

Team India : ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಅದೇನೆಂದರೆ, ಸ್ಟಾರ್ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಗಾಯದಿಂದಾಗಿ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಹೆಡ್ ಅವರು ಪ್ರಸ್ತುತ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಗಾಯಕ್ಕೆ ಒಳಗಾದರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಫೀಲ್ಡಿಂಗ್‌ಗೆ ಸಹ ಬರಲಿಲ್ಲ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಹೆಡ್ ಅವರು ನಾಲ್ಕನೇ ಟೆಸ್ಟ್‌ಗೂ ಮುನ್ನ ನಡೆಯುವ ಅಭ್ಯಾಸದ ವೇಳೆ ಕಾಣಿಸಿಕೊಂಡಿಲ್ಲ. ಮಂಗಳವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ. ತಮ್ಮ ಮೊದಲ ಮೂರು ಟೆಸ್ಟ್‌ಗಳಲ್ಲಿ ಎರಡು ಶತಕಗಳನ್ನು ಗಳಿಸಿರುವ ಹೆಡ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.
ಒಂದು ವೇಳೆ ಹೆಡ್ ಬಾಕ್ಸಿಂಗ್ ಡೇ ಟೆಸ್ಟ್ ತಪ್ಪಿದರೆ ಆಸೀಸ್‌ಗೆ ನಿಜವಾದ ಹೊಡೆತ ಬೀಳಲಿದೆ. ಭಾರತಕ್ಕೆ ಇದು ಪ್ಲಸ್ ಪಾಯಿಂಟ್ ಆಗಲಿದೆ. ಮತ್ತೊಂದೆಡೆ, ಜೋಶ್ ಹ್ಯಾಸಲ್‌ವುಡ್ ಕೂಡ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ.
ಟೆಸ್ಟ್ ವಿಚಾರಕ್ಕೆ ಬರುವುದಾದರೆ, ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮೂರು ಪಂದ್ಯಗಳ ನಂತರ 1-1 ಸಮಬಲದಲ್ಲಿವೆ. ಮೊದಲ ಪಂದ್ಯದಲ್ಲಿ ಭಾರತ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸೀಸ್ ಗೆದ್ದಿತ್ತು. ಮೂರನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಎಲ್ಲರ ಕಣ್ಣು ಬಾಕ್ಸಿಂಗ್ ಡೇ ಟೆಸ್ಟ್ ಮೇಲೆ ನೆಟ್ಟಿದೆ. ಉಭಯ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿವೆ. (ಏಜೆನ್ಸೀಸ್)