

ಬೆಂಗಳೂರು: ಏಷ್ಯಾಕಪ್ ಏಕದಿನ ಟೂರ್ನಿಯ ಅತ್ಯಂತ ಕುತೂಹಲಕಾರಿ ಹಣಾಹಣಿಯಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದೆ. ಆದರೆ ಟಿ20 ಪಂದ್ಯಗಳಿಂದಾಗಿ ಜನರು ಏಕದಿನ ಪಂದ್ಯಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಸುಳ್ಳಾಗಿಸಿದೆ. ಏಕದಿನ ವಿಶ್ವಕಪ್ ಟೂರ್ನಿಯ ನಂತರ ಪ್ರತಿಷ್ಠಿತ ಉಪಖಂಡದ ಟೂರ್ನಿ ಎನಿಸಿರುವ ಏಷ್ಯಾಕಪ್‌ನ ಹೈ-ವೋಲ್ಟೇಜ್ ಪಂದ್ಯವನ್ನು ಡಿಸ್ನಿ ಹಾಟ್ ಸ್ಟಾರ್ ಒಟಿಟಿಯಲ್ಲಿ 1.6 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಡಿಸ್ನಿ ಹಾಟ್ ಸ್ಟಾರ್ ಕ್ರಿಕೆಟ್ ಪಂದ್ಯಗಳನ್ನು ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. 2019ರ ಏಕದಿನ ವಿಶ್ವಕಪ್ ಬಳಿಕ ಎರಡು ತಂಡಗಳು ಮೊದಲ ಬಾರಿಗೆ 50 ಓವರ್ ಮಾದರಿಯಲ್ಲಿ ಮುಖಾಮುಖಿಯಾಗಿವೆ. ಐಪಿಎಲ್-16ರ ಫೈನಲ್ ಪಂದ್ಯವನ್ನು 3.2 ಕೋಟಿ ಜನ ವೀಕ್ಷಣೆ ಮಾಡಿದ್ದು ಗರಿಷ್ಠ ದಾಖಲೆಯಾಗಿದೆ.
ಇಶಾನ್- ಹಾರ್ದಿಕ್ ದಿಟ್ಟ ಬ್ಯಾಟಿಂಗ್: ಉಪನಾಯಕ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (87 ರನ್, 90 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ವಿಕೆಟ್ ಕೀಪರ್-ಎಡಗೈ ಬ್ಯಾಟರ್ ಇಶಾನ್ ಕಿಶನ್ (82 ರನ್, 81 ಎಸೆತ, 9 ಬೌಂಡರಿ, 2 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಮಳೆಬಾಧಿತ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಭಾರತ ತಂಡ 48.5 ಓವರ್‌ಗಳಲ್ಲಿ 266 ರನ್‌ಗಳಿಗೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆದರೆ, ಬಳಿಕ ಸುರಿದ ಭಾರಿ ಮಳೆಯಿಂದಾಗಿ ಪಾಕಿಸ್ತಾನಕ್ಕೆ ಚೇಸಿಂಗ್ ಮಾಡಲು ಅವಕಾಶ ಲಭಿಸಲಿಲ್ಲ. ಇದರಿಂದ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು ಮತ್ತು ಪಾಕಿಸ್ತಾನ ತಂಡದ ಸೂಪರ್-4 ಪ್ರವೇಶವೂ ಖಚಿತಗೊಂಡಿದೆ. ಭಾರತ ಸೂಪರ್-4ಗೆ ಏರಲು ನೇಪಾಳ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಾಗಿದೆ.