ರಾಷ್ಟ್ರಗೀತೆ ಬದಲು ಪಾಪ್​ ಸಾಂಗ್​... ಮೈದಾನದಲ್ಲೇ ಪಾಕಿಸ್ತಾನಕ್ಕೆ ಭಾರಿ ಮುಖಭಂಗ, ವಿಡಿಯೋ ವೈರಲ್​! IND vs PAK

IND vs PAK
Published on

IND vs PAK : ಪ್ರತಿಷ್ಠಿತ ಏಷ್ಯಾ ಕಪ್-2025 ಭಾಗವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ (ಸೆ.14) ದುಬೈನಲ್ಲಿ ಮುಖಾಮುಖಿಯಾದವು. ಈ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತ ಪಾಕ್​ ವಿರುದ್ಧ ಸುಲಭವಾಗಿ ಜಯಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಈ ಪಂದ್ಯ ಆರಂಭವಾಗುವ ಮೊದಲೇ ಒಂದು ಎಡವಟ್ಟು ನಡೆದಿದ್ದು ಬಹುತೇಕ ಮಂದಿಗೆ ತಿಳಿದಿಲ್ಲ. ಅದೇನೆಂದರೆ, ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಯಿತು.

ಪಂದ್ಯದ ಆರಂಭಕ್ಕೂ ಮುನ್ನ ಎರಡೂ ತಂಡಗಳ ಆಟಗಾರರು ರಾಷ್ಟ್ರಗೀತೆ ಹಾಡುವುದು ವಾಡಿಕೆ. ಮೊದಲು, ಪಾಕಿಸ್ತಾನಿ ಆಟಗಾರರು ರಾಷ್ಟ್ರಗೀತೆ ಹಾಡಲು ಸಿದ್ಧರಾದರು. ಆದರೆ, ಪಂದ್ಯದ ಆಯೋಜಕರು ತಪ್ಪಾಗಿ ಪಂಜಾಬಿ-ಇಂಗ್ಲಿಷ್ ಪಾಪ್ ಹಾಡು ಜಲೇಬಿ ಬೇಜಿಯನ್ನು ಪ್ಲೇ ಮಾಡಿದ್ದಾರೆ. ಇದನ್ನು ಕೇಳಿದ ಪಾಕಿಸ್ತಾನಿ ಆಟಗಾರರು ಒಂದು ಕ್ಷಣ ಗೊಂದಲಕ್ಕೊಳಗಾದರು. ಆಯೋಜಕರು ತಮ್ಮ ತಪ್ಪನ್ನು ಅರಿತುಕೊಂಡ ತಕ್ಷಣ ಆರು ಸೆಕೆಂಡುಗಳ ಪಾಕಿಸ್ತಾನಿ ರಾಷ್ಟ್ರಗೀತೆಯನ್ನು ಪ್ಲೇ ಮಾಡಿದರು. ಈ ಒಂದು ಎಡವಟ್ಟಿನಿಂದ ಹೈವೋಲ್ಟೇಜ್​ ಪಂದ್ಯದಲ್ಲೇ ಪಾಕ್​ಗೆ ಮುಖಭಂಗವಾಯಿತು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಏಷ್ಯಾ ಕಪ್ ಟೂರ್ನಿ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಲ್ಪ ಅಂತರ ಕಾಯ್ದುಕೊಂಡ ಭಾರತ ಮತ್ತು ಪಾಕಿಸ್ತಾನ ತಂಡದ ನಾಯಕರಾದ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ, ಭಾನುವಾರ ನಡೆದ ಪಂದ್ಯದಲ್ಲೂ ಅದನ್ನೇ ಮುಂದುವರಿಸಿದರು. ಟಾಸ್ ಸಮಯದಲ್ಲಿ ಅವರಿಬ್ಬರು ಕೈಕುಲುಕಲಿಲ್ಲ. ಕನಿಷ್ಠ ಪಕ್ಷ, ಒಬ್ಬರನ್ನೊಬ್ಬರು ನೋಡದೆ ಟಾಸ್ ಪೂರ್ಣಗೊಳಿಸಿದರು. ಪಂದ್ಯದ ನಂತರವೂ ಎರಡೂ ತಂಡಗಳ ಆಟಗಾರರು ಕೈಕುಲುಕಲಿಲ್ಲ. ಉಭಯ ತಂಡದ ಆಟಗಾರರು ತಮ್ಮ ಪ್ರತ್ಯೇಕ ದಾರಿಯಲ್ಲಿ ಪೆವಿಲಿಯನ್​ ಕಡೆ ಸಾಗಿದರು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 127 ರನ್ ಗಳಿಸಿತು. ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ (40) ಮತ್ತು ಶಾಹೀನ್ ಶಾ ಅಫ್ರಿದಿ (ಔಟಾಗದೆ 33) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಭಾರತದ ಪರ ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಜಸ್​ಪ್ರೀತ್​ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಬಳಿಕ ಭಾರತ ತಂಡ 128 ರನ್​ಗಳ ಸಾಧಾರಣ ಗುರಿಯನ್ನು 15.5 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ತಲುಪಿತು. ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ (ಔಟಾಗದೆ 47), ಅಭಿಷೇಕ್ ಶರ್ಮ (31) ಮತ್ತು ತಿಲಕ್ ವರ್ಮಾ (31) ಉಪಯುಕ್ತ ರನ್​ ಕಾಣಿಕೆ ನೀಡಿದರು. ಪಾಕಿಸ್ತಾನ ಪರ ಸೈಮ್ ಅಯೂಬ್ ಮೂರು ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬರ ಬೌಲರ್​ ಕೂಡ ಖಾತೆ ತೆರೆಯಲಿಲ್ಲ. ಈ ಮೂಲಕ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತದ ಎದುರು ಪಾಕ್​ ಸುಲಭ ತುತ್ತಾಯಿತು. ಅಂದಹಾಗೆ, ಈ ಗೆಲುವನ್ನು ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್​ ಯಾದವ್​ ಭಾರತೀಯ ಸೇನೆಗೆ ಅರ್ಪಿಸಿದ್ದಾರೆ. ಇತ್ತೀಚೆಗೆ ಭಾರತೀಯ ಸೇನೆ ಪಹಲ್ಗಾಮ್​ ದಾಳಿಗೆ ಆಪರೇಷನ್​​ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಈ ಪಂದ್ಯ ಭಾರೀ ಕುತೂಹಲ ಹುಟ್ಟುಹಾಕಿತ್ತು. ಅಂತಿಮವಾಗಿ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಯುದ್ಧ ಭೂಮಿಯಲ್ಲಿ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ಇದೀಗ ಮೈದಾನದಲ್ಲೂ ಅವಮಾನ ಎದುರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net