

ಆಸ್ಟ್ರೇಲಿಯಾ: ಇಂದು (ಅ.25) ಸಿಡ್ನಿಯಲ್ಲಿ ನಡೆಯುತ್ತಿರುವ ಆತಿಥೇಯ ಆಸೀಸ್ (IND vs AUS) ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 'ರೋಕೊ' ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಸತತ ಎರಡು ಪಂದ್ಯಗಳಲ್ಲಿ ಡಕ್ಔಟ್ ಆದ ಬಳಿಕ ಇದೀಗ ವಿರಾಟ್ ಆಕರ್ಷಕ ಅರ್ಧಶತಕ (62*) ಬಾರಿಸಿದರು. ಇನ್ನು ಕ್ರೀಸ್ಗೆ ಅಂಟಿ ನಿಂತ ರೋಹಿತ್ ಶರ್ಮ (108*), ಭರ್ಜರಿ ಶತಕ ದಾಖಲಿಸುವ ಮೂಲಕ ದಾಖಲೆಗಳ ಪಟ್ಟಿಗೆ ಮತ್ತೊಮ್ಮೆ ತಮ್ಮ ಹೆಸರನ್ನು ಸೇರಿಸಿದ್ದಾರೆ.
ಆಸೀಸ್ ವಿರುದ್ಧ ಎರಡು ಪಂದ್ಯಗಳಲ್ಲಿ ಒಂದೇ ಒಂದು ರನ್ ಕಲೆಹಾಕಲು ತೀರ ಪರದಾಡಿದ ವಿರಾಟ್ ಕೊಹ್ಲಿ, ಇಂದಿನ ಪಂದ್ಯದಲ್ಲಿ ಎಲ್ಲರ ಹುಬ್ಬೇರಿಸುವ ಪ್ರದರ್ಶನವನ್ನೇ ನೀಡಿದರು. ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ಬ್ಯಾಕ್ ಮಾಡಿದ ವಿರಾಟ್, ಎರಡು ಪಂದ್ಯಗಳಲ್ಲಿ ತೋರಿದ ಕಳಪೆ ಪ್ರದರ್ಶನದಿಂದ ನಿವೃತ್ತಿ ಪ್ರಶ್ನೆಗಳಿಗೆ ತುತ್ತಾಗಿದ್ದರು. ಆದರೆ, ಇಂದಿನ ಪಂದ್ಯದಲ್ಲಿ ರೋಹಿತ್ ಜತೆಗೂಡಿ ತೋರಿದ ಉತ್ತಮ ಪ್ರದರ್ಶನಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 46.4 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್ ಆಯಿತು. ಮ್ಯಾಟ್ ರೆನ್‌ಶಾ (56 ರನ್, 58 ಎಸೆತಗಳಲ್ಲಿ 2 ಬೌಂಡರಿ) ಆಸೀಸ್ ಪರ ಅರ್ಧಶತಕ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಕ್ಯಾಪ್ಟನ್ ಶುಭ್‌ಮನ್ ಗಿಲ್, ಕೇವಲ 24 ರನ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಗಿಲ್ ವಿಕೆಟ್ ಬೆನ್ನಲ್ಲೇ ರೋಹಿತ್ ಜತೆ ಅಖಾಡಕ್ಕಿಳಿದ ಕೊಹ್ಲಿ, ಆಕರ್ಷಕ ಅರ್ಧಶತಕ ಬಾರಿಸಿದರು. ಈ ಖುಷಿಯಲ್ಲಿ ಕೊಹ್ಲಿ ಕೊಟ್ಟ ರಿಯಾಕ್ಷನ್ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).