

ನವದೆಹಲಿ: ಇದೇ ಅ.19ರಿಂದ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿರುವ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ (IND vs AUS ODI ) ಎದುರು ಭರ್ಜರಿ ಪ್ರದರ್ಶನ ನೀಡಿ, ಸರಣಿ ವಶಪಡಿಸಿಕೊಳ್ಳಲು ಪಣತೊಟ್ಟಿರುವ ಆಸೀಸ್ಗೆ ಇಬ್ಬರ ಬಳಿಕ ಮತ್ತೊಬ್ಬ ಸ್ಟಾರ್ ಆಟಗಾರನ ಅಲಭ್ಯತೆ ಕಾಡಿದೆ.
ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಇಂಜುರಿಯಿಂದ ಬಳಲುತ್ತಿರುವ ಹಿನ್ನೆಲೆ ಅವರನ್ನು ಏಕದಿನ ಸರಣಿಯಿಂದ ಕೈಬಿಡಲು ಆಸ್ಟ್ರೇಲಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ವೇಳೆ ಗ್ರೀನ್ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಸರಣಿ ಆಡುವ ಭರವಸೆ ನೀಡಲು ಅಸಾಧ್ಯವಾಗಿದೆ. ಫಿಟ್ನೆಸ್ ಸಮಸ್ಯೆಯಿಂದ ಹಲವು ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದ ಗ್ರೀನ್, ಈ ವರ್ಷದ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡಕ್ಕೆ ಮರಳಿದರು. ಆದರೀಗ, ಭಾರತ ವಿರುದ್ಧ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಮೂರನೇ ಆಟಗಾರನ ಅಲಭ್ಯತೆ ಕಂಡ ಆಸ್ಟ್ರೇಲಿಯಾ ಮ್ಯಾನೇಜ್ಮೆಂಟ್, ಗ್ರೀನ್ ಬದಲಿಗೆ ಸ್ಟಾರ್ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ, ಏಕದಿನ ಪಂದ್ಯಗಳಿಗೆ ಲ್ಯಾಬುಸ್ಚಾಗ್ನೆರನ್ನು ಆಯ್ಕೆಗಾರರು ಆರಂಭದಲ್ಲಿ ಆಯ್ಕೆ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು. ಆದಾಗ್ಯೂ, ಇತ್ತೀಚಿನ ದೇಶೀಯ ಏಕದಿನ ಪಂದ್ಯಾವಳಿಗಳಲ್ಲಿ ಅವರ ಉತ್ತಮ ಪ್ರದರ್ಶನದ ಮೇರೆಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಈಗಾಗಲೇ ಏಕದಿನ ಮತ್ತು ಟಿ20 ಸರಣಿ ಎರಡಕ್ಕೂ ಪ್ರತ್ಯೇಕ ತಂಡಗಳನ್ನು ಭಾರತ ಮತ್ತು ಆಸ್ಟ್ರೇಲಿಯಾ ಘೋಷಿಸಿವೆ. ಆದಾಗ್ಯೂ, ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ತಂಡದಿಂದ ಸ್ಟಾರ್ ಆಟಗಾರರಾದ ಜೋಶ್ ಇಂಗ್ಲಿಸ್ ಮತ್ತು ಆ್ಯಡಮ್ ಜಂಪಾ ಹೊರಗುಳಿದಿದ್ದಾರೆ. ಇವರಿಬ್ಬರ ಸ್ಥಾನಕ್ಕೆ ಮ್ಯಾಥ್ಯೂ ಕುಹ್ನೆಮನ್ ಮತ್ತು ಜೋಶ್ ಫಿಲಿಪ್ಸ್ರನ್ನು ತರಲಾಗಿದೆ. ಈ ಬಗ್ಗೆ ಆಸ್ಟ್ರೇಲಿಯಾ ಕೋಚ್ ಸ್ಪಷ್ಟಪಡಿಸಿದ್ದಾರೆ.
ಮೊದಲ ಏಕದಿನ: ಅ.19 (ಪರ್ತ್)
ಎರಡನೇ ಏಕದಿನ: ಅ.23 (ಅಡಿಲೇಡ್)
ಮೂರನೇ ಏಕದಿನ: ಅ.25 (ಸಿಡ್ನಿ)