

IND vs PAK : ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಕಳೆದ ಭಾನುವಾರ (ಫೆ.23) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರತಕ್ಕೆ 241 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಟೀಮ್ ಇಂಡಿಯಾ ಕೇವಲ 42.3 ಓವರ್‌ಗಳಲ್ಲಿ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಅಲ್ಲದೆ, ಹಲವು ತಿಂಗಳುಗಳ ಬಳಿಕ ಅದರಲ್ಲೂ ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದ್ದು ಕೂಡ ಭಾರತೀಯ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಉಂಟುಮಾಡಿತು.
ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ನಿರ್ಗಮಿಸಿಲ್ಲ. ಆದರೆ, ಸೆಮಿಫೈನಲ್ ತಲುಪುವ ಸಾಧ್ಯತೆಗಳು ಬಹುತೇಕ ಪ್ರಶ್ನಾರ್ಹವಾಗಿವೆ. ಈಗಾಗಲೇ 1.087 ನೆಟ್ ರನ್ರೇಟ್ನೊಂದಿಗೆ ಸಂಕಷ್ಟದಲ್ಲಿರುವ ಪಾಕಿಸ್ತಾನ, ಸೆಮಿಫೈನ್ ತಲುಪಬೇಕಾದರೆ ಜಾದು ನಡೆಯಬೇಕಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಹೀನಾಯ ಸೋಲಿನ ಬಗ್ಗೆ ಅಲ್ಲಿನ ಕ್ರೀಡಾಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಪಾಕಿಸ್ತಾನಿ ಅಭಿಮಾನಿಯೊಬ್ಬರು ಐಸಿಸಿಗೆ ವಿಶೇಷ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾಕ್ ತಂಡವನ್ನು ಪ್ರತಿ ಬಾರಿಯೂ ಭಾರತೀಯ ತಂಡದೊಂದಿಗೆ ಒಂದೇ ಗುಂಪಿನಲ್ಲಿ ಇರಿಸಿ, ಮತ್ತೆ ಮತ್ತೆ ಸೋಲುವಂತೆ ಮಾಡಬಾರದು. ಈ ರೀತಿ ಮಾಡುವುದರಿಂದ ನಮಗೆ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ಪಾಕ್ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಪ್ರೀತಿಯ ಐಸಿಸಿ, ನಿಮ್ಮಲ್ಲಿ ನನ್ನದೊಂದು ವಿನಂತಿ ಇದೆ. ಅದೇನೆಂದರೆ, ದಯವಿಟ್ಟು ಪ್ರತಿ ಟೂರ್ನಮೆಂಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಬೇರೆ ಬೇರೆ ಗುಂಪುಗಳಲ್ಲಿ ಇರಿಸಿ. ಈ ಸೋಲುಗಳ ಅವಮಾನದಿಂದ ನಾವು ಮಾನಸಿಕವಾಗಿ ಸುಸ್ತಾಗಿದ್ದೇವೆ ಎಂದು ಪಾಕಿಸ್ತಾನ ಅಭಿಮಾನಿ ಸಿದ್ದಿಕ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಂದ ಹಣ ಗಳಿಸುವುದು ನಿಮ್ಮ ಗುರಿಯಾಗಿದ್ದರೆ, ಕನಿಷ್ಠ ಆ ಆದಾಯದ ಒಂದು ಭಾಗವನ್ನು ನಮಗೆ ನೀಡಿ ಮತ್ತು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಮಗೆ ಅವಕಾಶ ನೀಡಿ ಎಂದು ಸಿದ್ದಿಕ್ ವಿನಂತಿಸಿದ್ದಾರೆ.
ಪ್ರತಿ ಬಾರಿಯೂ ಸೋತಾಗ ಆಗುವ ಅವಮಾನ, ನಾವು ಸಹಿಸಲಾಗದ ಮಟ್ಟವನ್ನು ತಲುಪಿದೆ. ಇದರಿಂದ ನಮಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಸಿದ್ದಿಕ್ ಹೇಳಿದ್ದು, ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್)