಿ 64 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿದರು. ಮೊದಲ ಏಕದಿನ ಪಂದ್ಯದಲ್ಲೂ ರೋಹಿತ್ ಅರ್ಧಶತಕ ಸಿಡಿಸಿದ್ದರು. ಆದರೆ, ಇತರ ಬ್ಯಾಟ್ಸ್‌ಮನ್‌ಗಳು ದಯನೀಯವಾಗಿ ವಿಫಲವಾದರು. ರೋಹಿತ್ ಬಿಟ್ಟರೆ ಅಕ್ಷರ್ ಪಟೇಲ್ ಕೂಡ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದಾರೆ. ಉಳಿದಂತೆ ಉಪನಾಯಕ ಶುಭಮನ್ ಗಿಲ್, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿವಂ ದುಬೆ, ಶ್ರೇಯಸ್ ಅಯ್ಯರ್ ಹಾಗೂ ವಾಷಿಂಗ್ಟನ್ ಸುಂದರ್ ದಯನೀಯವಾಗಿ ವಿಫಲರಾಗಿದ್ದಾರೆ. ಎರಡನೇ ಪಂದ್ಯದಲ್ಲಿ ಭಾರತದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಗಿದೆ.

2. ನಿಧಾನಗತಿಯ ಪಿಚ್​ ಮತ್ತು ಟಾಸ್​

ಈ ಪಂದ್ಯದಲ್ಲಿ ಟಾಸ್ ಸೋತಿದ್ದು ಟೀಮ್​ ಇಂಡಿಯಾ ಸೋಲಿನ ಮೇಲೂ ಪರಿಣಾಮ ಬೀರಿದೆ. ಈ ಪಿಚ್​ನಲ್ಲಿ ಮೊದಲು ಬ್ಯಾಟ್​ ಮಾಡಿದರೆ ಯಶಸ್ಸಿನ ಸಾಧ್ಯತೆ ಹೆಚ್ಚಿದೆ. ಲಂಕಾ ನಾಯಕ ಅಸಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಟೀಮ್​ ಇಂಡಿಯಾ ವಿರುದ್ಧ ನಡೆದ ಮೊದಲನೇ ಏಕದಿನ ಪಂದ್ಯಕ್ಕಿಂತ ಹತ್ತು ರನ್ ಹೆಚ್ಚು ಗಳಿಸಿ 241 ರನ್​ಗಳ ಸವಾಲಿನ ಗುರಿ ನೀಡಿದರು. ಬಳಿಕ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾಗೆ ರೋಹಿತ್-ಗಿಲ್ ಉತ್ತಮ ಆರಂಭ ನೀಡಿದರು. ಅದರಲ್ಲೂ ರೋಹಿತ್ ಶರ್ಮ ಸೂಪರ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮೊದಲ ವಿಕೆಟ್‌ಗೆ 97 ರನ್‌ಗಳ ಬೃಹತ್ ಸ್ಕೋರ್ ಸೇರಿಸಿ ಔಟಾದರು. ಇದಾದ ತಕ್ಷಣವೇ ಗಿಲ್ ಕೂಡ ಔಟಾದರು. ನಿಧಾನಗತಿಯ ಪಿಚ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿ ಹೋದರು. ಲಂಕಾ ಸ್ಪಿನ್ನರ್‌ಗಳ ಜತೆ ಅರೆಕಾಲಿಕ ಸ್ಪಿನ್ನರ್‌ಗಳನ್ನು ಸಹ ಸಮರ್ಥವಾಗಿ ಎದುರಿಸಲು ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ಸಾಧ್ಯವಾಗಲಿಲ್ಲ. ನಿಧಾನಗತಿಯ ಪಿಚ್‌ನಲ್ಲಿ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗದಿರುವುದು ಟೀಮ್​ ಇಂಡಿಯಾ ಸೋಲಿಗೆ ಕಾರಣವಾಗಿತ್ತು.

3. ಟಿ20 ಹ್ಯಾಂಗೋವರ್​

ಸದ್ಯ ಟೀಮ್​ ಇಂಡಿಯಾವನ್ನು ಕಾಡುತ್ತಿರುವ ಭೂತ ಅಂದರೆ ಅದು ಟಿ20 ಮೂಡ್. ಇತ್ತೀಚೆಗಷ್ಟೇ ಟಿ20 ವಿಶ್ವಕಪ್​ನಲ್ಲಿ ಗೆಲುವು, ಜಿಂಬಾಬ್ವೆ ವಿರುದ್ಧ 5 ಟಿ20 ಸರಣಿ ಹಾಗೂ ಶ್ರೀಲಂಕಾ ವಿರುದ್ಧ 3 ಟಿ20 ಸರಣಿ ಗೆದ್ದಿರುವ ಭಾರತದ ಆಟಗಾರರು ಇನ್ನೂ ಟಿ20 ಮೂಡ್​ನಲ್ಲಿದ್ದಾರೆ. ಸದ್ಯಕ್ಕೆ ಏಕದಿನ ಪಂದ್ಯಗಳಿಗೆ ಒಗ್ಗಿಕೊಂಡಿರುವಂತೆ ಕಾಣುತ್ತಿಲ್ಲ. ರೋಹಿತ್ ಶರ್ಮ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು ಆರಂಭದಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ. ಆದರೆ, ರೋಹಿತ್​ ಅವರು ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ. ಇನ್ನುಳಿದ ಬ್ಯಾಟರ್‌ಗಳ ಸ್ಥಿತಿಯು ಕೂಡ ಇದೆ. ಟಿ20 ಮೂಡ್​ನಿಂದ ಏಕದಿನ ಮೂಡ್​ಗೆ ಶಿಫ್ಟ್​ ಆಗದೇ ಇರುವುದು ಸೋಲಿಗೆ ಕಾರಣ ಎನ್ನುತ್ತಾರೆ ಕ್ರಿಕೆಟ್ ತಜ್ಞರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net