

IND vs ENG: ನಿನ್ನೆ (ಜ.28) ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆಂಗ್ಲರ ಪಡೆ 26 ರನ್ಗಳ ಅಂತರದಲ್ಲಿ ಜಯ ಸಾಧಿಸಿತು. ಪ್ರಸ್ತುತ 2-1 ಅಂತರದಲ್ಲಿ ಸಾಗಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೂರನೇ ಮ್ಯಾಚ್ ಗೆಲುವು ಇಂಗ್ಲೆಂಡ್ ಪಾಲಾಯಿತು. ಈ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿಗೆ ಕ್ರಿಕೆಟ್ ಪ್ರೇಮಿಗಳು ಹಾಗೂ ಮಾಜಿ ಕ್ರಿಕೆಟಿಗರು ತೀವ್ರ ಕಿಡಿಕಾರಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ಇಂಗ್ಲೆಂಡ್ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿದ ಇಂಗ್ಲೆಂಡ್, ಭಾರತಕ್ಕೆ 172 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಅಂತಿಮವಾಗಿ ಗೆಲುವಿನ ದಡ ಸೇರುವಲ್ಲಿ ಮುಗ್ಗರಿಸಿತು. ಈ ವೇಳೆ 18ನೇ ಓವರ್ನಲ್ಲಿ ಬ್ಯಾಟಿಂಗ್ಮಾಡುತ್ತಿದ್ದ ಧ್ರುವ್ ಜ್ಯುರೆಲ್, ಒಂದು ರನ್ಗೆ ಬರುವಂತೆ ನಾನ್ ಸ್ಟ್ರೈಕರ್ನಲ್ಲಿದ್ದ ಹಾರ್ದಿಕ್ಗೆ ಸೂಚಿಸಿದರು. ಆದ್ರೆ, ಇದಕ್ಕೆ ಪಾಂಡ್ಯ ಕೊಟ್ಟ ಉತ್ತರ ಸದ್ಯ ಹಲವರನ್ನು ಕೆರಳಿಸಿದೆ.
ಟೀಮ್ ಇಂಡಿಯಾ ಪರ ಹಾರ್ದಿಕ್ ಹೆಚ್ಚು ರನ್ ಗಳಿಸಿದ್ದೇ ಆದರೂ ತನ್ನ ಮಂದಗತಿಯ ಆಟ ಹಾಗೂ ಧ್ರುವ್ ಜ್ಯುರೆಲ್ ಮಾತಿಗೆ ಒಪ್ಪದೆ ಹೋಗಿದ್ದು ಸದ್ಯ ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಅಸಮಾಧಾನಕ್ಕೆ ಕಾರಣವಾಗಿದೆ. "18ನೇ ಓವರ್ನ ಕೊನೆಯಲ್ಲಿ ಒಂದು ರನ್ ಓಡಲು ನಿರಾಕರಿಸಿದ ಹಾರ್ದಿಕ್, ಅದೇ 19ನೇ ಓವರ್ನ ಮೊದಲ ಬಾಲ್ನಲ್ಲೇ ಕ್ಯಾಚ್ ಕೊಟ್ಟು ಔಟಾದರು. ಇದರಿಂದ ಏನು ಪ್ರಯೋಜನ? ಒಂದೇ ಒಂದು ರನ್ ಓಡಲು ಆಗಲ್ಲ ಅಂತ ನೀವು ಹೇಳ್ತೀರಿ? ಧ್ರುವ್ ಜುರೆಲ್ ಬೌಂಡರಿಗಳನ್ನು ಹೊಡೆಯಬಲ್ಲ ಉತ್ತಮ ಬ್ಯಾಟರ್. ಹೀಗಿರುವಾಗ ಹಾರ್ದಿಕ್ ಖಂಡಿತ ತಪ್ಪು" ಎಂದು ರಾಯುಡು ಹೇಳಿದರು.
“ತನ್ನದೇ ತಂಡದ ಮತ್ತೊಬ್ಬ ಆಟಗಾರನಾದ ಜುರೆಲ್ ಮೇಲೆ ಹಾರ್ದಿಕ್ ನಂಬಿಕೆ ಇಡಬೇಕಿತ್ತು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅದ್ಭುತವಾದ ಶಾಟ್ಗಳನ್ನು ಆಡುವ ಸಾಮರ್ಥ್ಯ ಅವರಿಗಿದೆ. ಅಸಲಿಗೆ ಧ್ರುವ್ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಹಾರ್ದಿಕ್ರಿಂದ ಇದು ನಿಜಕ್ಕೂ ಒಳ್ಳೆಯ ನಡೆಯಲ್ಲ. ಈ ಬಗ್ಗೆ ಆತ ಶೀಘ್ರವೇ ಉತ್ತರಿಸಬೇಕು ” ಎಂದು ರಾಯುಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).