ಭಾರತ ತಂಡ 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕಿವೀಸ್ ವಿರುದ್ಧ ಗೆದ್ದಿಲ್ಲ!

ind vs new web2
Published on

ಸೌಥಾಂಪ್ಟನ್: ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಸೆಣಸಲಿದೆ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರಾಸೆ ಅನುಭವಿಸಿದ್ದ ಭಾರತ ತಂಡಕ್ಕೆ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವಿದೆ.

ಭಾರತ ತಂಡ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆದ್ದಿರುವುದು 2003ರ ಏಕದಿನ ವಿಶ್ವಕಪ್‌ನಲ್ಲಿ ಆಗಿದೆ. ಆ ಬಳಿಕ 2007, 2016ರ ಟಿ20 ವಿಶ್ವಕಪ್ ಲೀಗ್ ಪಂದ್ಯ ಮತ್ತು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕಿವೀಸ್‌ಗೆ ಶರಣಾಗಿದೆ. ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲೂ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 0-2ರಿಂದ ಭಾರತ ಸೋತಿತ್ತು.

ಒಟ್ಟಾರೆಯಾಗಿ ಐಸಿಸಿ ಟೂರ್ನಿಯ 11 ಮುಖಾಮುಖಿಗಳಲ್ಲಿ ಭಾರತ 3ರಲ್ಲಿ ಮಾತ್ರ ಜಯಿಸಿದೆ. ಅದು 2003ರ ಏಕದಿನ ವಿಶ್ವಕಪ್ ಮತ್ತು 1987ರ ಏಕದಿನ ವಿಶ್ವಕಪ್‌ನ 2 ಲೀಗ್ ಪಂದ್ಯಗಳಾಗಿವೆ. ಇದರ ಹೊರತಾಗಿ 1975, 1979, 1992, 1999ರ ಏಕದಿನ ವಿಶ್ವಕಪ್ ಲೀಗ್ ಪಂದ್ಯಗಳು ಮತ್ತು 2000ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದೆ.

ವಿಶ್ವ ನಂ. 1 ಪಟ್ಟಕ್ಕೂ ಕದನ

ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟದೊಂದಿಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. ಪಟ್ಟಕ್ಕೂ ಈ ಪಂದ್ಯದಲ್ಲಿ ಸ್ಪರ್ಧೆ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನವಷ್ಟೇ 121 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದಿರುವ ಭಾರತ ಪಂದ್ಯ ಗೆದ್ದರೆ 124 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದ್ದು, ಕಿವೀಸ್ 121 ಅಂಕದೊಂದಿಗೆ 2ನೇ ಸ್ಥಾನಕ್ಕಿಳಿಯಲಿದೆ. ಸದ್ಯ 123 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಕಿವೀಸ್ ಡ್ರಾ ಸಾಧಿಸಿದರೂ ಇಷ್ಟೇ ಅಂಕದೊಂದಿಗೆ ಸ್ಥಾನ ಕಾಯ್ದುಕೊಳ್ಳಲಿದೆ. ಗೆದ್ದರೆ 126 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net