ಗುರಿ ತಲುಪಲು ಇಂಗ್ಲೆಂಡ್​ ಬ್ಯಾಟರ್​​ಗಳ ಪರದಾಟ; ತಂಡದಲ್ಲಿ ಬುಮ್ರಾ ಸ್ಥಾನ ತುಂಬಿದ ಆಕಾಶ್ ದೀಪ್​ | IND vs ENG

ವಿಜಯವಾಣಿ - 2025-07-04T085250.882
Published on

IND vs ENG: ನಿನ್ನೆ (ಜು.03) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ದಾಖಲಿಸಿದರು. ಭಾರತ ತಂಡದ ನಾಯಕನಾಗಿ, ಅತ್ಯುತ್ತಮ ಬ್ಯಾಟರ್​ ಆಗಿಯೂ ಕಾಣಿಸಿಕೊಂಡ ಗಿಲ್, ಟೆಸ್ಟ್‌ ಫಾರ್ಮೆಟ್​ನಲ್ಲಿ ದಾಖಲಿಸಿದ ಮೊದಲ ದ್ವಿಶತಕ ಇದಾಯಿತು. 311 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಯುವ ಕ್ಯಾಪ್ಟನ್​, ತಂಡದ ಒಟ್ಟು ಮೊತ್ತವನ್ನು 587ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎರಡನೇ ದಿನದ (ಗುರುವಾರ) ಅಂತ್ಯದ ವೇಳೆಗೆ ಇಂಗ್ಲೆಂಡ್ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್​ ಪ್ರಿಯರ ಹುಬ್ಬೇರಿಸಿದರೆ, ಭಾರತ ನೀಡಿದ ಬೃಹತ್​ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆಕಾಶ್ ದೀಪ್ ದುಃಸ್ವಪ್ನದಂತೆ ಕಾಡಿದರು. ಬೌಲಿಂಗ್‌ನಲ್ಲಿ ತಂಡದ ಪರ ಕಮಾಲ್ ಮಾಡಿದ ಆಕಾಶ್​, ಆರಂಭಿಕ ಹಂತದಲ್ಲೇ ಇಬ್ಬರು ಬಲಿಷ್ಠ ಬ್ಯಾಟರ್​ಗಳ ವಿಕೆಟ್​ ಕಿತ್ತು ಸಂಭ್ರಮಿಸಿದರು. ಈ ಮೂಲಕ ತಂಡದಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಅವರ ಸ್ಥಾನವನ್ನು ತುಂಬಿದರು.

ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ, ಟೀಮ್ ಇಂಡಿಯಾ 587 ರನ್‌ಗಳಿಗೆ ಆಲೌಟ್ ಆಯಿತು. ಶುಭಮನ್​ ಗಿಲ್ ಭರ್ಜರಿ ಬ್ಯಾಟಿಂಗ್ ಮೂಲಕ 269 ರನ್ ಬಾರಿಸಿದರು. ಇದರಲ್ಲಿ 30 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿವೆ. ಎರಡನೇ ದಿನದ ಎರಡನೇ ಸೆಷನ್ ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಸರಣಿ ಹಿನ್ನಡೆ ಅನುಭವಿಸಿದೆ. ವಿಶೇಷವಾಗಿ, ಬುಮ್ರಾ ಅನುಪಸ್ಥಿತಿಯಲ್ಲಿ ಅಂತಿಮ ತಂಡಕ್ಕೆ ಎಂಟ್ರಿಕೊಟ್ಟ ಆಕಾಶ್ ದೀಪ್, ತಮ್ಮ ಅದ್ಭುತ ಬೌಲಿಂಗ್ ಮೂಲಕ ಇಂಗ್ಲೆಂಡ್​ನ ಸ್ಟಾರ್​ ಬ್ಯಾಟರ್​ಗಳಿಗೆ ಆಘಾತ ನೀಡಿದರು. ದೀಪ್​ ಬೆನ್ನಲ್ಲೇ ಮೊಹಮ್ಮದ್​ ಸಿರಾಜ್ ಕೂಡ ತಂಡದ ಪರ ಮಿಂಚಿದ್ದು, ಒಂದು ವಿಕೆಟ್​ ಕಬಳಿಸಿದ್ದಾರೆ.

ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಬೆನ್ ಡಕೆಟ್ (0) ಮತ್ತು ಓಲಿ ಪೋಪ್ (0) ಅವರನ್ನು ಡಕ್ಔಟ್ ಮಾಡುವ ಮೂಲಕ ಆಕಾಶ್ ದೀಪ್​ ಇಂಗ್ಲೆಂಡ್​ಗೆ ಆಘಾತ ತಂದೊಡ್ಡಿದ್ದಾರೆ. ಮೂರನೇ ಸ್ಲಿಪ್‌ನಲ್ಲಿ ಗಿಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಡಕೆಟ್ ಪೆವಿಲಿಯನ್ ಹಿಡಿಯಬೇಕಾಯಿತು. ಇನ್ನು ಓಲಿ ಪೋಪ್ ಫ್ಲಿಕ್ ಶಾಟ್ ಆಡಿದ ರೀತಿಗೆ ಚೆಂಡು ಬ್ಯಾಟ್‌ನ ತುದಿಗೆ ತಗುಲಿ, ಎರಡನೇ ಸ್ಲಿಪ್‌ನಲ್ಲಿ ನೇರವಾಗಿ ಕೆ.ಎಲ್. ರಾಹುಲ್ ಕೈಗೆ ಹೋಯಿತು. ಇದರೊಂದಿಗೆ, ಇಂಗ್ಲೆಂಡ್ ಕೇವಲ 13 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಿರಾಜ್ ಮತ್ತು ದೀಪ್ ವಿಕೆಟ್​ ಕಬಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net