

ನವದೆಹಲಿ: ಟಿ20 ಹಾಗೂ ಏಕದಿನ ಸರಣಿ ಮುಗಿಸಿ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ನ್ಯೂಜಿಲೆಂಡ್ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರಾದ ಮಹಮ್ಮದ್ ಶಮಿ ಮತ್ತು ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಅವರೊಡನೆ ತೆಗೆದುಕೊಂಡಿರುವ ಫೋಟೋವನ್ನು ಭಾನುವಾರ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೈದಾನದಿಂದಾಚೆಗೆ ವಿರಾಮದ ಸಮಯದಲ್ಲಿ ಕೊಹ್ಲಿ ಅವರು ಜಾಲತಾಣದಲ್ಲಿ ತಮ್ಮ ಉತ್ತಮ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇದೀಗ ಕೊಹ್ಲಿ ಶೇರ್ ಮಾಡಿರುವ ಫೋಟೋ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ನೆಟ್ಟಿಗರು ಬಗೆಬಗೆಯ ಮೀಮ್ಸ್ಗಳನ್ನು ಹರಿಬಿಡುವ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.
ಅಂಥದ್ದೇನಿದೆ ಫೋಟೋದಲ್ಲಿ ಅಂದರೆ ಕೊಹ್ಲಿ, ಶಮಿ ಮತ್ತು ಪೃಥ್ವಿ ವಿಲಕ್ಷಣ ಮುಖಭಾವದೊಂದಿಗೆ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ನಿಜಕ್ಕೂ ನೋಡಲು ಒಂದು ರೀತಿಯ ಕುಚೇಷ್ಟೆ ಮಾದರಿಯಲ್ಲಿದೆ. ಹೀಗಾಗಿ ಫೋಟೋ ನೋಡಿದ ನೆಟ್ಟಿಗರು ಸಹ ಮೀಮ್ಸ್ ಮೂಲಕ ಮತ್ತಷ್ಟು ವಿನೋದವನ್ನು ಬೆರೆಸಿದ್ದಾರೆ. ಹೀಗಾಗಿ ನೋಡುಗರಿಗೆ ಫೋಟೋ ಇಷ್ಟವಾಗದೇ ಇರದು. ಇನ್ನು ಫೋಟೋ ಕುರಿತು "ಹೊಸ ಪೋಸ್ಟ್, ಸುಂದರವಾದ ದೋಸ್ತ್" ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ಆದರೆ, 3 ಪಂದ್ಯಗಳ ಏಕದಿನ ಸರಣಿಯನ್ನು ಕೈಚೆಲ್ಲಿದ್ದು, ಫೆ. 21 ರಿಂದ 24ರವರೆಗೂ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. (ಏಜೆನ್ಸೀಸ್)