

ನವದೆಹಲಿ: ಬ್ರಿಸ್ಬೇನ್ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮಳೆರಾಯನ ಅಡ್ಡಿಯಿಂದ ಡ್ರಾನಲ್ಲಿ (Match Draw) ಮುಕ್ತಾಯಗೊಂಡಿದೆ.
ಟೀಮ್ ಇಂಡಿಯಾ ಗೆಲುವಿಗೆ 275 ರನ್ಗಳ ಅಗತ್ಯವಿತ್ತು. ಹೀಗಿರುವಾಗಲೇ ಇಂದು ಬ್ಯಾಟಿಂಗ್ಗೆ ಇಳಿದಿದ್ದ ಭಾರತಕ್ಕೆ ವರುಣನ ಅಡಚಣೆ ಉಂಟಾಯಿತು. ಮಳೆರಾಯನ ಅಡ್ಡಿ ಹಿನ್ನಲೆ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಇದೀಗ ರದ್ದುಗೊಳಿಸಲಾಗಿದೆ.
275 ರನ್ ಗುರಿಯನ್ನು ಬೆನ್ನತ್ತಿದ್ದ ಟೀಮ್ ಇಂಡಿಯಾ ಕೇವಲ 8 ರನ್ ಗಳಿಸಿದ್ದ ವೇಳೆಗೆ ಮಳೆರಾಯನ ಅಬ್ಬರ ಶುರುವಾಯಿತು. ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿರುವುದು ಸದ್ಯ ಮುಂದಿನ ಪಂದ್ಯಗಳ ಮೇಲೆ ಒತ್ತಡ ಹೆಚ್ಚಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್ ಪಂದ್ಯಗಳಲ್ಲಿ ಎರಡು ತಂಡ ತಲಾ ಒಂದೊಂದು ಪಂದ್ಯವನ್ನು ಗೆದ್ದು ಮೂರನೇ ಟೆಸ್ಟ್ಗೆ ಕಾಲಿಟ್ಟಿತ್ತು. ಆದರೆ, ಮ್ಯಾಚ್ ಡ್ರಾ ಆಗಿರುವುದು ಎರಡು ಟೀಮ್ಗಳಿಗೂ ಸವಾಲು ಎಸೆದಂತಾಗಿದೆ.
ಮುಂದಿನ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪಲು ಟೀಮ್ ಇಂಡಿಯಾಗೆ ಈಗ ಗೆಲುವಿನ ಅನಿವಾರ್ಯ ಎದುರಾಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮ ಪಡೆ ವಿರುದ್ಧ ಬ್ಯಾಟ್ ಮಾಡಿದ ಆಸೀಸ್, ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ 445 ರನ್ ಗಳಿಸಿ ಆಲೌಟ್ ಆದರು. ಇನ್ನು ಈ ಇನ್ನಿಂಗ್ಸ್ನಲ್ಲಿ ತಂಡದ ಪರ ಟ್ರಾವಿಸ್ ಹೆಡ್ (152) ರನ್ ಮತ್ತು ಸ್ಟೀವ್ ಸ್ಮಿತ್ (101) ಶತಕ ದಾಖಲಿಸಿದರು.
ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗಿ ಜಸ್ಪ್ರೀತ್ ಬುಮ್ರಾ, ಫಸ್ಟ್ ಇನ್ನಿಂಗ್ಸ್ ಅಂತ್ಯಕ್ಕೆ 6 ವಿಕೆಟ್ ಪಡೆದುಕೊಂಡರು. ಇನ್ನು ಬ್ಯಾಟಿಂಗ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಆಕರ್ಷಕ ಅರ್ಧಶತಕ (84) ಗಳಿಸಿದರೆ, ರವೀಂದ್ರ ಜಡೇಜಾ (77) ರನ್ ಕಲೆಹಾಕಿದರು.
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 260 ರನ್ಗೆ ಆಲ್ಔಟ್ ಆಗಿ ಪೆವಿಲಿಯನ್ ಸೇರಿತು. ಅದಾದ ಬಳಿಕ ಎರಡನೇ ಇನ್ನಿಂಗ್ಸ್ನಲ್ಲಿ 275 ರನ್ಗಳ ಗುರಿಯನ್ನು ಸ್ವೀಕರಿಸಿದ ಟೀಮ್ ಇಂಡಿಯಾ ಟೆಸ್ಟ್ನ ಐದನೇ ದಿನದಂದು 8 ರನ್ ಗಳಿಸುವ ಮೂಲಕ ಗುರಿ ಬೆನ್ನಟ್ಟಿತು. ಆದರೆ, ವರುಣನ ಬೆಂಬಿಡದ ಅಡಚಣೆಯಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದು ಕ್ರಿಕೆಟ್ ಪ್ರಿಯರಲ್ಲಿ ಬೇಸರ ಮೂಡಿಸಿದೆ. ಎರಡು ತಂಡಗಳಿಗೆ ಗೆಲುವಿನ ಒತ್ತಡ ಹೇರಿದೆ.