ಕೈ ಜಾರಿದ ನಾಯಕತ್ವ... ಅಭ್ಯಾಸದ ನಡುವೆ ಗಂಭೀರ್​-ರೋಹಿತ್ ಮಧ್ಯೆ ನಡೆದ ಚರ್ಚೆಯೇನು? IND vs AUS

IND vs AUS
Published on

ಪರ್ತ್​ : ಭಾರತ ಮತ್ತು ಆಸ್ಟ್ರೇಲಿಯಾ ( IND vs AUS ) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಭಾನುವಾರ (ಅ. 19) ದಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದ್ದು, ಈಗಾಗಲೇ ಟೀಮ್​ ಇಂಡಿಯಾ ಅಲ್ಲಿನ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ. ಗುರುವಾರ (ಅ.16) ಭಾರತ ತಂಡವು WACA ಕ್ರೀಡಾಂಗಣದಲ್ಲಿ ತನ್ನ ಮೊದಲ ಅಭ್ಯಾಸ ಅವಧಿಯನ್ನು ನಡೆಸಿತು.

ಈ ಸರಣಿಗೂ ಮುನ್ನವೇ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಅದೇನೆಂದರೆ, ಟೀಮ್​ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಬಳಿಕ ಹಿರಿಯ ಆಟಗಾರ ರೋಹಿತ್ ಶರ್ಮ ಅವರನ್ನು ಏಕದಿನ ನಾಯಕತ್ವದ ಜವಾಬ್ದಾರಿಯಿಂದ ಬಿಸಿಸಿಐ ಮುಕ್ತಗೊಳಿಸಿದೆ. ಯುವ ಆಟಗಾರ ಮತ್ತು ಟೆಸ್ಟ್ ನಾಯಕ ಶುಭಮಾನ್ ಗಿಲ್ ಅವರಿಗೆ ಏಕದಿನ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆಸೀಸ್ ವಿರುದ್ಧ ತಂಡವನ್ನು ಘೋಷಿಸುವಾಗ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ನಿನ್ನೆ ನಡೆದ ಅಭ್ಯಾಸದ ವೇಳೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತೀವ್ರ ಚರ್ಚೆ ನಡೆಸಿದರು. ಸುಮಾರು 30 ನಿಮಿಷಗಳ ನಂತರ, ರೋಹಿತ್​ ಶರ್ಮ ಅವರು ಬೌಂಡರಿ ಲೈನ್‌ನಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಗಹನವಾದ ಚರ್ಚೆ ನಡೆಸಿದರು. ರೋಹಿತ್​ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಇಬ್ಬರ ನಡುವಿನ ಮೊದಲ ಭೇಟಿ ಇದಾಗಿದ್ದು, ಅವರಿಬ್ಬರ ಮಾತುಕತೆ ಎಲ್ಲರ ಗಮನವನ್ನು ಸೆಳೆಯಿತು.

ಇನ್ನು ರೋಹಿತ್​ ಮತ್ತು ಗಂಭೀರ್​ ಅವರು ಯಾವ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಆಸೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುವುದು ಹೇಗೆ ಎಂಬುದರ ಬಗ್ಗೆ ಅವರಿಬ್ಬರು ಚರ್ಚಿಸಿರುವಂತೆ ಕಾಣುತ್ತದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಇಬ್ಬರೂ ಟೆಸ್ಟ್ ಮತ್ತು ಟಿ20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರಿಬ್ಬರು ವಿಫಲವಾದರೆ, ಏಕದಿನ ಪಂದ್ಯಗಳಿಗೂ ಅವರಿಬ್ಬರು ವಿದಾಯ ಹೇಳಬೇಕಾಗುತ್ತದೆ ಎಂದು ಅನೇಕ ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಹೇಗೆ ಆಡುತ್ತಾರೆ ಎಂಬುದರ ಮೇಲೆ ಎಲ್ಲರ ಗಮನವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net